Tirupati stampede : ತಿರುಪತಿ ಕಾಲ್ತುಳಿತ; ನಿಯಮ ಬದಲಿಸಿದರೂ ಮುನ್ನೆಚ್ಚರಿಕೆ ಕೈಗೊಳ್ಳದ ಟಿಟಿಡಿ
Tirupati stampede : ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನದ ಉಚಿತ ದರ್ಶನಕ್ಕಾಗಿ ಟೋಕನ್‌ಗಳನ್ನು ವಿತರಿಸಲಾಗಿತ್ತು. ಆದರೆ ಕೌಂಟರ್‌ಗಳ ಸ್ಥಾಪನೆಯಲ್ಲಿ ಅವ್ಯವಸ್ಥೆ ಉಂಟಾಗಿ ಬಂದ ಕಾರಣ ಕಾಲ್ತುಳಿತ ಸಂಭವಿಸಿದೆ.;
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯು ಮತ್ತೊಂದು ಬಾರಿ ಇಕ್ಕಟ್ಟಿಗೆ ಸಿಲುಕಿದೆ. ದೇವಾಲಯದಲ್ಲಿ ವೈಕುಂಠ ದ್ವಾರ ದರ್ಶನದ ವೇಳೆ ಆರು ಮಂದಿ ಮೃತಪಟ್ಟಿರುವುದು ಆಡಳಿತ ಮಂಡಳಿಯ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ. ಈ ಹಿಂದೆ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಕುರಿತ ಉಂಟಾದ ವಿವಾದವು ಟಿಟಿಡಿಯ ಕಾರ್ಯವೈಖರಿ ಮೇಲೆ ಬೆಳಕು ಚೆಲ್ಲಿತ್ತು.
ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನದ ಉಚಿತ ದರ್ಶನಕ್ಕಾಗಿ ಟೋಕನ್‌ಗಳನ್ನು ವಿತರಿಸಲಾಗಿತ್ತು. ಆದರೆ ಕೌಂಟರ್‌ಗಳ ಸ್ಥಾಪನೆಯಲ್ಲಿ ಅವ್ಯವಸ್ಥೆ ಕಂಡು ಬಂದ ಕಾರಣ ಕಾಲ್ತುಳಿತ ಸಂಭವಿಸಿದೆ ಎಂಬುದೇ ಎಲ್ಲರ ಅಭಿಪ್ರಾಯ.
ಜನವರಿ 10, 2025ರಿಂದ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಟೋಕನ್‌ಗಳನ್ನು ವಿತರಿಸಲು ಟಿಟಿಡಿ 90 ಕೌಂಟರ್ ತೆರೆದಿತ್ತು. ಅವುಗಳಲ್ಲಿ ಬೈರಾಗಿಪಟ್ಟೇಡಾ ಕೇಂದ್ರದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಟೋಕನ್‌ಗಳಿಗಾಗಿ ಕಾಯುತ್ತಿದ್ದಾಗ ಅನಾರೋಗ್ಯಕ್ಕೆ ಒಳಗಾದ ಮಹಿಳೆಯನ್ನು ಕರೆದೊಯ್ಯಲು ಅಧಿಕಾರಿಗಳು ಗೇಟ್ ತೆರೆದಿದ್ದಾರೆ. ತಕ್ಷಣವೇ ಟೋಕನ್ ಪಡೆಯಲು ಕಾಯುತ್ತಿದ್ದ ಭಕ್ತರು ಗೇಟ್ ಕಡೆಗೆ ಮುನ್ನುಗ್ಗಿದ್ದಾರೆ. ಆದರೆ, ಗೇಟ್ ತಕ್ಷಣವೇ ಮುಚ್ಚಿದ್ದರಿಂದ ಏಕಾಏಕಿ ಗೊಂದಲ ಉಂಟಾಯಿತು. ಪರಿಣಾಮವಾಗಿ ಕಾಲ್ತುಳಿತದ ಪರಿಣಾಮ ಎದುರಿಸಬೇಕಾಯಿತು.
