ಎಲ್ಲ ವಿವಿಪ್ಯಾಟ್‌ ಎಣಿಕೆ: ಚುನಾವಣೆ ಆಯೋಗ, ಕೇಂದ್ರಕ್ಕೆ ಸುಪ್ರೀಂ ನೋಟಿಸ್

Update: 2024-04-02 06:38 GMT

ವಿವಿಪ್ಯಾಟ್ ಕಾಗದದ ಚೀಟಿಗಳ ಸಂಪೂರ್ಣ ಎಣಿಕೆ ಕೋರಿ ಸಲ್ಲಿಸಿದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಚುನಾವಣೆ ಆಯೋಗ (ಇಸಿ) ಮತ್ತು ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಪ್ರಸ್ತುತ ಕೇವಲ ಐದು ನಿರ್ದಿಷ್ಟವಲ್ಲದ ಇವಿಎಂಗಳನ್ನು ಪರಿಶೀಲಿಸುವ ಪದ್ಧತಿಯಿದೆ. ವೋಟರ್ ವೆರಿಫಿಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ವತಂತ್ರ ಮತ ಪರಿಶೀಲನೆ ವ್ಯವಸ್ಥೆ. ಮತದಾರ ತನ್ನ ಮತ ಸರಿಯಾಗಿ ಚಲಾವಣೆಯಾಗಿದೆಯೇ ಎಂದು ನೋಡಲು ಅವಕಾಶ ನೀಡುತ್ತದೆ. ವಿವಿಪ್ಯಾಟ್‌ನ ಕಾಗದದ ಚೀಟಿಯನ್ನು ಮತದಾರರು ವೀಕ್ಷಿಸಬಹುದು. ಅದನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸ ಲಾಗುತ್ತದೆ ಮತ್ತು ವಿವಾದದ ಸಂದರ್ಭದಲ್ಲಿ ತೆರೆಯಬಹುದಾಗಿದೆ.

ಕಾಂಗ್ರೆಸ್ ಪ್ರತಿಕ್ರಿಯೆ: ಕಾಂಗ್ರೆಸ್ ನ್ಯಾಯಾಲಯದ ಸೂಚನೆಯನ್ನು ʻಪ್ರಮುಖ ಮೊದಲ ಹೆಜ್ಜೆʼ ಎಂದು ಶ್ಲಾಘಿಸಿದೆ. ಲೋಕಸಭೆ ಚುನಾವಣೆಗೆ ಮೊದಲು ಈ ವಿಷಯವನ್ನು ನಿರ್ಧರಿಸಬೇಕು ಎಂದು ಹೇಳಿದೆ. 

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನ ಪೋಸ್ಟ್‌ನಲ್ಲಿ,ʻವಿವಿಪ್ಯಾಟ್‌ ಕುರಿತು ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಇವಿಎಂಗಳಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಚುನಾವಣೆ ಪ್ರಕ್ರಿಯೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು, ಶೇ.100 ವಿವಿಪ್ಯಾಟ್‌ಗಳ ಎಣಿಕೆ ಕೋರಿರುವ ಇಂಡಿಯ ಒಕ್ಕೂಟದ ನಾಯಕರ ನಿಯೋಗವನ್ನು ಭೇಟಿ ಮಾಡಲು ಚುನಾವಣೆ ಆಯೋಗ ನಿರಾಕರಿಸಿದೆʼ ಎಂದಿದ್ದಾರೆ. 

ʻನೋಟಿಸ್ ಒಂದು ಪ್ರಮುಖ ಹೆಜ್ಜೆ. ಆದರೆ, ಅದು ಅರ್ಥಪೂರ್ಣವಾಗಬೇಕಿದ್ದರೆ, ಚುನಾವಣೆಗೆ ಮೊದಲು ವಿಷಯವನ್ನು ನಿರ್ಧರಿಸಬೇಕುʼ ಎಂದು ರಮೇಶ್ ಸೇರಿಸಿದರು.

