DPDP vs RTI | ಕೇಂದ್ರದ ಡೇಟಾ ಕಾನೂನಿನ ವಿರುದ್ಧ ಆರ್‌ಟಿಐ ಕಾರ್ಯಕರ್ತರ ಹೋರಾಟ

ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆಯ ನಿಯಮದಲ್ಲಿ ವೈಯಕ್ತಿಕ ಮಾಹಿತಿ ಕೇಳುವ ಹಕ್ಕನ್ನು ನಿರಾಕರಿಸುವ ಜತೆಗೆ ಗರಿಷ್ಠ 500 ಕೋಟಿ ರೂಪಾಯಿ ದಂಡ ವಿಧಿಸುವ ಸಾಧ್ಯತೆಗಳನ್ನು ಸೇರಿಸಲಾಗಿದೆ. ಇದರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.;

Update: 2025-03-29 01:40 GMT

ಕೇಂದ್ರ ಸರ್ಕಾರವು ಮುಂದಿನ ತಿಂಗಳಲ್ಲಿ ವಿವಾದಾತ್ಮಕ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆಯ (ಡಿಪಿಡಿಪಿ) ನಿಯಮಗಳನ್ನು ಅಂತಿಮಗೊಳಿಸುವ ಸಾಧ್ಯತೆಯ ಇರುವ ನಡುವೆಯೇ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತರು, ಕೆಲವು ನಿಯಮಗಳನ್ನು ಪುನರ್‌ಪರಿಶೀಲಿಸಲು ಅಥವಾ ರದ್ದುಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ತಾವು ಆಕ್ಷೇಪ ಮಾಡುತ್ತಿರುವ ನಿಯಮಗಳು ಆರ್‌ಟಿಐ ಕಾಯಿದೆಗೆ ಮರಣಶಾಸನ ಎಂದು ಅವರೆಲ್ಲರೂ ಆರೋಪಿಸಿದ್ದಾರೆ.

ವಾರದ ಆರಂಭದಲ್ಲಿ,  ಆರ್‌ಟಿಐ ಕಾರ್ಯಕರ್ತರಾದ ನಿಖಿಲ್ ದೇಯ್, ಅಂಜಲಿ ಭಾರದ್ವಾಜ್, ಅಮೃತಾ ಜೋಹ್ರಿ, ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಸಂಸ್ಥಾಪಕ ಅಪಾರ್ ಗುಪ್ತಾ, ಖ್ಯಾತ ಆರ್ಥಶಾಸ್ತ್ರಜ್ಞ ಜಯತಿ ಘೋಷ್, ಮಾಜಿ ಕೇಂದ್ರ ಮಾಹಿತಿ ಆಯುಕ್ತ ಎಂಎಂ ಅನ್ಸಾರಿ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮುಖ್ಯಸ್ಥ ಅನಂತ್ ನಾಥ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು, ಮೋದಿ ನೇತೃತ್ವದ ಸರ್ಕಾರವು, ಹಿಂದಿನ ಯುಪಿಎ ಅವಧಿಯ ಆರ್‌ಟಿಐ ಕಾಯಿದೆಯನ್ನು ಡಿಪಿಡಿಪಿ ಕಾಯಿದೆಯ ಮೂಲಕ ದುರ್ಬಲಗೊಳಿಸುವ ಯೋಜನೆ ರೂಪಿಸಿದೆ ಎಂಬುದರ ಬಗ್ಗೆ ಬಗ್ಗೆ ಚರ್ಚಿಸಿದರು.

'ಪಾರದರ್ಶಕತೆಗೆ ಧಕ್ಕೆ'

