ಗಾಂಧಿ, ಅಂಬೇಡ್ಕರ್ ಪ್ರತಿಮೆಗಳನ್ನು ಮೂಲ ಸ್ಥಳಕ್ಕೆ ವರ್ಗಾಯಿಸಿ: ಸಭಾಪತಿ, ಸಭಾಧ್ಯಕ್ಷರಿಗೆ ಖರ್ಗೆ ಆಗ್ರಹ
ಸಮಾಲೋಚನೆಯಿಲ್ಲದೆ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸುವುದು ಪ್ರಜಾಪ್ರಭುತ್ವದ ಆಶಯವನ್ನು ಉಲ್ಲಂಘಿಸುತ್ತದೆ ಎಂದು ಸ್ಪೀಕರ್ ಮತ್ತು ರಾಜ್ಯಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಖರ್ಗೆ ಅವರು ಹೇಳಿದ್ದಾರೆ.;
ನವದೆಹಲಿ, ಜೂನ್ 19- ಸಂಸತ್ ಸಂಕೀರ್ಣದ ಹೊಸ ಸ್ಥಳಕ್ಕೆ ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್ ಮತ್ತು ಇತರ ರಾಷ್ಟ್ರೀಯ ನಾಯಕರ ಪ್ರತಿಮೆಗಳ ಸ್ಥಳಾಂತರ ಕುರಿತು ಸ್ಪೀಕರ್ ಮತ್ತು ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರತಿಮೆಗಳನ್ನು ಮೂಲ ಸ್ಥಳದಲ್ಲಿ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಪೀಕರ್ ಮತ್ತು ಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ, ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸಮಾಲೋಚನೆಯಿಲ್ಲದೆ, ನಿರಂಕುಶವಾಗಿ ಪ್ರತ್ಯೇಕ ಮೂಲೆಗೆ ಸ್ಥಳಾಂತರಿಸಲಾಗಿದೆ; ಇದು ಪ್ರಜಾಪ್ರಭುತ್ವದ ಮೂಲ ಆಶಯದ ಉಲ್ಲಂಘನೆ ಎಂದು ಹೇಳಿದ್ದಾರೆ.
ʻಯಾವುದೇ ಸಮಾಲೋಚನೆಯಿಲ್ಲದೆ ನಿರಂಕುಶವಾಗಿ ಪ್ರತಿಮೆಗಳನ್ನು ತೆರವು ಮಾಡುವುದು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ. ಮಹಾತ್ಮ ಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸೂಕ್ತ ಸಮಾಲೋಚನೆ ಮತ್ತು ಪರಿಗಣನೆ ನಂತರ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಸಂಸತ್ ಭವನದ ಸಂಕೀರ್ಣದಾದ್ಯಂತ ಸ್ಥಾಪಿಸಿದ ಪ್ರತಿಯೊಂದು ಪ್ರತಿಮೆಗಳ ಸ್ಥಳ ಅಪಾರ ಮೌಲ್ಯ ಮತ್ತು ಮಹತ್ವವನ್ನು ಹೊಂದಿದೆ, ʼಎಂದು ಖರ್ಗೆ ಬರೆದಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಸಂಸದರ ಭಾವಚಿತ್ರಗಳು ಹಾಗೂ ಪ್ರತಿಮೆಗಳ ಸ್ಥಾಪನೆಯನ್ನು ನಿರ್ಧರಿಸುವ ಸಮಿತಿಯಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ಹೇಳಿದ್ದಾರೆ.ʻಪಾರ್ಲಿಮೆಂಟ್ ಹೌಸ್ ಸಂಕೀರ್ಣದಲ್ಲಿ ರಾಷ್ಟ್ರೀಯ ಭಾವಚಿತ್ರಗಳು ಮತ್ತು ಪ್ರತಿಮೆಗಳ ಸ್ಥಾಪನೆ ಸಮಿತಿʼ ಯನ್ನು 2019ರ ಬಳಿಕ ಪುನಾರಚಿಸಿಲ್ಲ.
ʻಸಂಬಂಧಿಸಿದವರೊಂದಿಗೆ ಚರ್ಚೆ ಮತ್ತು ಸಮಾಲೋಚನೆಯಿಲ್ಲದೆ ತೆಗೆದುಕೊಂಡ ಇಂತಹ ನಿರ್ಧಾರಗಳು ಸಂಸತ್ತಿನ ನಿಯಮಗಳು ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿವೆ. ಆದ್ದರಿಂದ, ದೇಶದ ಏಕತೆಗೆ ಮಹತ್ತರ ಕೊಡುಗೆ ನೀಡಿರುವ ಮಹಾತ್ಮ ಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರ ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಮೂಲ ಸ್ಥಳಗಳಿಗೆ ಸ್ಥಳಾಂತರಿಸಬೇಕು,ʼ ಎಂದು ಬರೆದಿದ್ದಾರೆ.
ಪ್ರತಿಮೆಗಳ ಸ್ಥಳಾಂತರಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ವಿರೋಧ ಪಕ್ಷಗಳು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳ ಎದುರು ಆಗಾಗ ಪ್ರತಿಭಟನೆ ಮತ್ತು ಆಂದೋಲನ ನಡೆಸುತ್ತವೆ.