ಕಾಲ್ತುಳಿತಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದಕ್ಕೆ ಆಡಳಿತ ಮಂಡಳಿ ಸಿದ್ಧವಿಲ್ಲ. ಆದರೆ, ಅಭೂತಪೂರ್ವ ಕಾಲ್ತುಳಿತಕ್ಕೆ ಅಸಮರ್ಪಕ ಭದ್ರತಾ ವ್ಯವಸ್ಥೆಗಳೇ ಕಾರಣ ಎಂದು ಭಕ್ತರು ಹೇಳುತ್ತಿದ್ದಾರೆ.
ತಿರುಪತಿ ಮೂಲದ ಬಿಜೆಪಿ ಮುಖಂಡ ಮತ್ತು ಕಾರ್ಯಕರ್ತ ನವೀನ್ ಕಮುವಾರ್ ರೆಡ್ಡಿ ಈ ದುರಂತಕ್ಕೆ ಟಿಟಿಡಿ ಅಧಿಕಾರಿಗಳನ್ನು ದೂಷಿಸಿದ್ದಾರೆ. ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆಯನ್ನು ಊಹಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
"ಭಾರಿ ಜನಸಮೂಹದ ಮುನ್ಸೂಚನೆ ಇದ್ದರೂ ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆಯಿತ್ತು. ಟಿಟಿಡಿ ಮಂಡಳಿ ಮತ್ತು ಪೊಲೀಸರ ನಡುವೆ ಸಮನ್ವಯದ ಕೊರತೆಯಿತ್ತು ಎಂದು ಎಂದು ರೆಡ್ಡಿ ಹೇಳಿದ್ದಾರೆ. ಕೌಂಟರ್‌ಗಳಲ್ಲಿ ನಿಯೋಜಿಸಲಾದ ಬೆರಳೆಣಿಕೆಯಷ್ಟು ಪೊಲೀಸರಿಗೆ ಬೃಹತ್ ಜನಸಂದಣಿ ತಡೆಯಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಹೇಗೆ?
ಕಾಲ್ನಡಿಗೆಯಲ್ಲಿ ಬೆಟ್ಟ ಏರಿ ತಿರುಮಲಕ್ಕೆ ಬರುವವರಿಗೆ ಟಿಟಿಡಿ ಆದ್ಯತೆ ನೀಡುವುದು ಸಂಪ್ರದಾಯ ತಿರುಮಲ ತಲುಪಿದ ನಂತರ ಅವರು ಟೋಕನ್ ನೀಡಲಾಗುತ್ತದೆ. ಅಂತೆಯೇ ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಿಂದ ಸಾವಿರಾರು ಯಾತ್ರಾರ್ಥಿಗಳು ವೈಕುಂಠ ದ್ವಾರ ದರ್ಶನ ಪಡೆಯಲು ತಿರುಮಲಕ್ಕೆ ನಡೆದುಕೊಂಡು ಹೋಗುತ್ತಾರೆ. ಈ ವರ್ಷ ಅವರಿಗೆ ಆದ್ಯತೆಯ ನಿರಾಕರಿಸಲಾಗಿದೆ. ಹೀಗಾಗಿ ಎಲ್ಲರೂ ತಿರುಪತಿಯ ಕೌಂಟರ್‌ಗೆ ಬರಬೇಕಾಯಿತು. ಬುಧವಾರ ಮಧ್ಯಾಹ್ನದ ವೇಳೆಗೆ ಭಕ್ತರು ಕೌಂಟರ್‌ನಲ್ಲಿ ಜಮಾಯಿಸಿದ್ದರು. ಸಂಜೆಯ ವೇಳೆಗೆ ಪ್ರತಿ ಕೌಂಟರ್ ಭಕ್ತರಿಂದ ತುಂಬಿ ತುಳುಕುತ್ತಿತ್ತ" ಎಂದು ಅವರು ಹೇಳಿದ್ದಾರೆ.
