ಕಳ್ಳತನ ಆರೋಪ; ಹಿರಿಯ ವಿದ್ಯಾರ್ಥಿಗೆ ಥಳಿಸಿದ ಕಿರಿಯ ವಿದ್ಯಾರ್ಥಿಗಳು: 13 ಮಂದಿ ಸಸ್ಪೆಂಡ್

ಕಳ್ಳತನದ ಆರೋಪ ಹೊರಿಸಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಯೊಬ್ಬನಿಗೆ ಹಿಂಸಿಸಿರುವ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.;

Update: 2025-03-24 10:44 GMT

ಕೇರಳದ ಕಾಲೇಜುಗಳಲ್ಲಿ ಕೆಲವು ದಿನಗಳ ಹಿಂದೆ ಅಮಾನವೀಯ ರ್ಯಾಗಿಂಗ್ ಪ್ರಕರಣಗಳು ಭಾರೀ ಸದ್ದು ಮಾಡಿದ ಬೆನ್ನಲ್ಲೇ ಈಗ ತಮಿಳುನಾಡಿನ ಕೊಯಮತ್ತೂರಿನ ಕಾಲೇಜೊಂದರಲ್ಲಿ ಹಿರಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 13 ಮಂದಿ ಕಿರಿಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

ನೆಹರೂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರ್ಚ್ 20ರಂದು ಈ ಘಟನೆ ನಡೆದಿದ್ದು, 13 ಮಂದಿ ಪ್ರಥಮ ವರ್ಷದ ಯುಜಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಕಳ್ಳತನದ ಆರೋಪ ಹೊರಿಸಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಯೊಬ್ಬನಿಗೆ ಹಿಂಸಿಸಿರುವ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

1.42 ನಿಮಿಷಗಳ ವೀಡಿಯೊವೊಂದು ವೈರಲ್ ಆಗಿದ್ದು, , ಹಿರಿಯ ವಿದ್ಯಾರ್ಥಿಯನ್ನು ಅಂಗಿ ಬಿಚ್ಚಿಸಿ, ಎರಡೂ ಕೈಗಳನ್ನು ಎತ್ತಿಸಿ, ಮೊಣಕಾಲಲ್ಲಿ ನಿಲ್ಲಿಸಲಾಗಿದೆ. ಸುತ್ತಲೂ ವಿದ್ಯಾರ್ಥಿಗಳ ಗುಂಪು ನೆರೆದಿರುವುದ ನೋಡಿದರೆ ಕಾಲೇಜಿನ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿರುವಂತೆ ಕಂಡಿದೆ. ಬಹಳ ಹೊತ್ತು ಕೈಗಳನ್ನು ಎತ್ತಿ, ಮೊಣಕಾಲೂರಿ ಕುಳಿತ ಹಿರಿಯ ವಿದ್ಯಾರ್ಥಿ ನೋವಿನಿಂದ ಅಳುತ್ತಿರುವ ಮತ್ತು ತನ್ನ ಎಡಗೈ ತೀವ್ರವಾಗಿ ನೋಯುತ್ತಿದೆ, ಕೈಗಳನ್ನು ಕೆಳಗಿಳಿಸಲು ಬಿಡಿ ಎಂದು ಗೋಗರೆಯುವ ದೃಶ್ಯವಿದೆ. ಕೊನೆಗೆ ಅವನು ಸಮತೋಲನವನ್ನು ಕಳೆದುಕೊಂಡು, ಕುಸಿದು ಬೀಳುವ ದೃಶ್ಯವೂ ಕಾಣಿಸುತ್ತದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾಲೇಜಿನ ಉಪ ಮುಖ್ಯ ವಾರ್ಡನ್ ಡಾ.ಮಹೇಶ್ವರನ್ ಈ ಘಟನೆ ತಮ್ಮ ಕಾಲೇಜಿನಲ್ಲೇ ನಡೆದಿರುವುದಾಗಿ ದೃಢಪಡಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಾಲೇಜು ಆಡಳಿತವು ತ್ವರಿತ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

"ಪ್ರಾಂಶುಪಾಲರು ಮತ್ತು ಮುಖ್ಯ ವಾರ್ಡನ್ ಈ ಬಗ್ಗೆ ತನಿಖೆಗಾಗಿ ವಿಚಾರಣಾ ಸಮಿತಿಯನ್ನು ರಚಿಸಿದ್ದಾರೆ. ಕುಕೃತ್ಯದಲ್ಲಿ ಭಾಗಿಯಾಗಿರುವ 13 ವಿದ್ಯಾರ್ಥಿಗಳನ್ನು ಗುರುತಿಸಿ ಅಮಾನತುಗೊಳಿಸಲಾಗಿದೆ. ಪೊಲೀಸರಿಗೂ ಮಾಹಿತಿ ನೀಡಿದ್ದೇವೆ" ಎಂದು ಅವರು ಹೇಳಿದ್ದಾರೆ.

ಅಮಾನತುಗೊಂಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಮಾರ್ಚ್ 24 ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ ಎಂದಿದ್ದಾರೆ. ಕೊಯಮತ್ತೂರು ಜಿಲ್ಲಾ ಪೊಲೀಸರೂ ದೂರು ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Tags:    

Similar News