ರೋಬೋಟ್ ಆತ್ಮಹತ್ಯೆ | ಅಚ್ಚರಿಯ ಸುದ್ದಿಯ ಹಿಂದಿನ ಸತ್ಯಾಂಶ ಏನು?
ದಕ್ಷಿಣ ಕೊರಿಯಾದಲ್ಲಿ ಕೆಲಸದ ಒತ್ತಡದಿಂದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂಬ ಅಚ್ಚರಿಯ ವರದಿ ಇತ್ತೀಚೆಗೆ ವಿಶ್ವದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು.;
ದಕ್ಷಿಣ ಕೊರಿಯಾದಲ್ಲಿ ಕೆಲಸದ ಒತ್ತಡದಿಂದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂಬ ಅಚ್ಚರಿಯ ವರದಿ ಇತ್ತೀಚೆಗೆ ವಿಶ್ವದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು.
ಸರ್ಕಾರಿ ಕಚೇರಿಯಲ್ಲಿ ನಾಗರಿಕ ಸೇವೆಗೆ ನಿಯೋಜನೆಗೊಂಡಿದ್ದ ರೋಬೋಟ್ ಕೆಲಸದ ಒತ್ತಡಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಅದು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈ ಸುದ್ದಿ ಜನಸಾಮಾನ್ಯರಿಗೆ ತಮಾಷೆಯ ಸಂಗತಿಯಾಗಿತ್ತು.
ರೋಬೋಟ್ ಎನ್ನುವುದು ಒಂದು ಯಂತ್ರ. ಕೆಲವು ಪ್ರೋಗ್ರಾಮಿಂಗ್‌ನೊಂದಿಗೆ ಯಂತ್ರವು ಸಾಮಾನ್ಯವಾಗಿ ಮಾಡದ ಕೆಲವು ಕೆಲಸಗಳನ್ನು ರೊಬೋಟೋ ಮಾಡುತ್ತದೆ. ಆದರೆ ಯಂತ್ರವು ಕೆಲಸ ಮಾಡುವುದನ್ನು ನಿಲ್ಲಿಸಿದರೆ ನಾವು ಅದನ್ನು ʼಯಂತ್ರದ ಸ್ಥಗಿತʼ ಎಂದು ಹೇಳುತ್ತೇವೆಯೇ ಹೊರತು "ಆತ್ಮಹತ್ಯೆ" ಎಂದು ಕರೆಯುವುದಿಲ್ಲ.
ವಾಸ್ತವಾಂಶ
ರೋಬೋಟ್-ವೇಟರ್‌ಗಳನ್ನು ಉತ್ಪಾದಿಸುವ ಕ್ಯಾಲಿಫೋರ್ನಿಯಾ ಮೂಲದ ಸ್ಟಾರ್ಟ್‌ಅಪ್ ಬೇರ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ ರೋಬೋಟ್ ಅನ್ನು ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್ ಆಗಸ್ಟ್ 2023 ರಿಂದ ತಮ್ಮ ಕೆಲಸಕ್ಕಾಗಿ ನಿಯೋಜಿಸಿಕೊಂಡಿತ್ತು.
ಸಿಟಿ ಹಾಲ್ ಸಿಬ್ಬಂದಿಯ ಭಾಗವಾಗಿ ಅದು ಕೆಲಸ ಮಾಡುತ್ತಿತ್ತು. ದೈನಂದಿನ ದಾಖಲೆಗಳನ್ನು ತಲುಪಿಸುವುದು ಮತ್ತು ನಗರ ವ್ಯಾಪ್ತಿಯ ಪ್ರಚಾರ ಮಾಡುವುದು ಅದರ ಕೆಲಸವಾಗಿತ್ತು. ಇದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತಿತ್ತು.
ಸಿಟಿ ಕೌನ್ಸಿಲ್ ಈಗಾಗಲೇ ಬಳಸುತ್ತಿರುವ ಇತರ ರೋಬೋಟ್‌ಗಳಿಗಿಂತ ಇದು ವಿಭಿನ್ನವಾಗಿತ್ತು. ಏಕೆಂದರೆ ಈ ರೋಬೋಟ್ ಎಲಿವೇಟರ್ ಅನ್ನು ಬಳಸಿಕೊಂಡು ಮಹಡಿಯಿಂದ ಮಹಡಿಗೆ ಚಲಿಸಬಲ್ಲದಾಗಿತ್ತು. ಇತರರಂತೆ ಒಂದೇ ಮಹಡಿಗೆ ಸೀಮಿತವಾಗುತ್ತಿರಲಿಲ್ಲ.
ಜೂನ್ 27 ರಂದು ಕೌನ್ಸಿಲ್ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳ ನಡುವಿನ ಮೆಟ್ಟಿಲುಗಳಲ್ಲಿ ಹಾನಿಗೊಳಗಾದ ಸ್ಥಿತಿಯಲ್ಲಿ ರೋಬೋಟ್ ಬಿದ್ದಿರುವುದು ಕಂಡುಬಂದಿದೆ. ರೋಬೋಟ್ ಮೆಟ್ಟಿಲುಗಳ ಕೆಳಗೆ ಬೀಳುವ ಮೊದಲು, ಒಂದೇ ಜಾಗದಲ್ಲಿ ಸುತ್ತುವ ಅಸಾಮಾನ್ಯ ನಡವಳಿಕೆ ಪ್ರದರ್ಶಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.
ವರದಿ ಏನು ಹೇಳುತ್ತದೆ?
ಈ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರು ನ್ಯಾವಿಗೇಷನ್ ಹಾಗೂ ಸೆನ್ಸಾರ್ ದೋಷದಿಂದಾಗಿ ರೋಬೋಟ್ ಕೆಳಗೆ ಉರುಳಿರಬಹುದು. ಅಥವಾ ಪ್ರೋಗ್ರಾಮಿಂಗ್ ದೋಷದಿಂದ ಬಗ್ ಸೃಷ್ಟಿಯಾದ ಕಾರಣವೂ ಈ ಘಟನೆ ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸುದ್ದಿಯನ್ನು ಕೆಲಸದ ಒತ್ತಡದಿಂದ ರೋಬೋಟ್ ಆತ್ಮಹತ್ಯೆ ಮಾಡಿದೆ ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.
ಸ್ಥಳೀಯ ಮಾಧ್ಯಮಗಳು "ಶ್ರದ್ಧೆಯುಳ್ಳ ಸಿವಿಲ್ ಅಧಿಕಾರಿ(ರೋಬೋಟ್) ಇದನ್ನು ಏಕೆ ಮಾಡಿದರು?" ಎಂಬ ಶೀರ್ಷಿಕೆಯ ಮೂಲಕ ವರದಿಯನ್ನು ರೋಚಕಗೊಳಿಸಿದ್ದವು.
ಇನ್ನು ಈ ಬಗ್ಗೆ ಗುಮಿ ಸಿಟಿ ಕೌನ್ಸಿಲ್, ರೋಬೋಟ್‌ನ ಸಾವಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಅದರ ತುಣುಕುಗಳನ್ನು ಸಂಗ್ರಹಿಸಲಾಗಿದ್ದು, ಕಂಪೆನಿಯು ಈ ಬಗ್ಗೆ ವಿಶ್ಲೇಷಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯ ನಂತರ ಸಿಟಿ ಕೌನ್ಸಿಲ್ ಎರಡನೇ ರೋಬೋಟ್ ಅಧಿಕಾರಿಯನ್ನು ಪರಿಚಯಿಸುವ ತನ್ನ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದೂ ಹೇಳಿದೆ.