ಧಾರ್ಮಿಕ ಕಟ್ಟಡಗಳು ಸಾರ್ವಜನಿಕ ಆಸ್ತಿ ಅತಿಕ್ರಮಿಸಬಾರದು: ಸುಪ್ರೀಂ

ನಮ್ಮದು ಜಾತ್ಯತೀತ ದೇಶ. ನಮ್ಮ ನಿರ್ದೇಶನಗಳು ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ, ಎಲ್ಲರಿಗೂ ಅನ್ವಯಿಸುತ್ತವೆ. ಅತಿಕ್ರಮಣ ಯಾರೇ ಮಾಡಿರಲಿ, ಅದು ಹೋಗಬೇಕು. ಸಾರ್ವಜನಿಕರ ಸುರಕ್ಷತೆ ಅತ್ಯಂತ ಮುಖ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.;

Update: 2024-10-01 10:59 GMT

ರಸ್ತೆಗಳು, ಜಲಮೂಲಗಳು ಅಥವಾ ರೈಲ್ವೆ ಹಳಿಗಳನ್ನು ಅತಿಕ್ರಮಿಸುವ ಧಾರ್ಮಿಕ ರಚನೆಗಳ ಬದಲು ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. 

ಬುಲ್ಡೋಜರ್ ಬಳಕೆ ಮತ್ತು ಅತಿಕ್ರಮಣ ವಿರೋಧ ಅಭಿಯಾನ ಕುರಿತ ನಿರ್ದೇಶನಗಳು ಧರ್ಮವನ್ನು ಲೆಕ್ಕಿಸದೆ ಎಲ್ಲ ನಾಗರಿಕರಿಗೆ ಏಕ ರೂಪವಾಗಿ ಅನ್ವಯಿಸುತ್ತವೆ ಎಂದು ಹೇಳಿದೆ. 

ಆರೋಪಿಗಳ ವಿರುದ್ಧ ಬುಲ್ಡೋಜರ್ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು. 

ಬುಲ್ಡೋಜರ್ ಬಳಕೆ: ಹಲವು ರಾಜ್ಯಗಳಿಂದ ವರದಿಯಾಗಿ, ವ್ಯಾಪಕವಾಗಿ ಖಂಡನೆಗೀಡಾದ ಈ ಪ್ರವೃತ್ತಿಯನ್ನು ಜನಸಾಮಾನ್ಯರು ʻಬುಲ್ಡೋಜರ್ ನ್ಯಾಯʼ ಎಂದು ಕರೆಯುತ್ತಾರೆ. ಅಕ್ರಮ ಕಟ್ಟಡಗಳನ್ನು ಮಾತ್ರ ಕೆಡವಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ. 

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, ʻಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವುದು ಬುಲ್ಡೋಜರ್ ಕ್ರಮ ಎದುರಿಸಲು ಕಾರಣವಾಗಬಹುದೇ?ʼ ಎಂದು ಕೇಳಲಾಯಿತು. 

ʻಇಲ್ಲ. ಅತ್ಯಾಚಾರ ಅಥವಾ ಭಯೋತ್ಪಾದನೆಯಂತಹ ಘೋರ ಅಪರಾಧಗಳಿಗೆ ಕೂಡ ಅದು ಸರಿಯಲ್ಲ,ʼ ಎಂದು ಉತ್ತರಿಸಿದರು.

ನಿಯಮ ಪಾಲನೆ: ʻಪುರಸಭೆ ಸಮಸ್ಯೆಗಳ ಬಗ್ಗೆ ವ್ಯವಹರಿಸುವಾಗಲೂ, ನೋಟಿಸ್ ಜಾರಿ ಮಾಡಬೇಕು,ʼ ಎಂದು ಮೆಹ್ತಾ ಅವರು ಹೇಳಿದರು.

ʻಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪಂಚಾಯಿತಿಗಳಿಗೆ ವಿಭಿನ್ನ ಕಾನೂನುಗಳಿವೆ,ʼ ಎಂದು ನ್ಯಾಯಾಧೀಶರು ಹೇಳಿದರು. ʻಆನ್‌ಲೈನ್ ಪೋರ್ಟಲ್ ಕೂಡ ಇರಬೇಕು. ಒಮ್ಮೆ ಡಿಜಿಟಲೀಕರಣಗೊಳಿಸಿದರೆ, ದಾಖಲೆ ಇರುತ್ತದೆ ಎನ್ನುವುದು ಜನರಿಗೆ ಗೊತ್ತಾಗುತ್ತದೆ,ʼ ಎಂದಿತು.

ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್‌ ಬಳಕೆ ಆಗುತ್ತಿದೆ ಎಂಬ ಆರೋಪದಡಿ ನ್ಯಾಯಾಲಯ ಕೆಲವು ನಿದರ್ಶನಗಳನ್ನು ಆಧರಿಸಿ ನಿರ್ದೇಶನ ನೀಡಬಹುದೆಂದು ಆತಂಕಗೊಂಡಿದ್ದೇನೆ ಎಂದು ಮೆಹ್ತಾ ಹೇಳಿದರು.

