ಬಿಹಾರ ಮತದಾರರ ಪಟ್ಟಿ: ಒಂದೇ ಮನೆಯಲ್ಲಿ 947 ಮತದಾರರು! ರಾಹುಲ್​ ಆರೋಪ

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ತಮ್ಮ 'ಮತದಾರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.;

Update: 2025-08-29 04:45 GMT

ಬಿಹಾರದ ಗಯಾ ಜಿಲ್ಲೆಯ ಒಂದು ಪ್ರದೇಶದಲದಲಿ "ಇಡೀ ಗ್ರಾಮವೇ ಒಂದೇ ಮನೆಯಲ್ಲಿ ವಾಸಿಸುತ್ತಿದೆ" ಎಂದು ಕರಡು ಮತದಾರರ ಪಟ್ಟಿಯಲ್ಲಿ ತೋರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು (ಇಸಿ) ಪ್ರಶ್ನಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ತಮ್ಮ 'ಮತದಾರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. "ಚುನಾವಣಾ ಆಯೋಗದ ಮ್ಯಾಜಿಕ್ ನೋಡಿ. ಇಡೀ ಗ್ರಾಮವೇ ಒಂದು ಮನೆಯಲ್ಲಿ ನೆಲೆಸಿದೆ," ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಆರೋಪವೇನು?

ಬಾರಾಚಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಯಾ ಜಿಲ್ಲೆಯ ನಿದಾನಿ ಗ್ರಾಮದ ಬೂತ್‌ನಲ್ಲಿರುವ "ಎಲ್ಲಾ 947 ಮತದಾರರು" "ಮನೆ ಸಂಖ್ಯೆ ಆರರ ನಿವಾಸಿಗಳು" ಎಂದು ತೋರಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಇದು ಕೇವಲ ಒಂದು ಗ್ರಾಮದ ಕಥೆಯಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಂತಹ ಅಕ್ರಮಗಳ ಪ್ರಮಾಣವನ್ನು ಊಹಿಸಬಹುದು ಎಂದು ಪಕ್ಷ ಹೇಳಿದೆ.

ಜಿಲ್ಲಾಡಳಿತದ ಸ್ಪಷ್ಟನೆ ಇಲ್ಲಿದೆ

ಈ ಆರೋಪಗಳಿಗೆ ಗಯಾ ಜಿಲ್ಲಾಧಿಕಾರಿಗಳ ಕಚೇರಿ ಸ್ಪಷ್ಟನೆ ನೀಡಿದೆ. "ಗ್ರಾಮಗಳು ಅಥವಾ ಕೊಳೆಗೇರಿಗಳಲ್ಲಿ ಮನೆಗಳಿಗೆ ಯಾವುದೇ ನಿರ್ದಿಷ್ಟ ಕ್ರಮ ಸಂಖ್ಯೆ ಇಲ್ಲದಿರುವಲ್ಲಿ, ಮತದಾರರ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು 'ಕಾಲ್ಪನಿಕ ಮನೆ ಸಂಖ್ಯೆ' (notional house number) ನೀಡಲಾಗುತ್ತದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಗ್ರಾಮಸ್ಥರ ಹೇಳಿಕೆಗಳಿರುವ ವಿಡಿಯೊವನ್ನು ಜಿಲ್ಲಾಡಳಿತ ಹಂಚಿಕೊಂಡಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ತಮಗೆ ತೃಪ್ತಿ ಇದೆ, ಆದರೆ ತಮ್ಮ ಪ್ರದೇಶದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವುದಕ್ಕೆ ಬೇಸರವಿದೆ ಎಂದು ಗ್ರಾಮಸ್ಥರು ಹೇಳಿರುವುದು ವರದಿಯಾಗಿದೆ. 

Tags:    

Similar News