ಭಕ್ತರಿಗೆ ಆದ್ಯತೆಯ ಟೋಕನ್ ನೀಡುವ ಅಭ್ಯಾಸ ಮುಂದುವರಿದಿದ್ದರೆ ಜನಸಂದಣಿ ನಿಯಂತ್ರಣದಲ್ಲಿರುತ್ತಿತ್ತು ಎಂದು ರೆಡ್ಡಿ ಹೇಳಿದ್ದಾರೆ. ಟಿಟಿಡಿ ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಟೋಕನ್ ಗಳನ್ನು ನೀಡಲು ಪ್ರಾರಂಭಿಸಬೇಕಿತ್ತು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
10 ದಿನಗಳ ದರ್ಶನದ ಹೊಸ ಪದ್ಧತಿ
ಸಾಂಪ್ರದಾಯಿಕವಾಗಿ, ವೈಕುಂಠ ದ್ವಾರ ದರ್ಶನವನ್ನು ಎರಡು ದಿನಗಳ ಕಾಲ ಅಂದರೆ ವೈಕುಂಠ ಏಕಾದಶಿ) ಮತ್ತು ದ್ವಾದರಿಯಲ್ಲಿ ನಡೆಸಲಾಗುತ್ತದೆ. ವಿಶೇಷ ದರ್ಶನಕ್ಕಾಗಿ ಭಕ್ತರು ಆನ್‌ಲೈನ್‌ನಲ್ಲಿ 300 ರೂ.ಗಳ ಟೋಕನ್ ಕಾಯ್ದಿರಿಸಬಹುದಾಗಿತ್ತು, ಆದರೆ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಮೂಲಕ ಉಚಿತ ದರ್ಶನದಿಂದ ನೇರವಾಗಿ ಸರ್ವ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಕೌಂಟರ್‌ಗಳಲ್ಲಿ ಟೋಕನ್ ನೀಡುವ ಪದ್ಧತಿ ಇರಲಿಲ್ಲ.
ವೈಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿ ಸರ್ಕಾರವು ಆದಾಯ ಹೆಚ್ಚಿಸುವ ಉದ್ದೇಶದಿಂದ ವೈಕುಂಠ ದ್ವಾರ ದರ್ಶನವನ್ನು ಹತ್ತು ದಿನಗಳವರೆಗೆ ವಿಸ್ತರಿಸಲು ನಿರ್ಧರಿಸಿತು. ಈ ಪ್ರಸ್ತಾಪವನ್ನು ಅನೇಕರು ಅದನ್ನು ವಿರೋಧಿಸಿದ್ದರು. ದೇವಾಲಯದ ಸಂಪ್ರದಾಯಗಳಿಗೆ ವಿರುದ್ಧ ಎಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಆದರೆ, ಟಿಟಿಡಿ ಹೊಸ ಪ್ರಸ್ತಾಪದ ಪರವಾಗಿ ಅನೇಕ ಪೀಠಾಧಿಪತಿಗಳು ಮತ್ತು ಸ್ವಾಮೀಜಿಗಳನ್ನು ಸಜ್ಜುಗೊಳಿಸಿತ್ತು. ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಡಿಸೆಂಬರ್ 2021ರಲ್ಲಿ, ಟಿಟಿಡಿ ಮಂಡಳಿಯು ದರ್ಶನವನ್ನು ಹತ್ತು ದಿನಗಳವರೆಗೆ ವಿಸ್ತರಿಸುವ ನಿರ್ಣಯ ಅಂಗೀಕರಿಸಿತ್ತು. ಜನವರಿ 2022ರಿಂದ ಜಾರಿಗೆ ಬಂತು. ಬಳಿಕ ಭಕ್ತರಿಗೆ ಟೋಕನ್ ವ್ಯವಸ್ಥೆ ಘೋಷಿಸಲಾಯಿತು.