ಕಾನೂನಿನ ಮುಂದೆ ಸಮಾನತೆ: ಆಗ ಪೀಠ, ʻನಮ್ಮದು ಜಾತ್ಯತೀತ ದೇಶ. ನಮ್ಮ ನಿರ್ದೇಶನಗಳು ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ, ಎಲ್ಲರಿಗೂ ಅನ್ವಯಿಸುತ್ತದೆ. ಅತಿಕ್ರಮಣ ಯಾರೇ ಮಾಡಿರಲಿ, ಅದು ಸಾರ್ವಜನಿಕ ರಸ್ತೆ, ಫುಟ್‌ಪಾತ್, ಜಲಾನಯನ ಅಥವಾ ರೈಲು ಮಾರ್ಗದಲ್ಲಿದ್ದರೆ, ಅದು ಹೋಗಬೇಕು. ಸಾರ್ವಜನಿಕರ ಸುರಕ್ಷತೆ ಅತ್ಯಂತ ಮುಖ್ಯ,ʼ ಎಂದು ಹೇಳಿತು.

ʻಗುರುದ್ವಾರ ಅಥವಾ ದರ್ಗಾ ಅಥವಾ ದೇವಸ್ಥಾನ ಸೇರಿದಂತೆ ರಸ್ತೆ ಮಧ್ಯದಲ್ಲಿ ಯಾವುದೇ ಧಾರ್ಮಿಕ ರಚನೆಯಿದ್ದರೂ, ಅದು ಸಾರ್ವಜನಿಕರ ಚಲನವಲನಕ್ಕೆ ಅಡ್ಡಿಯುಂಟು ಮಾಡಬಾರದು,ʼ ಎಂದು ಹೇಳಿದೆ. 

ಅಂತಾರಾಷ್ಟ್ರೀಕರಣ ಇಲ್ಲ: ನ್ಯಾಯಮೂರ್ತಿ ಗವಾಯಿ, ʼಅನಧಿಕೃತ ನಿರ್ಮಾಣಗಳಿಗೆ, ಒಂದು ಕಾನೂನು ಇರಬೇಕು. ಅದು ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನುಅವಲಂಬಿಸಿರಬೇಕಿಲ್ಲ,ʼ ಎಂದು ಪೀಠ ಹೇಳಿತು.

ಯುಎನ್ ಪರ ವಕೀಲರಾದ ವೃಂದಾ ಗ್ರೋವರ್ ವಾದ ಮಂಡಿಸಿದಾಗ ಮೆಹ್ತಾ, ʼನಾವು ಇದನ್ನು ಅಂತಾರಾಷ್ಟ್ರೀಯಗೊಳಿಸುವುದನ್ನು ಬಯಸುವುದಿಲ್ಲ. ನಮ್ಮ ಸಾಂವಿಧಾನಿಕ ನ್ಯಾಯಾಲಯಗಳು ಸಾಕಷ್ಟು ಶಕ್ತಿಯುತವಾಗಿವೆ ಮತ್ತು ಸರ್ಕಾರವು ಸಹಾಯ ಮಾಡುತ್ತಿದೆ. ನಮಗೆ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಅಗತ್ಯವಿಲ್ಲ,ʼ ಎಂದರು.

ಮತ್ತೊಬ್ಬ ಹಿರಿಯ ವಕೀಲ ಸಿ.ಯು. ಸಿಂಗ್, ಬುಲ್ಡೋಜರ್ ಬಳಕೆಯನ್ನು ಅಪರಾಧದ ವಿರುದ್ಧ ಹೋರಾಡಲು ಬಳಸಬಾರದು ಎಂದು ಹೇಳಿದರು.

ಉರುಳಿಸುವಿಕೆ ಸಮರ್ಥಿಸಲಾಗದು: ಅಲ್ಪಸಂಖ್ಯಾತರ ವಿರುದ್ಧ ಬುಲ್ಡೋಜರ್ ಬಳಕೆ ʻಎಲ್ಲೋ ಒಂದೊಂದುʼ ನಡೆದಿದೆ ಎಂದು ಮೆಹ್ತಾ ಹೇಳಿದರು. ತಕ್ಷಣ ಮಧ್ಯಪ್ರವೇಶಿಸಿದ ಪೀಠ, ʻ ಕೆಲವು ಒಂದು ಅಥವಾ ಎರಡಲ್ಲ; 4.45 ಲಕ್ಷʼ ಎಂದು ಹೇಳಿತು. 

ಆರೋಪಿಯಾದ ಮಾತ್ರಕ್ಕೆ ಆತನ ಆಸ್ತಿ ಧ್ವಂಸ ಮಾಡುವಂತಿಲ್ಲ; ನಾಗರಿಕ ಕಾನೂನುಗಳನ್ನು ಉಲ್ಲಂಘಿಸಿದರೆ ಮಾತ್ರ ನೆಲಸಮ ಮಾಡಬಹುದು ಎಂದು ನ್ಯಾಯಾಲಯ ಪುನರುಚ್ಚರಿಸಿತು. 

Tags:    

Similar News