Sharda Sinha : ಇಹಲೋಕ ತ್ಯಜಿಸಿದ ಜಾನಪದ ಗಾಯಕಿ, ಪದ್ಮ ಭೂಷಣ ಶಾರದಾ ಸಿನ್ಹಾ ಯಾರು? ಅವರ ಸಾಧನೆಗಳೇನು?
ಛತ್ ಮತ್ತು ಜಾನಪದ ಗೀತೆಗಳ ಸುಮಧುರ ಗಾಯನಕ್ಕಾಗಿ 'ಬಿಹಾರ್ ಕೋಕಿಲಾ' ಎಂದು ಖ್ಯಾತಿ ಪಡೆದಿರುವ ಶಾರದಾ ಸಿನ್ಹಾ ಬಾಲಿವುಡ್ ಹಿಟ್‌ಗಳ ʼತಾರ್ ಬಿಜ್ಲಿʼ ಮತ್ತು ʼಬಾಬುಲ್ʼ ಹಾಡಿದ್ದರು.
ಛತ್ ಮತ್ತು ಜನಪದ ಗೀತೆಗಳ ಮೂಲಕವೇ ವಿಶ್ವವಿಖ್ಯಾತಿ ಪಡೆದಿದ್ದ ಜಾನಪದ ಗಾಯಕಿ ಪದ್ಮ ಭೂಷಣ ಶಾರದಾ ಸಿನ್ಹಾ ಮಂಗಳವಾರ (ನವೆಂಬರ್ 5ರಂದು) ನಿಧನ ಹೊಂದಿದ್ದಾರೆ. ʼಬಿಹಾರ್ ಕೋಕಿಲಾʼ ಎಂಬ ಬಿರುದು ಹೊಂದಿದ್ದ ಅವರು ʼಕಾರ್ತಿಕ್ ಮಾಸ್ ಇಜೋರಿಯಾʼ, ʼಸೂರಜ್ ಭೈಲೆ ಬಿಹಾನ್ʼ ಮತ್ತು ಬಾಲಿವುಡ್ ಹಿಟ್ ಹಾಡುಗಳಾದ ʼತಾರ್ ಬಿಜ್ಲಿʼ ಮತ್ತು ʼಬಾಬುಲ್ʼ ಮೂಲಕ ಜನಪ್ರಿಯತೆ ಗಳಿಸಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡುತಿದ್ದ ಅವರು ನವದೆಹಲಿಯ ಆಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಬಿಹಾರದ ಶ್ರೀಮಂತ ಜಾನಪದ ಸಂಪ್ರದಾಯಗಳನ್ನು ಆ ಪ್ರದೇಶದ ಗಡಿಗಳನ್ನು ಮೀರಿ ಪ್ರಚುರಪಡಿಸಿದ ಮತ್ತು ಜನಪ್ರಿಯಗೊಳಿಸಿದ್ದ ಶಾರದಾ ಸಿನ್ಹಾ ಅವರಿಗೆ ರಕ್ತದ ಕ್ಯಾನ್ಸರ್‌ನ ಒಂದು ರೂಪವಾದ ಮಲ್ಟಿಪಲ್ ಮೈಲೋಮಾವಿತ್ತು. ಅದಕ್ಕೆ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಸೂರ್ಯ ದೇವರಿಗೆ ಸಮರ್ಪಿತವಾದ ʼಛತ್ʼ ಆಚರಣೆಯ ಅವಿಭಾಜ್ಯ ಅಂಗವೇ ಆಗಿದ್ದ ಶಾರದಾ ಸಿನ್ಹಾ ಅವರು ನಾಲ್ಕು ದಿನಗಳ ಈ ಉತ್ಸವದ ಮೊದಲ ದಿನದಂದು ನಿಧನ ಹೊಂದಿರುವುದು ಕಾಕತಾಳಿಯವೇ ಸರಿ. ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದ ಸಿನ್ಹಾ ಅವರು ತಮ್ಮ ಅನೇಕ ಹಾಡುಗಳಲ್ಲಿ ಜನಪದ ಬೆರೆಸಿದ್ದರು. ಅವರನ್ನು ಬಹುಪಾಲು ಮಂದಿ 'ಬೇಗಂ ಅಖ್ತರ್ ಆಫ್ ಮಿಥಿಲಾ' ಎಂದೇ ಕರೆಯುತಿದ್ದರು. ಅವರು ʼಛತ್ʼ ಭಕ್ತರಾಗಿದ್ದರು, ಪ್ರತಿವರ್ಷ ಈ ಹಬ್ಬದ ಆಚರಣೆಗಾಗಿ ಹಾಡು ಬಿಡುಗಡೆ ಮಾಡುತ್ತಿದ್ದರು. ಅನಾರೋಗ್ಯದ ಹೊರತಾಗಿಯೂ ಅವರು ಈ ವರ್ಷವೂ ಹಾಡು ಬಿಡುಗಡೆ ಮಾಡಿದ್ದರು.