ಉಚಿತ ದರ್ಶನದ ಟೋಕನ್‌ಗಳನ್ನು ʼಮೊದಲು ಬಂದವರಿಗೆ ಮೊದಲುʼʼ ಎಂಬ ಆಧಾರದಲ್ಲಿ ನೀಡಲಾಗುತ್ತದೆ. ಈ ವ್ಯವಸ್ಥೆಯನ್ನು ವೈಕುಂಠ ದ್ವಾರ ದರ್ಶನಕ್ಕೂ ವಿಸ್ತರಿಸಲಾಯಿತು. ಅಂದ ಹಾಗೆ ತಿರುಪತಿಯ ಟೋಕನ್ ವಿತರಣಾ ಕೌಂಟರ್‌ಗಳಲ್ಲಿ 2022ರಲ್ಲಿಯೇ ಕಾಲ್ತುಳಿತ ಸಂಭವಿಸಿತ್ತು. ಆದರೆ ಏನೂ ಆಗಿರಲಿಲ್ಲ. ಆದರೆ, ಆಡಳಿತ ಮಂಡಳಿ ಪಾಠ ಕಲಿತಿರಲಿಲ್ಲ.
ಸುಡುವ ಬಿಸಿಲಿನಲ್ಲಿ ಟಿಕೆಟ್‌ಗೆ ಕಾದಿದ್ದ ಭಕ್ತ ಸಮೂಹ ಕೆರಳಿದ್ದು ತಪ್ಪಲ್ಲ. ಯಾಕೆಂದರೆ, ಆ ವೇಳೆಗೆ ನೂರಾರು ಭಕ್ತರು ಪ್ರಜ್ಞೆ ತಪ್ಪಿದ್ದರು. ʼದ ಫೆಡರಲ್ʼ ಜೊತೆ ಮಾತನಾಡಿದ ಅನೇಕ ಭಕ್ತರು ಟೋಕನ್ ವ್ಯವಸ್ಥೆಯನ್ನು ಬದಲಾಯಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಶತಮಾನಗಳ ಧಾರ್ಮಿಕ ಸಂಪ್ರದಾಯ
ಏಕಾದಶಿ ದಿನದಂದು ಮಾತ್ರ ವೈಕುಂಠ ದ್ವಾರ ದರ್ಶನದ ಪ್ರತೀತಿ 1863ರಲ್ಲಿ ಪ್ರಾರಂಭಗೊಂಡಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 1949ರಲ್ಲಿ ದರ್ಶನವನ್ನು ದ್ವಾದಶಿಗೆ ಮರುದಿನ (ಎರಡು ದಿನಗಳು) ವಿಸ್ತರಿಸಲಾಗಿತ್ತು. ಈ ಬಗ್ಗೆ ಅಧಿಕೃತ ದಾಖಲೆಗಳು ಇಲ್ಲ. ಡಾ.ಪಾಮಿಡಿಕಲ್ವ ಚೆಂಚು ಸುಬ್ಬಯ್ಯ ಮತ್ತು ಡಾ.ಅಕೆಲ್ಲ ವಿಭೀಷಣ ಶರ್ಮಾ ಅವರು ಬರೆದಿರುವ ಟಿಟಿಡಿಯ ವೈಕುಂಠ ಏಕಾದಶಿ ಕುರಿತ ಪುಸ್ತಕದಲ್ಲಿ ತಿರುಮಲದ ಏಕಾದಶಿ ಆಚರಣೆಯ ಇತಿಹಾಸವೇ ದಾಖಲಾಗಿಲ್ಲ.
10 ದಿನಗಳ ಆಚರಣೆಯ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ಅರ್ಜಿದಾರ ಕೆ.ಎಸ್.ಕಾಶಿನಾಥ ಶರ್ಮಾ, ಇದು ಆಗಮ ಶಾಸ್ತ್ರಗಳಿಗೆ ವಿರುದ್ಧದ ಜತೆಗೆ ಆದಾಯ ಹೆಚ್ಚಿಸಲು ತೆಗೆದುಕೊಂಡ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದರು.
"ತಿರುಮಲದಲ್ಲಿ ಉತ್ತರ ದ್ವಾರ ಇರಲಿಲ್ಲ. ಸಣ್ಣ ಬಾಗಿಲನ್ನು ಉತ್ತರದ್ವಾರಂ ಎಂದು ಪರಿಗಣಿಸಲಾಗುತ್ತದೆ. ದ್ವಾರ ದರ್ಶನಂ ಅನ್ನು ಹತ್ತು ದಿನಗಳವರೆಗೆ ವಿಸ್ತರಿಸುವುದು ಧರ್ಮವಿರೋಧಿ ಮಾತ್ರವಲ್ಲ, ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರವಾಗಿದೆ " ಎಂದು ಶರ್ಮಾ ರಿಟ್ ಅರ್ಜಿಯಲ್ಲಿ ಹೇಳಿದ್ದರು.
