ಚುನಾವಣೆ ಬಾಂಡ್ ಮಾಹಿತಿ ನೀಡಲು ಎಸ್‌ಬಿಐ ನಿರಾಕರಣೆ
ಚುನಾವಣೆ ಆಯೋಗದ ಜಾಲತಾಣದಲ್ಲಿ ದತ್ತಾಂಶ ಲಭ್ಯವಿದೆ;
ಹೊಸದಿಲ್ಲಿ, ಅ.11- ಚುನಾವಣೆ ಆಯೋಗಕ್ಕೆ ಒದಗಿಸಿದ ಬಾಂಡ್‌ಗಳ ವಿವರಗಳನ್ನು ಆರ್‌ಟಿಐ ಕಾಯ್ದೆಯಡಿ ಬಹಿರಂಗಪಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿರಾಕರಿಸಿದೆ.
ಬಾಂಡ್ ಕುರಿತ ಮಾಹಿತಿಗಳು ಚುನಾವಣೆ ಆಯೋಗದ ಜಾಲತಾಣದಲ್ಲಿ ಸಾರ್ವಜನಿಕವಾಗಿ ಲಭ್ಯವಿದ್ದರೂ, ಇದು ವಿಶ್ವಾಸಾರ್ಹ ಮೂಲದಲ್ಲಿರುವ ವೈಯಕ್ತಿಕ ಮಾಹಿತಿ ಎಂದು ಹೇಳಿಕೊಂಡಿದೆ. ಚುನಾವಣಾ ಬಾಂಡ್ ಯೋಜನೆ ʻಅಸಾಂವಿಧಾನಿಕ ಮತ್ತು ಅನಿಯಂತ್ರಿತʼ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಏಪ್ರಿಲ್ 12, 2019 ರಿಂದ ಖರೀದಿಸಿದ ಬಾಂಡ್‌ಗಳ ಸಂಪೂರ್ಣ ವಿವರಗಳನ್ನು ಚುನಾವಣೆ ಆಯೋಗಕ್ಕೆ ಒದಗಿಸುವಂತೆ ಫೆಬ್ರವರಿ 15 ರಂದು ಎಸ್‌ಬಿಐಗೆ ನಿರ್ದೇಶನ ನೀಡಿತು. ಮಾರ್ಚ್ 13ರಂದು ಅದು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪ್ರಕಟಿಸಿತು.
ಆರ್‌ಟಿಐ ಕಾರ್ಯಕರ್ತ ಕಮೋಡೋರ್ (ನಿವೃತ್ತ) ಲೋಕೇಶ್ ಬಾತ್ರಾ ಅವರು ಮಾರ್ಚ್ 13 ರಂದು ಎಸ್‌ಬಿಐ ಸಂಪರ್ಕಿಸಿ, ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಇಸಿಗೆ ಒದಗಿಸಿದಂತೆ ಡಿಜಿಟಲ್ ರೂಪದಲ್ಲಿ ಚುನಾವಣೆ ಬಾಂಡ್‌ಗಳ ಸಂಪೂರ್ಣ ದತ್ತಾಂಶವನ್ನು ಕೋರಿದ್ದರು. ಮಾಹಿತಿ ಹಕ್ಕು ಕಾಯಿದೆಯಡಿಯ ಎರಡು ವಿನಾಯಿತಿ ಷರತ್ತುಗಳನ್ನು ಉಲ್ಲೇಖಿಸಿ, ಬ್ಯಾಂಕ್ ಮಾಹಿತಿ ನಿರಾಕರಿಸಿದೆ. ಅವೆಂದರೆ, ಸೆಕ್ಷನ್ 8(1)(ಇ) ವಿಶ್ವಾಸಾರ್ಹ ಮೂಲದಲ್ಲಿರುವ ವೈಯಕ್ತಿಕ ಮಾಹಿತಿ ಮತ್ತು ವಿಭಾಗ 8(1)(ಜೆ) ವೈಯಕ್ತಿಕ ಮಾಹಿತಿ ತಡೆಹಿಡಿಯುವಿಕೆ.ʻನೀವು ಕೋರಿದ ಮಾಹಿತಿ ಖರೀದಿದಾರರು ಮತ್ತು ರಾಜಕೀಯ ಪಕ್ಷಗಳ ವಿವರಗಳನ್ನು ಒಳಗೊಂಡಿದೆ. ಆದ್ದರಿಂದ, ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಇ) ಮತ್ತು (ಜೆ) ಅಡಿಯಲ್ಲಿ ಬಹಿರಂಗಪಡಿಸಲು ಆಗುವುದಿಲ್ಲʼ ಎಂದು ಎಸ್‌ಬಿಐ ಡೆಪ್ಯುಟಿ ಜನರಲ್ ಮ್ಯಾನೇಜರ್ ಬುಧವಾರ ತಿಳಿಸಿದ್ದಾರೆ.
ಚುನಾವಣೆ ಬಾಂಡ್ ಪ್ರಕರಣದಲ್ಲಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ಎಸ್‌ಬಿಐ ಪಾವತಿಸಿದ ಶುಲ್ಕದ ವಿವರಗಳನ್ನು ಕೂಡ ಬಾತ್ರಾ ಕೋರಿದ್ದರು. ʻಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಎಸ್‌ಬಿಐ ನಿರಾಕರಿಸಿರುವುದು ವಿಲಕ್ಷಣʼ ಎಂದು ಬಾತ್ರಾ ತಿಳಿಸಿದರು. ʻಸಾಲ್ವೆ ಅವರ ಶುಲ್ಕ ಮತ್ತು ತೆರಿಗೆದಾರರ ಹಣವನ್ನು ಒಳಗೊಂಡಿರುವ ಮಾಹಿತಿಯನ್ನು ಬ್ಯಾಂಕ್ ನಿರಾಕರಿಸಿದೆʼ ಎಂದು ಹೇಳಿದರು. ಇಸಿ ಮಾರ್ಚ್ 14 ರಂದು ತನ್ನ ವೆಬ್‌ಸೈಟ್‌ನಲ್ಲಿ ಎಸ್‌ಬಿಐ ಒದಗಿಸಿದ ದತ್ತಾಂಶವನ್ನು ಪ್ರಕಟಿಸಿದೆ.
ಮು.ನ್ಯಾ. ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಖರೀದಿದಾರರ ಹೆಸರು, ಮೊತ್ತ ಮತ್ತು ಖರೀದಿಯ ದಿನಾಂಕ ಸೇರಿದಂತೆ ಬಾಂಡ್‌ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಿತ್ತು.
ಏಪ್ರಿಲ್ 1, 2019 ಮತ್ತು ಫೆಬ್ರವರಿ 15,2024 ರೊಳಗೆ 22,217 ಚುನಾವಣಾ ಬಾಂಡ್ ಖರೀದಿಯಾಗಿದೆ. ಅದರಲ್ಲಿ 22,030ನ್ನು ರಾಜಕೀಯ ಪಕ್ಷಗಳು ರಿಡೀಮ್ ಮಾಡಿಕೊಂಡಿವೆ ಎಂದು ಎಸ್‌ಬಿಐ ಹೇಳಿದೆ.