Shyam Benegal : ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ನಿಧನ
Shyam Benegal: ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಳ ಜೊತೆಗೆ ಬೆನಗಲ್ ಅವರು ಸಮೃದ್ಧ ಸಾಕ್ಷ್ಯಚಿತ್ರಕಾರ ಮತ್ತು ದೂರದರ್ಶನ ನಿರ್ದೇಶಕರಾಗಿದ್ದರು.
ಭಾರತೀಯ ಚಿತ್ರರಂಗದ ಶ್ರೇಷ್ಠ ವ್ಯಕ್ತಿತ್ವ ಮತ್ತು ಪರ್ಯಾಯ ಸಿನೆಮಾದ ಪ್ರವರ್ತಕ, ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ (Shyam Benegal) ಸೋಮವಾರ (ಡಿಸೆಂಬರ್ 23) ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ನೀರಾ ಮತ್ತು ಮಗಳು ಪಿಯಾ ಇದ್ದಾರೆ.
ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಹೆಚ್ಚಳಗೊಂಡ ಕಾರಣ ಬೆನೆಗಲ್ ಮುಂಬೈನ ವೊಕ್ಹಾರ್ಟ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಪಿಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. "ಅವರು ಸಂಜೆ 6.38ಕ್ಕೆ ಮುಂಬೈ ಸೆಂಟ್ರಲ್‌ನ ವೊಕ್ಹಾರ್ಟ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು " ಎಂದು ಅವರು ಹೇಳಿದ್ದಾರೆ.
ಬೆನೆಗಲ್ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು ಎಂದು ವೊಕ್ಹಾರ್ಟ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅವರು ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡಬೇಕಾಗಿತ್ತು ಮತ್ತು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಮಾಹಿತಿ ನೀಡಿದೆ.
ಸಾಮಾಜಿಕ ಪ್ರಜ್ಞೆಯ ಸಿನಿಮಾ ಕರ್ತೃ
ಸಾಮಾಜಿಕ ಪ್ರಜ್ಞೆಯ ಕಥೆಗಳು ಮತ್ತು ಮನುಷ್ಯನ ಭಾವನೆಗಳ ಅನ್ವೇಷಣೆಗೆ ಹೆಸರುವಾಸಿಯಾಗಿದ್ದ ಬೆನೆಗಲ್ ಅವರು ಹಲವು ತಲೆಮಾರುಗಳ ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರ ಮೇಲೆ ಆಳ ಪ್ರಭಾವ ಬೀರಿದ್ದಾರೆ.
ತಮ್ಮ ಸಮೃದ್ಧ ವೃತ್ತಿಜೀವನದಲ್ಲಿ, ಬೆನೆಗಲ್ ʼಭಾರತ್ ಏಕ್ ಖೋಜ್ʼ ಮತ್ತು ʼಸಂವಿಧಾನ್ʼ ಸೇರಿದಂತೆ ವೈವಿಧ್ಯಮಯ ವಿಷಯಗಳ ಕುರಿತು ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಧಾರಾವಾಹಿಗಳನ್ನು ನಿರ್ಮಿಸಿದ್ದರು. ಅವರು ಕೇವಲ 10 ದಿನಗಳ ಹಿಂದೆ ಡಿಸೆಂಬರ್ 14 ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಅವರ ಚಿತ್ರಗಳಲ್ಲಿ ತ್ರಿಕಾಲ್, ಕಲಿಯುಗ್, ಭೂಮಿಕಾ, ಜುನೂನ್, ಮಂಡಿ, ಸೂರಜ್ ಕಾ ಸತ್ವಾನ್ ಘೋಡಾ, ಮಮ್ಮೋ ಮತ್ತು ಸರ್ದಾರಿ ಬೇಗಂ ಪ್ರಖ್ಯಾತಿ ಪಡೆದುಕೊಂಡಿವೆ. ಅವರು 2023ರಲ್ಲಿ ತಮ್ಮ ಜೀವನಚರಿತ್ರೆ ʼಮುಜೀಬ್: ದಿ ಮೇಕಿಂಗ್ ಆಫ್ ಎ ನೇಷನ್ʼ ನಿರ್ಮಿಸಿದ್ದರು.
