ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಅತ್ಯಾಧುನಿಕ ಸೌಲಭ್ಯವು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಒಂದು ಮಹತ್ವದ ಭಾಗವಾಗಿದೆ.;

Update: 2025-05-11 09:15 GMT

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಸ್ಥಾಪಿಸಲಾದ ಬ್ರಹ್ಮೋಸ್ ಏರೋಸ್ಪೇಸ್ ಏಕೀಕರಣ ಮತ್ತು ಪರೀಕ್ಷಾ ಸೌಲಭ್ಯವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.

ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಅತ್ಯಾಧುನಿಕ ಸೌಲಭ್ಯವು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಒಂದು ಮಹತ್ವದ ಭಾಗವಾಗಿದೆ. ಇದು ಭಾರತದ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ರಕ್ಷಣಾ ಸಚಿವಾಲಯವು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಈ ಸೌಲಭ್ಯವು ಕ್ಷಿಪಣಿ ಉತ್ಪಾದನೆಯ ಜೊತೆಗೆ ಪರೀಕ್ಷೆ, ಏಕೀಕರಣ ಮತ್ತು ಏರೋಸ್ಪೇಸ್ ದರ್ಜೆಯ ಘಟಕಗಳಿಗಾಗಿ ವಸ್ತು ಸಂಕೀರ್ಣವನ್ನು ಒಳಗೊಂಡಿದೆ ಎಂದು ತಿಳಿಸಿದೆ. ಇದು 'ಆತ್ಮನಿರ್ಭರ್‌ಭಾರತಕ್ಕೆ' ದೊಡ್ಡ ಕೊಡುಗೆಯಾಗಿದ್ದು, ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಗೆ ಕಾರ್ಯತಂತ್ರದ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶ ಸರ್ಕಾರದ ಮಾಹಿತಿಯ ಪ್ರಕಾರ, ಈ ಘಟಕವು ವಿಶ್ವದ ಅತಿ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಾದ ಬ್ರಹ್ಮೋಸ್ ಅನ್ನು ತಯಾರಿಸಲಿದೆ. ಈ ಕ್ಷಿಪಣಿಗಳು 290 ರಿಂದ 400 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಗರಿಷ್ಠ ಮ್ಯಾಕ್ 2.8 ವೇಗದಲ್ಲಿ ಚಲಿಸಬಲ್ಲವು. ಭಾರತ ಮತ್ತು ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಭೂಮಿ, ಸಮುದ್ರ ಅಥವಾ ಆಕಾಶದಿಂದ ಉಡಾಯಿಸಬಹುದು ಮತ್ತು ಅವು 'ಫೈರ್ ಆಂಡ್ ಫರ್ಗೆಟ್' ತಂತ್ರಜ್ಞಾನವನ್ನು ಬಳಸುತ್ತವೆ.

ಲಕ್ನೋದಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಉತ್ತರ ಪ್ರದೇಶ ಸರ್ಕಾರವು ಉಚಿತವಾಗಿ ಒದಗಿಸಿದ ಭೂಮಿಯಲ್ಲಿ ಈ ಬ್ರಹ್ಮೋಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ ಮತ್ತು ಇದು ಸುಮಾರು ಮೂರೂವರೆ ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

2018 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಲಕ್ನೋ, ಕಾನ್ಪುರ, ಅಲಿಘರ್, ಆಗ್ರಾ, ಝಾನ್ಸಿ ಮತ್ತು ಚಿತ್ರಕೂಟ ಸೇರಿದಂತೆ ಆರು ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ. ಈ ಕಾರಿಡಾರ್ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ತಮಿಳುನಾಡಿನ ನಂತರ ರಕ್ಷಣಾ ಕೈಗಾರಿಕಾ ಕಾರಿಡಾರ್ ಅನ್ನು ಸ್ಥಾಪಿಸಿದ ಎರಡನೇ ರಾಜ್ಯವಾಗಿ ಉತ್ತರ ಪ್ರದೇಶ ಹೊರಹೊಮ್ಮಿದೆ.

Tags:    

Similar News