ರಾಹುಲ್ ಗಾಂಧಿ ಎಕ್ಸ್​ ಮೂಲಕ ಒಂದು ಪೋಸ್ಟ್​ ಮಾಡಿ, "ಡಿಪಿಡಿಪಿ ಕಾಯಿದೆ ಜಾರಿಗೆ ಬಂದರೆ ಗೌಪ್ಯತೆ ನೆಪದಲ್ಲಿ ಸಾರ್ವಜನಿಕರಿಗೆ ನೀಡುವ ಮಾಹಿತಿಗೆ ಕಡಿವಾಣ ಹಾಕಲು ಮುಂದಾಗಲಾಗಿದೆ.  ಈ ಬಗ್ಗೆ ನಾಗರಿಕರು ಮತ್ತು ಪತ್ರಕರ್ತರು ಸರ್ಕಾರಕ್ಕೆ ಚುರುಕು ಮುಟ್ಟಿಸಬೇಕು" ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವು ತನ್ನ ವೈಫಲ್ಯಗಳಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾರದರ್ಶಕತೆಯನ್ನು ದುರ್ಬಲಗೊಳಿಸುತ್ತಿದೆ ಮತ್ತು ಪ್ರಜಾಪ್ರಭುತ್ವದ ಕಾವಲುಗಾರರನ್ನುಹಣಿಯಲು ಯತ್ನಿಸುತ್ತಿದೆ," ಎಂದು ಆರೋಪಿಸಿದ್ದಾರೆ. ಈ ವೇಳೆ ಅವರು ಇಂಡಿಯಾ ಮೈತ್ರಿಕೂಟವು, ಡಿಪಿಡಿಪಿ ಕಾಯಿದೆಯ ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ಹೇಳಿದ್ದಾರೆ.  

ಶುಕ್ರವಾರ (ಮಾರ್ಚ್ 28), ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಡಿಪಿಡಿಪಿ ಕಾಯಿದೆಯ ಸೆಕ್ಷನ್ 44(3) "ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಅನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಎಂದು ಆಕ್ಷೇಪಿಸಿದ್ದರು. ಈ ಮೂಲಕ ಅಂಕಿ ಅಂಶಗಳನ್ನು ಕೇಳುವ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಇದು ಜಾರಿಗೆ ಬಂದರೆ, ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರ ಬಗ್ಗೆ ಅಥವಾ ಸರ್ಕಾರ ಕೊಡಲು ಇಷ್ಟಪಡದ ಯಾವುದೇ ಮಾಹಿತಿ ಪಡೆಯಲು ಸಾಧ್ಯವೇ ಇಲ್ಲಎಂದು ಹೇಳಿದ್ದರು.

ಡಿಪಿಡಿಪಿ ಕಾಯಿದೆಯಲ್ಲಿರುವ , ತಪ್ಪು ಮಾಹಿತಿಗೆ ಗರಿಷ್ಠ 500 ಕೋಟಿ ರೂಪಾಯಿಗಳ ದಂಡ ವಿಧಿಸುವ ನಿಯಮ, ಮಾಹಿತಿ ಕೇಳುವ ಹಕ್ಕಿಗೆ ಮಾರಕ ಎಂದು ಒತ್ತಿ ಹೇಳಿದ್ದು, ಸರ್ಕಾರವು ಕಾಯಿದೆಯ ಸೆಕ್ಷನ್ 44(3) ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದರು. 

ನಿಯಮ ರಚನೆಯ ವಿಳಂಬ

ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನೇತೃತ್ವದಲ್ಲಿ ಡಿಪಿಡಿಪಿ ಕಾಯಿದೆಯನ್ನು ಸಂಸತ್ತು ಆಗಸ್ಟ್ 2023ರಲ್ಲಿ ಅಂಗೀಕರಿಸಿತ್ತು. ಆದರೆ, ಇದರ ನಿಯಮಗಳು ವಿಶೇಷವಾಗಿ ಸೆಕ್ಷನ್ 44(3), ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಕಾಯಿದೆಯ ಜಾರಿಗೆ ನಿಯಮಗಳನ್ನು ಅಂತಿಮಗೊಳಿಸುವ ಸರ್ಕಾರದ ಪ್ರಯತ್ನಕ್ಕೆ ತೊಡಕಾಗಿದೆ. ಈ ವರ್ಷದ ಜನವರಿಯಲ್ಲಿ, ಸಚಿವಾಲಯ ಡಿಪಿಡಿಪಿ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಫೆಬ್ರವರಿ 8ರವರೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಆ ನಂತರ ಆ ಅವಧಿಯನ್ನು ಮಾರ್ಚ್ 5 ರವರೆಗೆ ವಿಸ್ತರಿಸಿತ್ತು.