ʼದುಖ್ವಾ ಮಿಠಾಯಿನ್ ಛತಿ ಮೈಯಾʼ ಎಂಬ ಪ್ರಾರ್ಥನಾ ಗೀತೆಯನ್ನು ಅನಾರೋಗ್ಯದ ನಡುವೆ ಅವರು ರಚಿಸಿದ್ದರು. ಇದು ಅವರ ಅಸೌಖ್ಯದ ಪ್ರತಿಬಿಂಬವಾಗಿದೆ. ಇದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ದಿನ ಮೊದಲು ಬಿಡುಗಡೆಗೊಂಡಿದೆ.
2017ರಿಂದ ಮಲ್ಟಿಪಲ್ ಮೈಲೋಮಾ ವಿರುದ್ಧ ಹೋರಾಡುತ್ತಿದ್ದ ಗಾಯಕಿ ಕೆಲವು ತಿಂಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಶಾರಾದಾ ಅವರಿಗೆ ಪುತ್ರ ಹಾಗೂ ಪುತ್ರಿಯಿದ್ದಾರೆ.
ಭೋಜ್‌ಪುರಿ, ಮೈಥಿಲಿ ಮತ್ತು ಮಾಘಹಿ ಭಾಷೆಗಳ ಜಾನಪದ ಗೀತೆಗಳಲ್ಲಿ ಮಾಡಿರುವ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಶಾರದಾ ಸಿನ್ಹಾ ಅವರು ಆರೋಗ್ಯ ಸಮಸ್ಯೆಯ ನಂತರ ವೆಂಟಿಲೇಟರ್ ಬೆಂಬಲದಲ್ಲಿದ್ದರು.
ಶ್ರದ್ಧಾಂಜಲಿಗಳ ಮಹಾಪೂರ
ಶಾರದಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
"ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಮೈಥಿಲಿ ಮತ್ತು ಭೋಜ್ಪುರಿ ಜಾನಪದ ಹಾಡುಗಳು ಅನೇಕ ದಶಕಗಳಿಂದ ಜನಪ್ರಿಯವಾಗಿವೆ. "ಛತ್ ನ ಹಬ್ಬಕ್ಕೆ ಸಂಬಂಧಿಸಿದ ಅವರ ಸುಮಧುರ ಹಾಡುಗಳು ಯಾವಾಗಲೂ ಇರುತ್ತದೆ. ಅವರ ನಿಧನದಿಂದ ಸಂಗೀತ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂತಾಪಗಳು" ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.
ಸಿನ್ಹಾ ಅವರು ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸುಮಧುರ ಧ್ವನಿಯಿಂದ ಭಾರತೀಯ ಸಂಗೀತಕ್ಕೆ ಹೊಸ ಎತ್ತರವನ್ನು ನೀಡಿದರು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪವಿದೆ. ಛಥಿ ಮೈಯಾ ಅಗಲಿದ ನಿಮ್ಮ ಆತ್ಮಕ್ಕೆ ಪಾದದ ಬಳಿ ಸ್ಥಾನ ನೀಡಲಿ " ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಛತ್ ಪೂಜಾ ಹಬ್ಬದ ಸಂದರ್ಭದಲ್ಲಿ ಗೌರವಾನ್ವಿತ ಶಾರದಾ ಸಿನ್ಹಾ ಜಿ ಅವರನ್ನು ಕಳೆದುಕೊಂಡಿರುವುದು ತುಂಬಾ ದುಃಖಕರ ಎಂದು ಹಿನ್ನೆಲೆ ಗಾಯಕ ಸೋನು ನಿಗಮ್ ಬರೆದುಕೊಂಡಿದ್ದಾರೆ.