ವಿವಾದ ಮತ್ತು ಹಿಂದಿನ ಕಾಲ್ತುಳಿತದ ಹೊರತಾಗಿಯೂ, ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು 10 ದಿನಗಳ ದರ್ಶನ ಅಭ್ಯಾಸ ಮುಂದುವರಿಸಿದೆ.
ಪ್ರಚಾರ ಮತ್ತು ಸಿದ್ಧತೆ
ವೈಕುಂಠ ಏಕಾದಶಿ ಸಂದರ್ಭದಲ್ಲಿ ಸಂಭವಿಸಿದ ದುರಂತವು ಟಿಟಿಡಿ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟಿಟಿಡಿ ಮಾಜಿ ಅಧ್ಯಕ್ಷ ಮತ್ತು ವೈಎಸ್ಆರ್ ಕಾಂಗ್ರೆಸ್ ಮುಖಂಡ ಭೂಮನ ಕರುಣಾಕರ ರೆಡ್ಡಿ ಹೇಳಿದ್ದಾರೆ. ವೈಕುಂಠ ದ್ವಾರ ದರ್ಶನಕ್ಕೆ 7 ಲಕ್ಷ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಇಒ (ಕಾರ್ಯನಿರ್ವಾಹಕ ಅಧಿಕಾರಿ) ಮತ್ತು ಅಧ್ಯಕ್ಷರು ಪದೇ ಪದೇ ಹೇಳಿದ್ದಾರೆ. ಟೋಕನ್ ವಿತರಣಾ ಕೇಂದ್ರಗಳಲ್ಲಿ 50 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಮತ್ತು ಶ್ರೀವಾರಿ ಸೇವಕರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ನಿಯೋಜಿಸುವುದಾಗಿ ಅವರು ಘೋಷಿಸಿದ್ದಾರೆ. ಭಕ್ತರಿಗಿಂತ ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಅಧಿಕಾರಿಗಳು ಹೆಚ್ಚು ಶ್ರಮ ವಹಿಸಿದ್ದಾರೆ" ಎಂದು ದೂರಿದ್ದಾರೆ.
ತಿರುಮಲದ ಒಳಗಿನ ಗರ್ಭಗುಡಿಯಲ್ಲಿರುವ 'ವೈಕುಂಠ ದ್ವಾರವನ್ನು' ವರ್ಷಕ್ಕೊಮ್ಮೆ ವೈಕುಂಠ ಏಕಾದಶಿಯಂದು ಮಾತ್ರ ತೆರೆಯಲಾಗುತ್ತದೆ. ಇದು ಭಕ್ತರಿಗೆ ಪ್ರದಕ್ಷಿಣೆ ಹಾಕಲು ಅನುವು ಅವಕಾಶ ಮಾಡಿಕೊಡುತ್ತದೆ. ಅಂದರೆ ದೇವಾಲಯ ಮತ್ತು ಮುಖ್ಯ ದೇವರ ಸುತ್ತಲೂ ಪ್ರದಕ್ಷಿಣೆ, ಅಪರೂಪದ ಅವಕಾಶ. ದ್ವಾದಶಿಯಂದು ಚಕ್ರಸ್ನಾನ ಮಾಡಿದ ನಂತರ ಬಾಗಿಲು ಮುಚ್ಚಲಾಗುತ್ತದೆ.
ವೈಕುಂಠ ಏಕಾದಶಿ ಸಮಯದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಲು ಇದು ಪ್ರಮುಖ ಕಾರಣವಾಗಿದೆ. ಜನವರಿ 10 ಮತ್ತು ಜನವರಿ 11, 2025 ರಂದು ವೈಕುಂಠ ದ್ವಾರ ದರ್ಶನ ಪಡೆಯಲು ತಮ್ಮ ಅದೃಷ್ಟ ಪರೀಕ್ಷಿಸಲು ಜನರು ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದ್ದರು.