ಎರಡು ತಿಂಗಳ ಸಾರ್ವಜನಿಕ ಸಮಾಲೋಚನೆಯ ಸಮಯದಲ್ಲಿ ಸ್ವೀಕರಿಸಲಾದ ಪ್ರತಿಕ್ರಿಯೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರಲ್ಲದೆ, ಏಪ್ರಿಲ್‌ನಲ್ಲಿ ನಿಯಮಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆದರೆ, ಅಧಿಕಾರಿಗಳ ಪ್ರಕಾರ, ಇಷ್ಟೆಲ್ಲ ವಿರೋಧದ ನಡುವೆಯೂ ಬದಲಾವಣೆ ಮಾಡದಿರುವ ಸಾಧ್ಯತೆಗಳು ತುಂಬಾ ಕಡಿಮೆ.

ಪಾರದರ್ಶಕತೆಗೆ ಆತಂಕ

ಆರ್‌ಟಿಐ ಕಾರ್ಯಕರ್ತರಲ್ಲಿ ನಿಬಂಧನೆಗಳ ಬಗ್ಗೆ ಆಕ್ರೋಶ ಸ್ಪಷ್ಟವಾಗಿದೆ. ಡಿಪಿಡಿಪಿ ಕಾಯಿದೆಯ ಸೆಕ್ಷನ್ 44(3) ಮೂಲಕ ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ, ಮಾಹಿತಿ ನಿರಾಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದು ಅವರ ಆರೋಪ. ಕೇಂದ್ರದ ಕಾನೂನಾತ್ಮಕ ತಂತ್ರವು ಪಾರದರ್ಶಕತೆಯ ರಚನೆಯನ್ನೇ ನಾಶ ಮಾಡುತ್ತದೆ ಎಂದು ಅವರು ನಂಬಿದ್ದಾರೆ.

ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫಾರ್ಮೇಶನ್​ (ಎನ್‌ಸಿಪಿಆರ್‌ಐ) ಸಹ-ಸಂಯೋಜಕಿ ಅಂಜಲಿ ಭಾರದ್ವಾಜ್, ದ ಫೆಡರಲ್‌ ಜತೆ ಮಾತನಾಡಿ, ಡಿಪಿಡಿಪಿ ಕಾಯಿದೆಯೇ ಅಪಾಯಕಾರಿ. ಇದು ಆರ್‌ಟಿಐ ಕಾಯಿದೆಯನ್ನು ಬದಲಾಯಿಸುವ ಮೂಲಕ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮತ್ತು ಸರ್ಕಾರವನ್ನು ಹೊಣೆಗಾರನನ್ನಾಗಿ ಮಾಡುವ ಜನರ ಸಾಮರ್ಥ್ಯ ಇಲ್ಲವಾಗಿಸುತ್ತದೆ. ಕಾಯಿದೆ ಮೂಲಕ ಡೇಟಾ ಪ್ರೊಟೆಕ್ಷನ್ ಬೋರ್ಡ್‌ಗೆ ಅಧಿಕಾರ ನೀಡಲಾಗಿದ್ದು,. ತಪ್ಪುಗಳ ನೆಪದಲ್ಲಿ 500 ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸಲು ಸಾಧ್ಯವಿದೆ. ಇದು ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತರು, ಆರ್​ಟಿಐ ಕಾರ್ಯಕರ್ತರು ಮತ್ತು ಮಾಧ್ಯಮಗಳನ್ನು ಮೌನವಾಗಿಸುವ ಒಂದು ಬಹುದೊಡ್ಡ ಹುನ್ನಾರ, ಎಂದು ಹೇಳಿದ್ದಾರೆ. 

ನಿಖಿಲ್ ದೇಯ್ ಮಾತನಾಡಿ, "ತಿದ್ದುಪಡಿಗಳ ಪ್ರಕಾರ, ಮಾಹಿತಿ ಕೇಳುವ ಯೋಜನೆಯಡಿ ಯಾರು ಲಾಭ ಪಡೆದರು ಅಥವಾ ಒಪ್ಪಂದವನ್ನು ಯಾರು ಅನುಮೋದಿಸಿದರು ಎಂಬಂತಹ ನಿರ್ಣಾಯಕ ವಿವರಗಳನ್ನು ಮರೆಮಾಚಬಹುದು. ಆರ್‌ಟಿಐಯನ್ನು ಅವಲಂಬಿಸಿ ವಿಷಯಗಳನ್ನು ಬಯಲಿಗೆಳೆಯುವ ಪತ್ರಕರ್ತರಿಗೆ, 'ವೈಯಕ್ತಿಕ ಡೇಟಾ' ಎಂಬ ನಿರಾಕರಣೆಯ ಉತ್ತರ ನೀಡಲು ಸಾಧ್ಯ. ಅದೇ ರೀತಿ ತನಿಖೆ ಮಾಡುತ್ತಿರುವ ವ್ಯಕ್ತಿಗಳ ಸಮ್ಮತಿಯಿಲ್ಲದೆ ಪ್ರಕಟಿಸಿದರೆ ದೊಡ್ಡ ಮೊತ್ತದೆ ದಂಡಕ್ಕೂ ಗುರಿಯಾಗಬೇಕಾಗುತ್ತದೆ" ಎಂದು ಅವರು ವಿವರಿಸಿದರು.

