Manipur Violence | ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ; ಸಿಎಂ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ
ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ಜನಾಂಗೀಯ ಕಲಹ ಹಾಗೂ ಹಿಂಸಾಚಾರ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ಎನ್.ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ.;
ಮಣಿಪುರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಂಫಾಲದಲ್ಲಿರುವ ರಾಜಭವನಕ್ಕೆ ಭಾನುವಾರ ಸಂಪುಟದ ಸಹೋದ್ಯೋಗಿಗಳು ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷರೊಂದಿಗೆ ಆಗಮಿಸಿದ ಅವರು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಆದರೆ, ರಾಜೀನಾಮೆ ನಿಖರ ಕಾರಣ ತಿಳಿಸಿಲ್ಲ.
ಮಣಿಪುರದಲ್ಲಿ ಕಳೆದ ಎರಡು ವರ್ಷಗಳಿಂದ ಜನಾಂಗೀಯ ಕಲಹ ಹಾಗೂ ಹಿಂಸಾಚಾರ ವಿಪರೀತವಾಗಿದೆ. ಮಹಿಪುರದ ಹಿಂಸಾಚಾರದಲ್ಲಿ ಈವರೆಗೆ 212 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ರಾಷ್ಟ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರತಿಧ್ವನಿಸಿದೆ. ಆದರೆ, ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಮಣಿಪುರದಲ್ಲಿ ಬಿಜೆಪಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲಾಗಿತ್ತು.
ʼ ಇಲ್ಲಿಯವರೆಗೆ ಮಣಿಪುರ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ಗೌರವ ಎಂದು ಭಾವಿಸುವೆ. ಮಣಿಪುರದ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆ ಮತ್ತು ರಾಜ್ಯದ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದ ಅಭಿವೃದ್ಧಿಗೆ ತಮ್ಮ ಬೆಂಬಲ ಮುಂದುವರಿಸಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ರಾಜ್ಯಪಾಲರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಸಿಎಂ ಬಿರೇನ್ ಸಿಂಗ್ ತಿಳಿಸಿದ್ದಾರೆ.