ಭೋಜ್ಪುರಿ ನಟ ಮತ್ತು ರಾಜಕಾರಣಿ ರವಿ ಕಿಶನ್ ಅವರು ಸಿನ್ಹಾ ಅವರ ಧ್ವನಿಯಿಲ್ಲದೆ, ಪ್ರತಿಯೊಂದು ಹಬ್ಬವೂ ಶೂನ್ಯ. ವಿಶೇಷವಾಗಿ ಛತ್ ಹಬ್ಬ, ಅದಕ್ಕಾಗಿಯೇ ಈ ಸಮಯದಲ್ಲಿ "ಛಥಿ ಮೈಯಾ" ಅವರನ್ನು ಕರೆಸಿಕೊಂಡಿದ್ದಾರೆ ಎಂದು ಬರೆದಿದ್ದಾರೆ.
ಶಾರದಾ ಅವರ ಪುತ್ರ ಅಂಶುಮಾನ್ ಝಾ ಕೂಡ ಅವರ ಸಾವಿನ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದರು. "ತಾಯಿ ಈಗ ನಮ್ಮೊಂದಿಗಿಲ್ಲ. ಅವರು 9.20 ಕ್ಕೆ ನಿಧನರಾದರು. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳು ಆಕೆಗೆ ಶಾಂತಿಯಿಂದ ಹೊರಡಲು ಸಹಾಯ ಮಾಡಿದವು. ಅವಳಿಲ್ಲದೆ ಈ ಛತ್ ಖಾಲಿಯಾಗುತ್ತದೆ" ಎಂದು ಭಾವುಕರಾಗಿ ಹೇಳಿದ್ದಾರೆ.
ಶಾರದಾ ಅವರ ಜನಪ್ರಿಯ ಹಾಡುಗಳು
ಸಿನ್ಹಾ ಅವರು 1970ರ ದಶಕದಲ್ಲಿ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯಅಧ್ಯಯನ ಮಾಡಿದ್ದಾರೆ. ಆಗ ಅವರು ಗಾಯನದ ಬಗ್ಗೆ ತಮ್ಮ ಉತ್ಸಾಹ ಹೆಚ್ಚಿಸಲು ಸ್ನೇಹಿತರು ಮತ್ತು ಹಿತೈಷಿಗಳಿಂದ ಪ್ರೋತ್ಸಾಹ ಪಡೆದಿದ್ದರು.
ಅವರು ದರ್ಭಾಂಗದ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಜಾನಪದ ಗಾಯಕಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಚಲನಚಿತ್ರೋದ್ಯಮದ ದೊಡ್ಡ ಹೆಸರು ಮಾಡಿದ್ದಾರೆ .
ಸಲ್ಮಾನ್ ಖಾನ್ ಅವರನ್ನು ಪರಿಚಯಿಸಿದ 1990 ರ ಬ್ಲಾಕ್ಬಸ್ಟರ್ ಸಿನಿಮಾ "ಮೈನೆ ಪ್ಯಾರ್ ಕಿಯಾ" ದಲ್ಲಿ ಮತ್ತು ಸಿನ್ಹಾ ಅವರ "ಕಹೆ ತೋಸೆ ಸಜ್ನಾ" ಹಾಡು ಜನಪ್ರಿಯವಾಗಿತ್ತು.
ಸಿನ್ಹಾ ತನ್ನ ಧ್ವನಿಯ ಮೂಲಕ ಜಾನಪದ ಸಂಗೀತದ ಶ್ರೀಮಂತ ಪರಂಪರೆ ಮುಂದುವರಿಸಿದ್ದರು. ನಂತರ ಭೋಜ್‌ಪುರಿಲ್ಲಿ ಜನಪ್ರಿಯವಾಗಿರುವ ಎರಡು ಅರ್ಥಗಳ ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿದರು.