ಕೋಚಿಂಗ್ ತೊರೆಯುವುದನ್ನು ತಡೆದ ʻರೋʼ ಫೋನ್ ಕರೆ: ರಾಹುಲ್ ದ್ರಾವಿಡ್
ಏಕ ದಿನ ವಿಶ್ವಕಪ್ ಸೋಲಿನ ನಂತರ ಕೋಚ್ ಆಗಿ ಮುಂದುವರಿಯಲು ಮನವೊಲಿಸಿದ ರೋಹಿತ್ ಶರ್ಮಾ ಅವರಿಗೆ ದ್ರಾವಿಡ್, ಧನ್ಯವಾದ ಹೇಳಿದರು. ಇಲ್ಲವಾದರೆ, ತಾವು ತಂಡದ ಚಾರಿತ್ರಿಕ ಪ್ರಯಾಣದ ಭಾಗವಾಗಿ ಇರುತ್ತಿರಲಿಲ್ಲ ಎಂದರು.
ಏಕ ದಿನ ವಿಶ್ವಕಪ್ ಫೈನಲ್ ಸೋಲಿನ ನಂತರ ಉಳಿಯುವಂತೆ ಒತ್ತಾಯಿಸಿ, ಭಾರತದ ನಾಯಕ ರೋಹಿತ್ ಶರ್ಮಾ ಅವರು ಫೋನ್ ಮಾಡದೆ ಇದ್ದಿದ್ದರೆ ತಂಡದ ಚಾರಿತ್ರಿಕ ಪ್ರಯಾಣದ ಭಾಗವಾಗಿ ಇರುತ್ತಿರಲಿಲ್ಲ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
10 ಪಂದ್ಯಗಳ ಗೆಲುವಿನ ಹೊರತಾಗಿಯೂ, ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋಲುಂಡಿತು. ಆನಂತರ ದ್ರಾವಿಡ್ ಅವರ ಏಕ ದಿನ ಪಂದ್ಯ ಗಳ ಕೋಚಿಂಗ್ ಅಧಿಕಾರಾವಧಿ ಕೊನೆಗೊಂಡಿತು. ಆದರೆ, ಟಿ20 ವಿಶ್ವಕಪ್‌ನ ಅಂತ್ಯದವರೆಗೆ ವಿಸ್ತರಣೆ ಸಿಕ್ಕಿತು. ದೇಶದ ಎರಡನೇ ಟಿ 20 ವಿಶ್ವಕಪ್ ಗೆಲುವಿನ ನಂತರ ದ್ರಾವಿಡ್, ಕೋಚ್ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿಲ್ಲ.
ಶನಿವಾರ ದಕ್ಷಿಣ ಆಫ್ರಿಕದ ವಿರುದ್ಧದ ಫೈನಲ್‌ನಲ್ಲಿ ತಂಡ ಏಳು ರನ್ ಜಯ ಗಳಿಸಿದ ನಂತರ ಕೆನ್ಸಿಂಗ್ಟನ್ ಓವಲ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿದ ಭಾಷಣದಲ್ಲಿ ಕೋಚ್ ಆಗಿ ಮುಂದುವರಿಯುವಂತೆ ರೋಹಿತ್ ಹೇರಿದ ಒತ್ತಾಯವನ್ನು ಪ್ರಸ್ತಾಪಿಸಿದರು.
'ಧನ್ಯವಾದ ರೋ': ʻನವೆಂಬರ್‌ನಲ್ಲಿ ನನಗೆ ಕರೆ ಮಾಡಿ, ಮುಂದುವರಿಯಲು ಕೇಳಿದ್ದಕ್ಕಾಗಿ ತುಂಬ ಧನ್ಯವಾದಗಳು ರೋಹಿತ್,ʼ ಎಂದು ಮಂಗಳವಾರ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ದ್ರಾವಿಡ್ ಹೇಳಿದ್ದಾರೆ.
ʻನಿಮ್ಮೆಲ್ಲರೊಂದಿಗೆ ಕೆಲಸ ಮಾಡುವುದು ಸುಯೋಗ ಮತ್ತು ಸಂತಸಕರ ಎಂದು ಭಾವಿಸುತ್ತೇನೆ. ಆದರೆ, ರೋ, ಕರೆಗೆ ಧನ್ಯವಾದ...ಚಾಟ್ ಮಾಡಲು, ಚರ್ಚಿಸಲು ಸಾಕಷ್ಟು ಇದೆ. ಕೆಲವೊಮ್ಮೆ ಒಪ್ಪುತ್ತೇವೆ; ಕೆಲವೊಮ್ಮೆ ಒಪ್ಪುವುದಿಲ್ಲ. ಆದರೆ, ತುಂಬು ಧನ್ಯವಾದ,ʼ ಎಂದು ರೋಹಿತ್ ನಗುತ್ತಿರುವಂತೆ ದ್ರಾವಿಡ್ ಹೇಳಿದರು.
ಆಟಗಾರರು ಸಾಮೂಹಿಕವಾಗಿ ಭರ್ಜರಿ ಪ್ರದರ್ಶನ ನೀಡಿದ್ದಕ್ಕಾಗಿ ದ್ರಾವಿಡ್ ಶ್ಲಾಘಿಸಿದರು; ಸಾಧನೆಯನ್ನು ಸಂಭ್ರಮಿಸುವಂತೆ ಒತ್ತಾಯಿಸಿದರು.
ಆನಂದ ಪಡೋಣ: ʻನೀವೆಲ್ಲರೂ ಈ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನಾನು ಯಾವಾಗಲೂ ಹೇಳುತ್ತೇವೆ- ಇದು ರನ್‌ಗಳ ಬಗ್ಗೆ ಅಲ್ಲ, ವಿಕೆಟ್‌ಗಳ ಬಗ್ಗೆ ಅಲ್ಲ; ವೃತ್ತಿಜೀವನವನ್ನಲ್ಲ.ಆದರೆ, ಇಂತಹ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ಆದ್ದರಿಂದ ನಾವು ಸಂಭ್ರಮಿಸೋಣ,ʼ ಎಂದು ದ್ರಾವಿಡ್ ಹೇಳಿದರು.
ʻನಾನು ನಿಮ್ಮ ಬಗ್ಗೆ ಹೆಮ್ಮೆಪಡದೆ ಇರುವುದು ಅಸಾಧ್ಯ. ಹೋರಾಡಿದ ರೀತಿ, ತಂಡವಾಗಿ ಕೆಲಸ ಮಾಡಿದ ರೀತಿ, ಪುಟಿದೆದ್ದ ರೀತಿ ಬಗ್ಗೆ ಹೆಮ್ಮೆಯಿದೆ. ಕೆಲವು ನಿರಾಶೆಗಳು ಇರಬಹುದು. ನಾವು ಎಂದಿಗೂ ಗೆರೆಯನ್ನು ದಾಟಲು ಸಾಧ್ಯವಾಗಲಿಲ್ಲ,ʼ ಎಂದು ನುಡಿದರು.
ಕುಟುಂಬದವರ ತ್ಯಾಗ: ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಉಪಸ್ಥಿತಿಯಲ್ಲಿ ಆಟಗಾರರ ಕುಟುಂಬದವರು ಮಾಡಿದ ತ್ಯಾಗವನ್ನು ಉಲ್ಲೇಖಿಸಿದರು.
ʻನಿಮ್ಮಲ್ಲಿ ಪ್ರತಿಯೊಬ್ಬರೂ ಹಲವು ತ್ಯಾಗಗಳನ್ನು ಮಾಡಿದ್ದು, ನಿಮ್ಮ ಕುಟುಂಬಗಳು ಈಗ ಆನಂದಿಸುತ್ತಿದ್ದಾರೆ. ಮಕ್ಕಳಾಗಿದ್ದ ಕಾಲದಿಂದಲೂ ಕುಟುಂಬದವರು ನೀವು ಈ ಡ್ರೆಸ್ಸಿಂಗ್ ಕೋಣೆಯಲ್ಲಿರಲು ಹಲವು ತ್ಯಾಗ ಮಾಡಿದ್ದಾರೆ,ʼ ಎಂದು ಹೇಳಿದರು. ನಿಮ್ಮ ಪೋಷಕರು, ಪತ್ನಿ, ಮಕ್ಕಳು, ಸಹೋದರರು, ತರಬೇತುದಾರರು ಸೇರಿದಂತೆ ಹಲವರು ನೀವು ಕ್ಷಣವನ್ನು ಆನಂದಿಸಲು ಹಲವು ತ್ಯಾಗಗಳನ್ನು ಮಾಡಿದ್ದಾರೆ ಮತ್ತು ನಿಮ್ಮೊಂದಿಗೆ ಶ್ರಮಿಸಿದ್ದಾರೆ ... ಈ ನೆನಪಿನ ಭಾಗವಾಗಿರಲು ಹೆಮ್ಮೆಪಡುತ್ತೇನೆ,ʼ ಎಂದರು.
ಕೋಚಿಂಗ್ ಸಿಬ್ಬಂದಿಗೆ ತಂಡ ತೋರಿಸಿದ ಗೌರವಕ್ಕಾಗಿ ಪ್ರಶಂಸಿಸಿದರು.ʼನೀವು ನನಗೆ, ಕೋಚಿಂಗ್ ಸಿಬ್ಬಂದಿಗೆ, ಸಹಾಯಕ ಸಿಬ್ಬಂದಿಗೆ ನೀಡಿದ ಗೌರವಕ್ಕೆ ಕೃತಜ್ಞನಾಗಿರುತ್ತೇನೆ,ʼ ಎಂದು ಹೇಳಿದರು. ಬಿಸಿಸಿಐ ಅಧಿಕಾರಿಗಳು ಮತ್ತು ತೆರೆಮರೆಯಲ್ಲಿ ದುಡಿದವರನ್ನು ವಂದಿಸಿದರು.