SM Krishna : ರಾಜಕೀಯದ ಇಳಿಸಂಜೆಯಲ್ಲಿ ಸಮಾಜವಾದಿ ನಿಲುವಿನಿಂದ, ಬಿಜೆಪಿ ಕಡೆಗೆ ಹೊರಳಿದ್ದ ಕೃಷ್ಣ
ಅರ್ಧ ಶತಮಾನಗಳ ಕಾಲ ಪ್ರಜಾ ಸೋಶಿಯಲಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ ಮೂಲಕ ಸಮಾಜವಾದಿ ನಿಲುವುಗಳ ಮೂಲಕವೇ ರಾಜಕೀಯದಲ್ಲಿ ನೆಲೆ ಕಂಡಿದ್ದ ಮಾಜಿ ಸಿಎಂ ಎಸ್ ಕೃಷ್ಣ ಅವರು 2017ರಲ್ಲಿ ಭಾರತೀಯ ಜನತಾ ಪಕ್ಷ ಸೇರಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು.;
ಕರ್ನಾಟಕ ಕಂಡ ಅತ್ಯಂತ ಯಶಸ್ವಿ ರಾಜಕಾರಣಿ ಎಸ್. ಎಂ ಕೃಷ್ಣ ಅವರು ಸೋಮವಾರ ಮಧ್ಯರಾತ್ರಿ ನಿಧನ ಹೊಂದಿದ್ದಾರೆ. ಸಿಎಂ ಆಗಿ ಕೇಂದ್ರ ವಿದೇಶಾಂಗ ಹಾಗೂ ಹಣಕಾಸು ಸಚಿವರಾಗಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದ ಅವರ ಕಾರ್ಯವೈಖರಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಆದಾಗ್ಯೂ 2017ರ ವೇಳೆಗೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
ಅರ್ಧ ಶತಮಾನಗಳಷ್ಟು ಕಾಲ ಸಮಾಜವಾದಿ ನಿಲುವು ಕಾಪಾಡಿಕೊಂಡಿದ್ದ ಎಸ್ ಎಂ ಕೃಷ್ಣ ಅವರು ತಮ್ಮ ರಾಜಕೀಯ ಜೀವನದ ಇಳಿಸಂಜೆಯಲ್ಲಿ ಬಿಜೆಪಿ ಸೇರಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ತೊರೆಯುವ ವೇಳೆ ತಮಗೆ ಕಾಂಗ್ರೆಸ್ನಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಒಳಗಾಗಿತ್ತು.
ಆರಂಭದಲ್ಲಿ 10 ವರ್ಷಗಳ ಕಾಲ ಜಯಪ್ರಕಾಶ್ ನಾರಾಯಣ್ ಹುಟ್ಟುಹಾಕಿದ್ದ ಪ್ರಜಾ ಸೋಶಿಯಲಿಸ್ಟ್ ಪಾರ್ಟಿ ಬಳಿಕ ಕಾಂಗ್ರೆಸ್ ಪಕ್ಷದ ಮೂಲಕ ಎಲ್ಲ ರೀತಿಯ ರಾಜಕೀಯ ಏಳಿಗೆ ಕಂಡಿದ್ದ ಕೃಷ್ಣ ಅವರು ರಾಜಕೀಯ ಜೀವನದುದ್ದಕ್ಕೂ ಸಮಾಜವಾದಿ ನಿಲುವು ಹೊಂದಿದ್ದರು. ರಾಜಕೀಯ ಹಾಗೂ ಆಡಳಿತಾತ್ಮಕ ವಿಚಾರದಲ್ಲಿ ಅವರು ಸಮಾಜವಾದಿ ತತ್ವಗಳನ್ನು ಪಾಲಿಸುತ್ತಿದ್ದರು. ಆದರೆ, ಕೊನೇ ಹಂತದಲ್ಲಿ ಅವರು ಬಿಜೆಪಿ ಸೇರಿ ಮತ್ತೆ ಅವಕಾಶಕ್ಕಾಗಿ ಹುಡುಕಿದ್ದು ವಿಶೇಷ ಎನಿಸಿತು. ಆದರೆ, ಬಿಜೆಪಿಯೂ ಅವರಿಗೆ ಪಕ್ಷದ ಸದಸ್ಯತ್ವ ಬಿಟ್ಟರೆ ಬೇರೆ ಯಾವ ಅವಕಾಶವನ್ನೂ ನೀಡಲಿಲ್ಲ.
