ಮೂರನೇ ಅವಧಿಗೆ ಪ್ರಧಾನಿ: ನೆಹರೂ ದಾಖಲೆ ಸರಿಗಟ್ಟಲು ಬಹುಮತವಿಲ್ಲ!

ನೆಹರೂ 1962 ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಗೆದ್ದು,ಅಧಿಕಾರವನ್ನು ಉಳಿಸಿಕೊಂಡಿದ್ದರು.

Update: 2024-06-05 10:27 GMT

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಅಧಿಕಾರ ಗ್ರಹಣಕ್ಕೆ ಸಿದ್ಧರಾಗುತ್ತಿದ್ದಾರೆ. ನೆಹರೂ ಬಳಿಕ ಈ ಗೌರವಕ್ಕೆ ಪಾತ್ರರಾದ 2ನೇ ಪ್ರಧಾನಿ ಅವರು. ಆದರೆ, ನೆಹರೂ 1962 ರ ಮೂರನೇ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರವನ್ನು ಉಳಿಸಿಕೊಂಡಿದ್ದರು. ಈ ದಾಖಲೆಯನ್ನು ಸರಿಗಟ್ಟಲು ಮೋದಿ ವಿಫಲರಾಗಿದ್ದಾರೆ.

ಬಿಜೆಪಿ 240 ಸ್ಥಾನ ಗಳಿಸಿದ್ದು, ಬಹುಮತಕ್ಕೆ 32 ಸ್ಥಾನ ಕಡಿಮೆಯಿದೆ. ಎನ್‌ಡಿಎ 292 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ವಿಫಲವಾದ ಕಾರಣ, ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರವನ್ನು ಮುನ್ನಡೆಸಬೇಕಾಗುತ್ತದೆ. 

16 ವರ್ಷ ಅಧಿಕಾರ: ನೆಹರು 1947 ರಿಂದ 1964 ರವರೆಗೆ 16 ವರ್ಷ ಮತ್ತು 286 ದಿನಗಳ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 1951-52 ರಲ್ಲಿ ಕಾಂಗ್ರೆಸ್ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ನಂತರ ಮತ್ತು ಆನಂತರ 1957 ಮತ್ತು 1962 ರಲ್ಲಿ ನೆಹರು ಪ್ರಧಾನಿಯಾಗಿದ್ದರು. 1962ರಲ್ಲಿ ಮೂರನೇ ಲೋಕಸಭೆ ಚುನಾವಣೆ ಫೆಬ್ರವರಿ 19 ಮತ್ತು 25 ರ ನಡುವೆ ನಡೆಯಿತು. ಆಗ ನೆಹರು ನೇತೃತ್ವದ ಕಾಂಗ್ರೆಸ್ ಶೇ. 44.7 ರಷ್ಟು ಮತಗಳನ್ನು ಮತ್ತು 494 ಸ್ಥಾನಗಳಲ್ಲಿ 361 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿತು. ಆಗ ಬಹುಮತಕ್ಕೆ 248 ಸ್ಥಾನ ಗಳು ಬೇಕಾಗಿದ್ದವು. ನೆಹರೂ ಮೇ 1964 ರಲ್ಲಿ ತಮ್ಮ ಮೂರನೇ ಅವಧಿಯ ಮಧ್ಯದಲ್ಲಿ ನಿಧನರಾದರು.

ಲೋಕಸಭೆ ಚುನಾವಣೆಯು ಏಪ್ರಿಲ್ 19 ಮತ್ತು ಜೂನ್ 1 ರ ನಡುವೆ ಏಳು ಹಂತಗಳಲ್ಲಿ ನಡೆಯಿತು. ಬಿಜೆಪಿ ನೇತೃತ್ವದ ಎನ್‌ಡಿಎ 400 ರ ಗಡಿ ದಾಟುವುದಾಗಿ ಹೇಳಿಕೊಂಡಿದ್ದರೂ, ಮೈತ್ರಿ ಮೂಲಕ 292 ಸ್ಥಾನಗಳನ್ನು ಗೆದ್ದಿತು. ಇಂಡಿಯ ಒಕ್ಕೂಟ ಕಠಿಣ ಸ್ಪರ್ಧೆ ನೀಡಿ, 234 ಸ್ಥಾನ ಗಳಿಸಿದೆ. 

2019ರಲ್ಲಿ ಬಿಜೆಪಿ 303 ಸ್ಥಾನ ಹಾಗೂ ಎನ್‌ಡಿಎ 353 ಸ್ಥಾನ ಗಳಿಸಿತ್ತು.

Tags:    

Similar News