ಜಾತಿ ಗಣತಿಗೆ ಆರ್‌ಎಸ್‌ಎಸ್ ಬೆಂಬಲ

Update: 2024-09-02 13:22 GMT

ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ರಾಷ್ಟ್ರೀಯ ಸಮನ್ವಯ ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಜಾತಿ ಗಣತಿಗೆ ತನ್ನ ಬೆಂಬಲ ಸೂಚಿಸಿತು. ಆದರೆ, ಅದನ್ನು ರಾಜಕೀಯ ಅಥವಾ ಚುನಾವಣೆ ಉದ್ದೇಶಗಳಿಗೆ ಬಳಸಬಾರದು ಎಂದು ಹೇಳಿದೆ. 

ಆರ್‌ಎಸ್‌ಎಸ್ ಪ್ರಚಾರ ಉಸ್ತುವಾರಿ ಸುನೀಲ್ ಅಂಬೇಕರ್ ಮಾತನಾಡಿ,ʼಹಿಂದೂ ಸಮಾಜದಲ್ಲಿ ಜಾತಿ ಮತ್ತು ಜಾತಿ ಸಂಬಂಧಗಳು ಸೂಕ್ಷ್ಮ ವಿಷಯಗಳಾಗಿವೆ. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಪ್ರಮುಖ ಸಂಗತಿಯಾಗಿದೆ. ಆದ್ದರಿಂದ ಇದನ್ನು ಬಹಳ ಸೂಕ್ಷ್ಮವಾಗಿ ವ್ಯವಹರಿಸಬೇಕೇ ಹೊರತು ಚುನಾವಣೆ ಅಥವಾ ರಾಜಕೀಯಕ್ಕಾಗಿ ಅಲ್ಲ,ʼ ಎಂದರು. 

ಒಮ್ಮತಕ್ಕೆ ಕರೆ: ಸಂಘ ಪರಿವಾರದ ರಾಜಕೀಯ ಅಂಗವಾಗಿರುವ ಬಿಜೆಪಿ, ಈ ವಿಚಾರದಿಂದ ನುಣುಚಿಕೊಳ್ಳುತ್ತಿದೆ. ಪ್ರತಿಪಕ್ಷಗಳು ಮತ್ತು ಬಿಜೆಪಿಯ ಕೆಲವು ಮಿತ್ರಪಕ್ಷಗಳಾದ ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ರಾಷ್ಟ್ರೀಯ ಜಾತಿ ಗಣತಿಗೆ ಒತ್ತಾಯಿಸುತ್ತಿವೆ. ಬಿಹಾರದಲ್ಲಿ ಜೆಡಿಯು ನೇತೃತ್ವದ ಸರ್ಕಾರವು ಕಳೆದ ವರ್ಷ ರಾಜ್ಯದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿತು. ಬಿಜೆಪಿ ಬಹಿರಂಗವಾಗಿ ವಿರೋಧಿಸಿಲ್ಲ. ಆದರೆ, ಯಾವುದೇ ಬದ್ಧತೆ ತೋರಿಸಿಲ್ಲ. 

ಜಾತಿ ಗಣತಿಯ ಉತ್ತಮ ಅಂಶವನ್ನು ಒತ್ತಿಹೇಳುವ ಮೂಲಕ ಆರ್‌ಎಸ್‌ಎಸ್, ಸರ್ಕಾರಕ್ಕೆ ಅವಕಾಶ ನೀಡುತ್ತಿದೆ. ಮೀಸಲು ಲಾಭವನ್ನು ಅನುಭವಿಸುತ್ತಿರುವ ಸಮುದಾಯಗಳ ನಡುವೆ ಒಮ್ಮತ ಇರಬೇಕು; ಸಮಾಲೋಚನೆ ಮತ್ತು ಒಮ್ಮತವಿಲ್ಲದೆ, ಯಾವುದೇ ಹೆಜ್ಜೆ ಇಡಬಾರದು ಎಂದು ಆರ್‌ಎಸ್‌ಎಸ್ ಹೇಳಿದೆ. 

ಬಿರುಕು ಮೂಡುವ ಲಕ್ಷಣಗಳು: ಜಾತಿ ಗಣತಿ ಮತ್ತು ಎಸ್‌ಸಿ/ಎಸ್‌ಟಿಗಳ ಉಪ ವರ್ಗೀಕರಣದ ಕುರಿತ ಆರ್‌ಎಸ್‌ಎಸ್‌ ಹೇಳಿಕೆಯು ಬಿಜೆಪಿ ಮತ್ತು ಅದರ ಮಾತೃಸಂಸ್ಥೆಯ ನಡುವಿನ ಭಿನ್ನಾಭಿಪ್ರಾಯದ ಹೊಸ ಸೂಚನೆಯಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಚುನಾವಣೆ ಗೆಲ್ಲಲು ಬಿಜೆಪಿಗೆ ಇನ್ನು ಮುಂದೆ ಆರ್‌ಎಸ್‌ಎಸ್‌ನ ಸಹಾಯ ಅಗತ್ಯವಿಲ್ಲ ಎಂದು ಹೇಳಿದ್ದರು.

Tags:    

Similar News