ಸರ್ಕಾರದ ಸಮರ್ಥನೆಗೆ ಒಪ್ಪಿಗೆ ಇಲ್ಲ

ಕೇಂದ್ರ ಸರ್ಕಾರ, ನಿರೀಕ್ಷೆಯಂತೆ ಪ್ರತಿಪಕ್ಷಗಳು ಹಾಗೂ ಆರ್​​ಟಿಐ ಕಾರ್ಯಕರ್ತರು ಸೇರಿದಂತೆ ಎಲ್ಲರ ಆರೋಪಗಳನ್ನು ತಿರಸ್ಕರಿಸಿದೆ. ಬದಲಿಗೆ ಡಿಪಿಡಿಪಿ ವೈಯಕ್ತಿಕ ಮಾಹಿತಿಗೆ ಸಂಪೂರ್ಣ ರಕ್ಷಣೆಗಳನ್ನು ನೀಡುತ್ತದೆ ಎಂದು ವಾದಿಸಿದೆ. ಭಾರದ್ವಾಜ್, ದೇಯ್ ಮತ್ತು ಇತರ ಹಲವರು ಕೇಂದ್ರದ ಭರವಸೆ ಸುಳ್ಳು ಎಂದಿದ್ದಾರೆ.  ಕೇಂದ್ರ ಮಾಹಿತಿ ಆಯೋಗದ ವಾರ್ಷಿಕ ವರದಿಗಳನ್ನು  ಪರಿಶೀಲಿಸಿದರೆ,  ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಆರ್‌ಟಿಐ ಅರ್ಜಿಗಳನ್ನು ತಿರಸ್ಕರಿಸಲು ಆಗಾಗ ಬಳಸಲಾಗಿರುವುದನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ.

 'ಸಂಪೂರ್ಣ ನಿಷೇಧ'

 ಡಿಪಿಡಿಪಿ ಕಾಯಿದೆಯು ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಅನ್ನು ತಿದ್ದುಪಡಿ ಮಾಡುವ ಮೂಲಕ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಬಹಿರಂಗಪಡಿಸುವುದನ್ನು ನಿಷೇಧ ಮಾಡುವುದೇ ಸಮಸ್ಯೆಗೆ ಮೂಲ. ಸೆಕ್ಷನ್ 8(1)(ಜೆ) ವೈಯಕ್ತಿಕ ಮಾಹಿತಿಯನ್ನು ತಡೆಹಿಡಿಯಲು ಅವಕಾಶಗಳನ್ನು ನೀಡಿತ್ತು. ಡಿಪಿಡಿಪಿ  ಸಂಪೂರ್ಣ ನಿಷೇಧ ಮಾಡುತ್ತದೆ. ಹಾಗಾದರೆ ಇದು,  ಸುಪ್ರೀಂ ಕೋರ್ಟ್ ಪದೇಪದೇ ಎತ್ತಿಹಿಡಿದಿರುವ ಮಾಹಿತಿ ಪಡೆಯುವ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ.  ಇದು ಸರ್ಕಾರ ಮತ್ತು ಅದರ ಮಿತ್ರರನ್ನು ರಕ್ಷಿಸಲು ಮಾಡಿರುವ ಕಾಯಿದೆ.  ಸಾಲಗಳ ಡಿಫಾಲ್ಟರ್‌ಗಳು ಅಥವಾ ಚುನಾವಣಾ ಬಾಂಡ್ ಖರೀದಿದಾರರಿಗೆ ಅನುಕೂಲ ಮಾಡಿಕೊಡುವುದೇ ಇದರ ಉದ್ದೇಶ" ಎಂದು ವಕೀಲ ಪ್ರಶಾಂತ್ ಭೂಷಣ್ ''ದ ಫೆಡರಲ್‌'' ಜತೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ. 

Tags:    

Similar News