Actor Siddique : ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು
2016ರಲ್ಲಿ ಘಟನೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ಬಗ್ಗೆ ಎಂಟು ವರ್ಷಗಳ ನಂತರ ಆಗಸ್ಟ್‌ನಲ್ಲಿ ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿದೆ ಎಂಬ ಅಂಶವನ್ನು ಉನ್ನತ ನ್ಯಾಯಾಲಯ ಗಮನಿಸಿ ಜಾಮೀನು ನೀಡಿದೆ
ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ಸಿದ್ದಿಕ್ ಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ನ್ಯಾಯಪೀಠವು ಹಿರಿಯ ನಟ ತನ್ನ ಪಾಸ್‌ಪೋರ್ಟ್ ಅನ್ನು ನೀಡಬೇಕು ಹಾಗೂ ತನಿಖಾಧಿಕಾರಿಯೊಂದಿಗೆ ಸಹಕರಿಸಬೇಕಾಗುತ್ತದೆ ಎಂದು ಹೇಳಿದೆ.
2016ರಲ್ಲಿ ಘಟನೆ ನಡೆದ ಬಗ್ಗೆ ಎಂಟು ವರ್ಷಗಳ ನಂತರ ಆಗಸ್ಟ್‌ನಲ್ಲಿ ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿದೆ ಎಂಬ ಅಂಶವನ್ನು ಉನ್ನತ ನ್ಯಾಯಾಲಯ ಗಮನಿಸಿ ಜಾಮೀನು ನೀಡಿದೆ. ಸೆಪ್ಟೆಂಬರ್ 30ರಂದು ನ್ಯಾಯಾಲಯವು ಸಿದ್ದೀಕ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತು.
ತನಿಖೆಯಲ್ಲಿ ಸಿದ್ದೀಕ್ ಅವರ ಸಹಕಾರದ ಕೊರತೆಯಿದೆ ಎಂದು ಕೇರಳ ಪೊಲೀಸರು ನ್ಯಾಯಾಲಯದ ಮುಂದೆ ಹೇಳಿದ್ದರು. ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ಸ್ಥಿತಿ ವರದಿಯಲ್ಲಿ, ಹಿರಿಯ ನಟ ತನಿಖೆಗೆ ಅಡ್ಡಿಪಡಿಸುತ್ತಿದ್ದು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಳಿಸುವುದರ ಜೊತೆಗೆ ಎಲೆಕ್ಟ್ರಾನಿಕ್ ಸಾಧನಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿತ್ತು.
ಅತ್ಯಾಚಾರ ಪ್ರಕರಣದಲ್ಲಿ ಸಿದ್ದೀಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಸೆಪ್ಟೆಂಬರ್ 24 ರಂದು ತಿರಸ್ಕರಿಸಿತು, ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಅಪರಾಧದ ಸರಿಯಾದ ತನಿಖೆಗಾಗಿ ಅವರ ಕಸ್ಟಡಿ ವಿಚಾರಣೆ ಅನಿವಾರ್ಯ ಎಂದು ಹೇಳಿತ್ತು.