ಆರ್‌ಎಸ್‌ಎಸ್‌ ಶತಮಾನೋತ್ಸವ: 'ಸ್ವದೇಶಿಯೇ ಏಕೈಕ ಮಾರ್ಗ' ಎಂದು ಕರೆ ನೀಡಿದ ಮೋಹನ್ ಭಾಗವತ್

ಆರ್‌ಎಸ್‌ಎಸ್‌ನ 100ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಿಜಯದಶಮಿ ಅಂಗವಾಗಿ ನಾಗ್ಪುರದ ರೇಷಿಮ್‌ಬಾಗ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ತಮ್ಮ ವಾರ್ಷಿಕ ಭಾಷಣ ಮಾಡಿದರು.

Update: 2025-10-02 04:53 GMT

ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಮಾಜಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಭಾಗವಹಿಸಿದ್ದರು.

Click the Play button to listen to article

"ದೇಶವು ಆತ್ಮನಿರ್ಭರವಾಗಬೇಕು, ಸ್ವದೇಶಿಯೇ ನಮಗೆ ಏಕೈಕ ಮಾರ್ಗ," ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಗುರುವಾರ ಕರೆ ನೀಡಿದರು.

ಆರ್‌ಎಸ್‌ಎಸ್‌ನ 100ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಿಜಯದಶಮಿ ಅಂಗವಾಗಿ ನಾಗ್ಪುರದ ರೇಷಿಮ್‌ಬಾಗ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ತಮ್ಮ ವಾರ್ಷಿಕ ಭಾಷಣ ಮಾಡಿದರು.

ಆರ್‌ಎಸ್‌ಎಸ್‌ ಶತಮಾನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ನಮ್ಮ ಅನಿವಾರ್ಯತೆಯಾಗಬಾರದು. ಭಾರತದ ವಿರುದ್ಧ ಅಮೆರಿಕದಂತಹ ದೇಶಗಳು ಸುಂಕದ ಒತ್ತಡ ಹೇರುತ್ತಿರುವ ಈ ಕಾಲಘಟ್ಟದಲ್ಲಿ ನಾವು ಸ್ವಾವಲಂಬನೆ ಸಾಧಿಸಲೇಬೇಕು," ಎಂದು ಒತ್ತಿ ಹೇಳಿದರು.

 

ಇದಕ್ಕೂ ಮುನ್ನ, ಭಾಗವತ್ ಅವರು ಸಂಘದ ಸಂಪ್ರದಾಯದಂತೆ 'ಶಸ್ತ್ರ ಪೂಜೆ' ನೆರವೇರಿಸಿದರು. ಈ ಬಾರಿ ಸಾಂಪ್ರದಾಯಿಕ ಆಯುಧಗಳ ಜೊತೆಗೆ, ದೇಶೀಯವಾಗಿ ನಿರ್ಮಿಸಲಾದ ಪಿನಾಕಾ ರಾಕೆಟ್ ಲಾಂಚರ್‌ಗಳು ಮತ್ತು ಡ್ರೋನ್‌ಗಳ ಪ್ರತಿಕೃತಿಗಳನ್ನು ಪೂಜೆಗೆ ಇಟ್ಟಿರುವುದು ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ರಾಷ್ಟ್ರಪತಿ ರಾಮ್​​ನಾಥ್ ಕೋವಿಂದ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಗಾಂಧಿ ಸ್ಮರಣೆ

ತಮ್ಮ ಭಾಷಣದಲ್ಲಿ ನೆರೆಯ ನೇಪಾಳದಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾಗವತ್, "ನೆರೆಹೊರೆಯ ದೇಶಗಳಲ್ಲಿನ ಅಶಾಂತಿ ನಮಗೆ ಒಳ್ಳೆಯ ಸಂಕೇತವಲ್ಲ," ಎಂದರು. ಅಲ್ಲದೆ, "ಇಂದು ಕೇವಲ ವಿಜಯದಶಮಿಯಲ್ಲ, ಇದು ಗುರು ತೇಜ್ ಬಹದ್ದೂರ್ ಅವರ 350ನೇ ಬಲಿದಾನದ ದಿನ ಮತ್ತು ಮಹಾತ್ಮ ಗಾಂಧಿಯವರ ಜಯಂತಿ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಈ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ," ಎಂದು ಅವರು ಹೇಳಿದರು.

1925ರ ವಿಜಯದಶಮಿಯಂದು ಕೇಶವ್ ಬಲಿರಾಮ್ ಹೆಡಗೆವಾರ್ ಅವರಿಂದ ಸ್ಥಾಪನೆಯಾದ ಆರ್‌ಎಸ್‌ಎಸ್, ತನ್ನ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು 'ಹಿಂದೂ ಸಮ್ಮೇಳನ'ಗಳನ್ನು ಆಯೋಜಿಸಲು ನಿರ್ಧರಿಸಿದೆ.

Tags:    

Similar News