ರಾಯ್‌ಪುರ, ಅ.6- ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಘಟನಾ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೆಲಂಗಾಣದ ನಕ್ಸಲ್ ವಿರೋಧಿ ಪಡೆ ಗ್ರೇಹೌಂಡ್ಸ್ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅಂತಾರಾಜ್ಯ ಗಡಿಯಲ್ಲಿರುವ ಉಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಡೊಳ್ಳಿಗುಡ ಗ್ರಾಮದ ಬಳಿ ಬೆಳಗ್ಗೆ 5.30 ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಿದರು.
ʻಗ್ರೇಹೌಂಡ್ಸ್ ತಂಡಕ್ಕೆ ಛತ್ತೀಸ್‌ಗಢ ಪೊಲೀಸರ ತಂಡ ಬೆಂಬಲ ನೀಡುತ್ತಿದೆ. ಗುಂಡಿನ ವಿನಿಮಯ ನಿಂತ ಬಳಿಕ ಮೂವರು ನಕ್ಸಲರ ದೇಹ, ಒಂದು ಎಲ್‌ಎಂಜಿ (ಲೈಟ್ ಮಷಿನ್ ಗನ್), ಒಂದು ಎಕೆ 47 ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆʼ ಎಂದು ತಿಳಿಸಿದರು.
ಈ ವಾರದ ಆರಂಭದಲ್ಲಿ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ 13 ನಕ್ಸಲರು ಹತರಾಗಿದ್ದರು.