ಹಿಂದಿನ ಆದೇಶ: ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಸೋಮವಾರ (ಏಪ್ರಿಲ್ 1) ವಿಧಾನಸಭೆ ಕ್ಷೇತ್ರವೊಂದರ ಐದು ಇವಿಎಂಗಳ ಬದಲು ಎಲ್ಲ ವಿವಿಪ್ಯಾಟ್ ಚೀಟಿಗಳ ಎಣಿಕೆಗೆ ಕೋರಿ ಕಾರ್ಯಕರ್ತ ಅರುಣ್ ಕುಮಾರ್ ಅಗರವಾಲ್ ಅವರ ಪರ ವಕೀಲರಾದ ಗೋಪಾಲ್ ಶಂಕರನಾರಾಯಣನ್ ಮತ್ತು ನೇಹಾ ರಾಠಿ ಅವರ ಸಲ್ಲಿಕೆಗಳನ್ನು ಪರಿಗಣಿಸಿತು. ಏಪ್ರಿಲ್ 8, 2019 ರಂದು ಸುಪ್ರೀಂ ಕೋರ್ಟ್, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಪ್ಯಾಟ್ ಭೌತಿಕ ಪರಿಶೀಲನೆಗೆ ಒಳಗಾಗುವ ಇವಿಎಂಗಳ ಸಂಖ್ಯೆಯನ್ನು ಒಂದರಿಂದ ಐದಕ್ಕೆ ಹೆಚ್ಚಿಸುವಂತೆ ಇಸಿಗೆ ಆದೇಶಿಸಿತ್ತು.ಪ್ರಕರಣವನ್ನು ಮೇ 17 ರಂದು ವಿಚಾರಣೆಗೆ ಪಟ್ಟಿ ಮಾಡಿ, ಇಸಿ ಮತ್ತು ಕೇಂದ್ರಕ್ಕೆ ನೋಟಿಸ್ ನೀಡಿದೆ. 

ಏಕಕಾಲಿಕ ಪರಿಶೀಲನೆ: ಪ್ರತಿಯೊಂದು ವಿಧಾನಸಭೆ ಕ್ಷೇತ್ರವನ್ನು ಏಕಕಾಲದಲ್ಲಿ ಪರಿಶೀಲನೆ ನಡೆಸಿ, ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಿದರೆ, ಐದು-ಆರು ಗಂಟೆಗಳಲ್ಲಿ ವಿವಿಪ್ಯಾಟ್ ಸಂಪೂರ್ಣ ಪರಿಶೀಲನೆ ನಡೆಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. 24 ಲಕ್ಷ ವಿವಿಪ್ಯಾಟ್‌ಗಳನ್ನು ಖರೀದಿಸಲು ಸರ್ಕಾರ 5,000 ಕೋಟಿ ರೂ.ಖರ್ಚು ಮಾಡಿದೆ. ಆದರೆ, ಪ್ರಸ್ತುತ ಕೇವಲ 20,000 ವಿವಿಪ್ಯಾಟ್‌ಗಳ ಚೀಟಿಗಳನ್ನು ಮಾತ್ರ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. 

ವಿವಿ ಪ್ಯಾಟ್‌ ಮತ್ತು ಇವಿಎಂಗೆ ಸಂಬಂಧಿಸಿದಂತೆ ತಜ್ಞರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈಹಿಂದೆ ವಿವಿ ಪ್ಯಾಟ್‌ ಮತ್ತು ಇವಿಎಂ ಮತಗಳ ಎಣಿಕೆಯಲ್ಲಿ ಹೆಚ್ಚಿನ ವ್ಯತ್ಯಾಸಗಳು ವರದಿಯಾಗಿವೆ. ಎಲ್ಲಾ ವಿವಿಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡುವುದು ಮತ್ತು ಮತದಾರ ತನ್ನ ಮತ ಸರಿಯಾಗಿ ಚಲಾವಣೆಯಾಗದೆಯೇ ಎಂಬುದನ್ನು ಪರಿಶೀಲಿಸಲು ವಿವಿಪ್ಯಾಟ್ ಚೀಟಿಯನ್ನು ಮತಪೆಟ್ಟಿಗೆಯೊಳಗೆ ಹಾಕಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

Tags:    

Similar News