ಜಾಹೀರಾತುಗಳಲ್ಲಿ ಪ್ರದರ್ಶನ
ಡಿಸೆಂಬರ್ 14, 1934 ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ಬೆನಗಲ್ ಅವರು ಚಲನಚಿತ್ರ ಜಗತ್ತಿಗೆ ಪರಿವರ್ತನೆಗೊಳ್ಳುವ ಮೊದಲು ಜಾಹೀರಾತುಗಳಲ್ಲಿ ತಮ್ಮ ವೃತ್ತಿಜೀವನ ತೊಡಗಿಸಿಕೊಂಡಿದ್ದರು.
ಅವರ ಮೊದಲ ಚಲನಚಿತ್ರವಾದ ʼಅಂಕುರ್ʼʼ (1974) ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯ ಸೃಷ್ಟಿಸಿತು. ಇದನ್ನು ಹೆಚ್ಚಾಗಿ "ಪರ್ಯಾಯ ಸಿನೆಮಾ" ಚಳವಳಿ ಎಂದು ಕರೆಯಲಾಗುತ್ತದೆ. ಈ ಚಿತ್ರಗಳು ಸಂಪೂರ್ಣ ವಾಸ್ತವ ಮತ್ತು ಸಾಮಾಜಿಕ ಸಮಸ್ಯೆಗಳ ಮೇಲಿನ ವಿಷಯ ವಸ್ತುವನ್ನು ಹೊಂದಿರುತ್ತಿತ್ತು ಹಾಗೂ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತ್ತು. ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಪ್ರಶ್ನೆಯನ್ನು ಎತ್ತುವ ದಿಟ್ಟ ನಿರ್ಮಾಪಕ ಎನಿಸಿಕೊಂಡರು.
ಚಿತ್ರರಂಗಕ್ಕೆ ನೀಡಿದ ಕೊಡುಗೆಗಳ ಜೊತೆಗೆ, ಬೆನೆಗಲ್ ಅವರು ಸಾಕ್ಷ್ಯಚಿತ್ರಕಾರ ಮತ್ತು ದೂರದರ್ಶನದ ನಿರ್ದೇಶಕರಾಗಿಯೂ ಇದ್ದರು.
ಸಂತಾಪಗಳ ಮಹಾಪೂರ
ಬೆನಗಲ್ ನಿಧನದ ಸುದ್ದಿ ಬಂದ ಕೂಡಲೇ ಶ್ರದ್ಧಾಂಜಲಿಗಳು ಹರಿದು ಬರಲಾರಂಭಿಸಿದವು. ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಟ್ವೀಟ್ ಮಾಡಿ, "ಅವರು 'ಹೊಸ ಅಲೆಯ' ಸಿನೆಮಾವನ್ನು ನಿರ್ಮಿಸಿದ್ದರು. ಅಂಕುರ್, ಮಂಥನ್ ಮತ್ತು ಅಸಂಖ್ಯಾತ ಚಲನಚಿತ್ರಗಳೊಂದಿಗೆ ಭಾರತೀಯ ಚಿತ್ರರಂಗದ ದಿಕ್ಕನ್ನು ಬದಲಾಯಿಸಿದ ವ್ಯಕ್ತಿಯಾಗಿ ಶ್ಯಾಮ್ ಬೆನೆಗಲ್ ಸ್ಮರಣೀಯರು. ಅವರು ಶಬಾನಾ ಅಜ್ಮಿ ಮತ್ತು ಸ್ಮಿತಾ ಪಾಟೀಲ್ ಅವರಂತಹ ಶ್ರೇಷ್ಠ ಕಲಾವಿದರನ್ನು ಸೃಷ್ಟಿಸಿದರು. ವಿದಾಯ ನನ್ನ ಸ್ನೇಹಿತ ಮತ್ತು ಮಾರ್ಗದರ್ಶಿ." ಎಂದು ಬರೆದುಕೊಂಡಿದ್ದಾರೆ.
ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ ಮತ್ತು ಶಶಿ ತರೂರ್ ಕೂಡ ಸಂತಾಪ ಸೂಚಿಸಿದ್ದಾರೆ.