NEET-UG 2024: ಪರೀಕ್ಷೆ ರದ್ದುಗೊಳಿಸಲು ಸುಪ್ರೀಂ ನಿರಾಕರಣೆ
ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಆದರೆ, ಸಂಪೂರ್ಣ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಇಲ್ಲ.ಮರುಪರೀಕ್ಷೆ 2 ದಶಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸಿಜೆಐ ಹೇಳಿದರು.;
ನೀಟ್-ಯುಜಿ 2024 ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ, ಮರುಪರೀಕ್ಷೆ 2 ದಶಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹಾಗೂ ಹಿರಿಯ ವಕೀಲರಾದ ನರೇಂದರ್ ಹೂಡಾ, ಸಂಜಯ್ ಹೆಗ್ಡೆ, ಮ್ಯಾಥ್ಯೂಸ್ ನೆಡುಮಾಪ್ರ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ವಕೀಲರ ವಾದವನ್ನುಸುಮಾರು 4 ದಿನ ಕಾಲ ಆಲಿಸಿತು.
ತೀರ್ಪಿನಲ್ಲಿ ಏನಿದೆ?: ಎರಡು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನಿರ್ದೇಶಿಸಿದ ಪೀಠ, ಆನಂತರ ವಿವರವಾದ ತೀರ್ಪು ನೀಡಲಾಗುತ್ತದೆ ಎಂದು ಹೇಳಿದೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಬಗ್ಗೆ ಯಾವುದೇ ಅನುಮಾನ ಇಲ್ಲ. ಆದರೆ, ಇಡೀ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ತೋರಿಸಲು ಯಾವುದೇ ಸಾಕ್ಷ್ಯ ಇಲ್ಲದ ಕಾರಣ ಪರೀಕ್ಷೆಯನ್ನು ರದ್ದುಪಡಿಸುವ ಬೇಡಿಕೆಯನ್ನು ಸಮರ್ಥಿಸಲಾಗುವುದಿಲ್ಲ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿದರು. ʻಪ್ರಸ್ತುತ ಪರೀಕ್ಷೆಯ ಫಲಿತಾಂಶ ಕಳಂಕಿತವಾಗಿದೆ ಅಥವಾ ಪರೀಕ್ಷೆಯ ಪಾವಿತ್ರ್ಯದ ವ್ಯವಸ್ಥಿತ ಉಲ್ಲಂಘನೆಯಾಗಿದೆ ಎಂಬ ತೀರ್ಮಾನಕ್ಕೆ ಬರಲು ದಾಖಲೆಗಳ ಕೊರತೆಯಿದೆ,ʼ ಎಂದು ಹೇಳಿದರು.
ಮರುಪರೀಕ್ಷೆಯಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ: ಸಿಬಿಐ ಆರು ವರದಿ ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದೆ. ಇದುವರೆಗೆ ಹಜಾರಿಬಾಗ್ ಮತ್ತು ಪಾಟ್ನಾದಲ್ಲಿ ಸುಮಾರು 155 ವಿದ್ಯಾರ್ಥಿಗಳು ವಂಚನೆಯಿಂದ ಲಾಭ ಪಡೆದಿರುವಂತೆ ತೋರುತ್ತಿದೆ ಎಂದು ಸಿಬಿಐ ಸೂಚಿಸಿದೆ. ತನಿಖೆಯಿಂದ ಹೆಚ್ಚಿನ ಫಲಾನುಭವಿಗಳು ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ʻಹೊಸದಾಗಿ ನೀಟ್-ಯುಜಿ ನಡೆಸಲು ನಿರ್ದೇಶಿಸುವುದರಿಂದ 2 ದಶಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಇದರಲ್ಲಿ (1) ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ವೇಳಾಪಟ್ಟಿಯ ನಾಶ (2) ವೈದ್ಯಕೀಯ ಶಿಕ್ಷಣದ ಮೇಲೆ ಪರಿಣಾಮ (3) ಭವಿಷ್ಯದಲ್ಲಿ ವೈದ್ಯಕೀಯ ವೃತ್ತಿಪರರ ಲಭ್ಯತೆ ಮೇಲೆ ಪರಿಣಾಮ ಮತ್ತು (4) ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ ಅನನುಕೂಲತೆ ಸೇರಿದೆ,ʼ ಎಂದು ಅವರು ಹೇಳಿದರು.