ಮದ್ದೂರಲ್ಲಿ ಮೊದಲ ಗೆಲುವು ?
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾದ ಎಸ್ ಎಂ ಕೃಷ್ಣ ಅವರು 1962ರಲ್ಲಿ ವಿಧಾನಸಭೆ ಪ್ರವೇಶಿಸಿದ್ದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಗೊಂಡರು. 1971ರಲ್ಲಿ ಮತ್ತೊಮ್ಮೆ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ವೇಳೆ ಅವರು ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಲ್ಲಿದ್ದರು. ಬಳಿಕ ಅವರು ಕಾಂಗ್ರೆಸ್ ಮೂಲಕ ರಾಜಕೀಯ ಮುಂದುವರಿಸಿದರು. 1972ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೃಷ್ಣ 1977ರಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1983ರಲ್ಲಿ ಉದ್ಯಮ ಖಾತೆ ಸಚಿವರಾಗಿ, 1984ರಲ್ಲಿ ಹಣಕಾಸು ಸಚಿವರಾಗಿ ಬಳಿಕ 1989ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.
ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ
ಕರ್ನಾಟಕದ ಉಪಮುಖ್ಯಮಂತ್ರಿಯಾಗಿ 1992ರಿಂದ 1994ರವರೆಗೆ ಸೇವೆ ಸಲ್ಲಿಸಿದ್ದ ಎಸ್.ಎಂ. ಕೃಷ್ಣ 1996ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಬಳಿಕ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ 1999ರಿಂದ 2004ರವರೆಗೆ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಅವರು ಹಲವಾರು ಯಶಸ್ವಿ ಯೋಜನೆಗಳನ್ನು ಜಾರಿಗೆ ತಂದು ಪ್ರಖ್ಯಾತರಾದರು. ಅವರು ಸಿಎಂ ಆಗಿದ್ದ ಕಾಲದಲ್ಲಿ ಬೆಂಗಳೂರು ಐಟಿ, ಬಿಟಿ ನಗರವಾಗಿ ವಿಶ್ವ ಮಟ್ಟದಲ್ಲೇ ಜಾಗತಿಕ ಖ್ಯಾತಿ ಗಿಟ್ಟಿಸಿತು. ವರನಟ ಡಾ. ರಾಜ್‌ಕುಮಾರ್ ಅಪಹರಣ, ಕಾವೇರಿ ವಿವಾದ ಹಾಗೂ ಭೀಕರ ಬರಗಾಲ ಸಮಸ್ಯೆಗಳನ್ನು ತಮ್ಮ ಆಡಳಿತದ ಅವಧಿಯಲ್ಲಿ ಎದುರಿಸಿದರು. ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಪ್ರಸ್ತುತ ಅತ್ಯಂತ ಯಶಸ್ವಿ ಸರ್ಕಾರಿ ಯೋಜನೆ ಎನಿಸಿಕೊಂಡಿದೆ.
ಮಹಾರಾಷ್ಟ್ರ ರಾಜ್ಯಪಾಲ
2004ರಲ್ಲಿ ಕರ್ನಾಟಕದಲ್ಲ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೃಷ್ಣ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. 2008ರಲ್ಲಿ ಮತ್ತೆ ರಾಜ್ಯಸಭೆಗೆ ಮರಳಿದ ಅವರು, 2009ರಿಂದ 2012ರವರೆಗೆ ವಿದೇಶಾಂಗ ಸಚಿವರಾದರು.
ee
2023ರ ವಿಧಾನಸಭಾ ಚುನಾವಣೆ ತಯಾರಿ ನಡೆಯುವಾಗ ಅವರು ರಾಜಕೀಯದಿಂದ ನಿವೃತ್ತಿ ಪಡೆದರು. ''ನನಗೆ 90 ವರ್ಷ. ಈಗ ನಾನು 50 ವರ್ಷದವನಂತೆ ಇರಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆʼʼ ಎಂದು ಹೇಳಿದ್ದರು. ಆ ಬಳಿಕ ರಾಜಕೀಯದಿಂದ ಸಂಪೂರ್ಣ ದೂರ ಇದ್ದರು.