ಶಿಂಧೆ ವಿ/ಎಸ್‌ ಉದ್ಧವ್‌: ಸ್ಪೀಕರ್ ಆದೇಶದ ವಿರುದ್ಧ ಅರ್ಜಿ ಆಲಿಕೆ ಮಾ.7ಕ್ಕೆ

Update: 2024-03-01 07:11 GMT

ನವದೆಹಲಿ, ಮಾ. 1- ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವನ್ನು ʻನೈಜ ಬಣʼ ಎಂದು ಘೋಷಿಸಿದ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯ ವಿಚಾರಣೆ ಮಾರ್ಚ್ 7 ರಂದು ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. 

ಠಾಕ್ರೆ ಬಣದ ಮನವಿ ಮಾರ್ಚ್ 1 ರಂದು ಮುನ್ಯಾ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಬರಬೇಕಿತ್ತು.ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮನವಿ ವಿಚಾರಣೆ ಪಟ್ಟಿಯಲ್ಲಿಲ್ಲ ಎಂದು ಹೇಳಿದರು. ಮಾ.7 ರಂದು ಪಟ್ಟಿ ಮಾಡಬೇಕೆಂದು ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರ ಪೀಠವನ್ನು ಒತ್ತಾಯಿಸಿದರು.

ʻನಾವು ಅದನ್ನು ಮಾ.7 ರಂದು (ಗುರುವಾರ) ವಿಚಾರಣೆಗೆ ಪಟ್ಟಿ ಮಾಡುತ್ತೇವೆʼ ಎಂದು ಸಿಜೆ ಹೇಳಿದರು.ಠಾಕ್ರೆ ಬಣ ಸಲ್ಲಿಸಿದ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಜನವರಿ 22 ರಂದು ಮುಖ್ಯಮಂತ್ರಿ ಶಿಂಧೆ ಮತ್ತು ಅವರ ಗುಂಪಿನ ಇತರ ಶಾಸಕ ರಿಗೆ ನೋಟಿಸ್ ಜಾರಿ ಮಾಡಿತು. ಎರಡು ವಾರಗಳ ನಂತರ ಪಟ್ಟಿ ಮಾಡಬೇಕೆಂದು ನ್ಯಾಯಾಲಯವು ಆದೇಶಿಸಿತ್ತು. ಶಿಂಧೆ ಅವರು ʻಅಸಾಂವಿಧಾನಿಕವಾಗಿ ಅಧಿಕಾರ ಕಸಿದುಕೊಂಡಿದ್ದಾರೆ ಮತ್ತು ಅಸಂವಿಧಾನಿಕ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆʼ ಎಂದು ಠಾಕ್ರೆ ಬಣ ಆರೋಪಿಸಿದೆ. 

ಶಿಂಧೆ ಸೇರಿದಂತೆ ಆಡಳಿತ ಪಾಳಯದ 16 ಶಾಸಕರನ್ನು ಅನರ್ಹಗೊಳಿಸಬೇಕೆಂಬ ಠಾಕ್ರೆ ಬಣದ ಮನವಿಯನ್ನು ಜನವರಿ 10ರಂದು ಸ್ಪೀಕರ್ ನಾರ್ವೇಕರ್ ತಿರಸ್ಕರಿಸಿದರು.

Tags:    

Similar News