INDIA ಒಕ್ಕೂಟ ಸರ್ಕಾರ ರಚಿಸಿದರೆ ಮೀಸಲಾತಿ ಕೋಟಾ ಮಿತಿ ರದ್ದು: ರಾಹುಲ್ ಭರವಸೆ
INDIA ಒಕ್ಕೂಟ ಸರ್ಕಾರ ರಚಿಸಿದರೆ ಜಾತಿ ಜನ ಗಣತಿ ಮತ್ತು 50% ಕೋಟಾ ಮಿತಿ ರದ್ದತಿ ಮಾಡುವುದಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ;
ರಾಂಚಿ: ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಐಎನ್‌ಡಿಎ (INDIA) ಒಕ್ಕೂಟವು ಸರ್ಕಾರ ರಚಿಸಿದರೆ ರಾಷ್ಟ್ರವ್ಯಾಪಿ ಜಾತಿ ಗಣತಿ ಮತ್ತು ಮೀಸಲಾತಿ ಮೇಲಿನ ಶೇ 50 ಮಿತಿಯನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜಾತಿ ಗಣತಿಗೆ ಬೇಡಿಕೆ ಬಂದಾಗ ಮತ್ತು ಒಬಿಸಿಗಳು, ದಲಿತರು - ಬುಡಕಟ್ಟು ಜನಾಂಗದವರಿಗೆ ಹಕ್ಕುಗಳನ್ನು ನೀಡುವ ಸಮಯ ಬಂದಾಗ, ಯಾವುದೇ ಜಾತಿಗಳಿಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ, ಮತಗಳ ವಿಚಾರಕ್ಕೆ ಬರುವಾಗ ಒಬಿಸಿಗಳ ಬಗ್ಗೆ ಮಾತಾಡುತ್ತಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬುಡಕಟ್ಟು ಜನಾಂಗದವರಾಗಿರುವುದರಿಂದ ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಶಹೀದ್ ಮೈದಾನದಲ್ಲಿ ನಡೆದ ಭಾರತ್ ನ್ಯಾಯ್ ಯಾತ್ರೆಯಲ್ಲಿ ಮಾತನಾಡಿದ ಅವರು "ಬಿಜೆಪಿ-ಆರ್‌ಎಸ್‌ಎಸ್ ಪಿತೂರಿಯನ್ನು ತಡೆದು ಬಡವರ ಸರ್ಕಾರವನ್ನು ರಕ್ಷಿಸಿದ್ದಕ್ಕಾಗಿ (ಚಂಪೈ) ಸೊರೆನ್ ಜಿ ಮತ್ತು ಎಲ್ಲಾ ಮೈತ್ರಿ ಶಾಸಕರನ್ನು ಅಭಿನಂದಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
ದಲಿತರು, ಆದಿವಾಸಿಗಳು ಮತ್ತು ಇತರೆ ಹಿಂದುಳಿದ ವರ್ಗಗಳನ್ನು (OBC) ಬಂಧಿತ ಕಾರ್ಮಿಕರನ್ನಾಗಿ ಮಾಡಲಾಗಿದೆ ಮತ್ತು ದೊಡ್ಡ ಕಂಪನಿಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ನ್ಯಾಯಾಲಯಗಳಲ್ಲಿ ಅವರ ಇರುವಿಕೆಯ ಕೊರತೆಯಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
"ಇದು ಭಾರತದ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ದೇಶದಲ್ಲಿ ಜಾತಿ ಗಣತಿಯನ್ನು ಪಡೆಯುವುದು ನಮ್ಮ ಮೊದಲ ಹೆಜ್ಜೆಯಾಗಿದೆ" ಎಂದು ಅವರು ಹೇಳಿದರು.
ಅಸ್ತಿತ್ವದಲ್ಲಿರುವ ನಿಬಂಧನೆಗಳ ಅಡಿಯಲ್ಲಿ 50 ಪ್ರತಿಶತಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ನೀಡಲಾಗುವುದಿಲ್ಲ ಎಂಬುದನ್ನು ಉಲ್ಲೇಖಿಸಿದ ಗಾಂಧಿ, ಐಎನ್‌ಡಿಎ ಸರ್ಕಾರವು ಮೀಸಲಾತಿಯ ಮೇಲಿನ 50 ಪ್ರತಿಶತ ಮಿತಿಯನ್ನು ತೆಗೆದು ಹಾಕುತ್ತದೆ ಎಂದು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ತಾವು ಒಬಿಸಿ ಎಂದು ಹೇಳುತ್ತಿದ್ದರು, ಆದರೆ ಜಾತಿ ಗಣತಿಗೆ ಬೇಡಿಕೆ ಬಂದಾಗ ಶ್ರೀಮಂತರು ಮತ್ತು ಬಡವರು ಎಂಬ ಕೇವಲ ಎರಡು ಜಾತಿಗಳಿವೆ ಎಂದು ಹೇಳುತ್ತಾರೆ. ಒಬಿಸಿಗಳು, ದಲಿತರು, ಬುಡಕಟ್ಟು ಜನಾಂಗದವರಿಗೆ ಹಕ್ಕು ನೀಡುವ ಸಮಯ ಬಂದಾಗ, ಮೋದಿ ಜಿ ಯಾವುದೇ ಜಾತಿಗಳಿಲ್ಲ ಎಂದು ಹೇಳುತ್ತಾರೆ, ಮತ್ತು ಮತ ಪಡೆಯುವ ಸಮಯ ಬಂದಾಗ, ಅವರು ಓಬಿಸಿ ಎಂದು ಹೇಳುತ್ತಾರೆ ಎಂದು ಅವರು ಟೀಕಿಸಿದರು.
ಜಾರ್ಖಂಡ್ ಅಸೆಂಬ್ಲಿಯಲ್ಲಿ ಚಂಪೈ ಸೊರೆನ್ ನೇತೃತ್ವದ ಸರ್ಕಾರವು ವಿಶ್ವಾಸ ಮತ ಗೆದ್ದ ಕೂಡಲೇ ಬಿಜೆಪಿಯನ್ನು ಟೀಕಿಸಿದ ಗಾಂಧಿ, ಬುಡಕಟ್ಟು ಸಿಎಂ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಿಜೆಪಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜಾರ್ಖಂಡ್‍ನ ರಾಮಗಢ ಜಿಲ್ಲೆಯಿಂದ ರಾಜ್ಯದಲ್ಲಿ ಪುನರಾರಂಭಗೊಂಡಿದ್ದು, ಜಿಲ್ಲೆಯ ಸಿದ್ದು-ಕಾನ್ಹು ಮೈದಾನದಲ್ಲಿ ರಾತ್ರಿ ವಿರಾಮದ ನಂತರ ಬೆಳಗ್ಗೆ ಮಹಾತ್ಮ ಗಾಂಧಿ ಚೌಕ್‍ನಿಂದ ಯಾತ್ರೆ ಪುನರಾರಂಭಗೊಂಡಿದೆ.
ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯು 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ.