ವಾರಣಾಸಿಗೆ ಪ್ರಧಾನಿ ಜೂನ್ 18ರಂದು ಭೇಟಿ: ರೈತರಿಗೆ 20 ಸಾವಿರ ಕೋಟಿ ರೂ.ಬಿಡುಗಡೆ, ಕೃಷಿ ಸಖಿಯರಿಗೆ ಸನ್ಮಾನ

Update: 2024-06-15 12:15 GMT

ನವದೆಹಲಿ, ಜೂನ್ 15- ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಜೂನ್ 18 ರಂದು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ದೇಶಾದ್ಯಂತದ 9.26 ಕೋಟಿ ಫಲಾನುಭವಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ 17 ನೇ ಕಂತು, 20,000 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ.

ರೈತರಿಗೆ ಬೆಂಬಲ ನೀಡುವ ಮೂಲಕ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಲು‌ ತರಬೇತಿ ಪಡೆದ ಸ್ವಸಹಾಯ ಗುಂಪು (ಎಸ್ಎಚ್‌ಜಿ)ಗಳ 30,000 ಕ್ಕೂ ಹೆಚ್ಚು 'ಕೃಷಿ ಸಖಿ'ಯರಿಗೆ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ. 

ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಕೃಷಿ ಕ್ಷೇತ್ರಕ್ಕೆ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದರು. 

ʻಕಳೆದ ಎರಡು ಅಧಿಕಾರಾವಧಿಯಲ್ಲಿ ಪ್ರಧಾನಿ ಅವರಿಗೆ ಕೃಷಿ ಯಾವಾಗಲೂ ಆದ್ಯತೆ ವಿಷಯವಾಗಿದೆ. ಅವರು ರೈತರ ಹಿತದೃಷ್ಟಿಯಿಂದ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಕಿಸಾನ್ ಯೋಜನೆಯ 17 ನೇ ಕಂತು ಬಿಡುಗಡೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದರು,ʼ ಎಂದು ಹೇಳಿದರು. 

2019ರಲ್ಲಿ ಪ್ರಾರಂಭವಾದ ಪಿಎಂ-ಕಿಸಾನ್‌ ನೇರ ಲಾಭ ವರ್ಗಾವಣೆ (ಡಿಬಿಟಿ) ಉಪಕ್ರಮವಾಗಿದ್ದು, ಇದರಡಿಯಲ್ಲಿ ಫಲಾನುಭವಿ ರೈತರು ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6,000 ರೂ. ಪಡೆಯುತ್ತಾರೆ. 

ʻಯೋಜನೆ ಪ್ರಾರಂಭವಾದಾಗಿನಿಂದ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ ಕೇಂದ್ರ 3.04 ಲಕ್ಷ ಕೋಟಿ ರೂ.ವಿತರಿಸಿದೆ,ʼ ಎಂದು ಚೌಹಾಣ್ ಹೇಳಿದರು. ವಾರಣಾಸಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ವಿವಿಧ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. 

ಕೃಷಿ ಸಖಿ ಯೋಜನೆ ವಿವರ: ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಯೋಗದ ಪ್ರಯತ್ನವಾದ ಕೃಷಿ ಸಖಿ ಯೋಜನೆ ಬಗ್ಗೆ ಕೃಷಿ ಸಚಿವರು ಬೆಳಕು ಚೆಲ್ಲಿದರು. ಈ ಯೋಜನೆಯು ರೈತ ಸಮುದಾಯಕ್ಕೆ ಸಹಾಯ ಮಾಡಲು ಮತ್ತು ಹೆಚ್ಚುವರಿ ಆದಾಯ ಗಳಿಸಲು ನೆರವಾಗಲು ಎಸ್‌ಎಚ್‌ಜಿಗಳ 90,000 ಮಹಿಳೆಯರಿಗೆ ವಿಸ್ತರಣೆ ಕೃಷಿ ಕಾರ್ಮಿಕರಾಗಿ ತರಬೇತಿ ನೀಡುವ ಗುರಿಯನ್ನು ಹೊಂದಿದೆ. 

ಇಲ್ಲಿಯವರೆಗೆ ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಜಾರ್ಖಂಡ್, ಆಂಧ್ರಪ್ರದೇಶ, ಮೇಘಾಲಯ ಸೇರಿದಂತೆ 12 ರಾಜ್ಯಗಳಲ್ಲಿ ಉದ್ದೇಶಿತ 70,000 ಜನರಲ್ಲಿ 34,000 ಕ್ಕೂ ಹೆಚ್ಚು ಕೃಷಿ ಸಖಿಯರನ್ನು ವಿಸ್ತರಣಾ ಕಾರ್ಯಕರ್ತರೆಂದು ಪ್ರಮಾಣೀಕರಿಸಲಾಗಿದೆ. 

ಸರ್ಕಾರವು ಕೃಷಿ ಕ್ಷೇತ್ರಕ್ಕಾಗಿ 100 ದಿನಗಳ ಯೋಜನೆ ಸಿದ್ಧಪಡಿಸುತ್ತಿದ್ದು, ರೈತರ ಕಲ್ಯಾಣ ಮತ್ತು ದೇಶಿ ಕೃಷಿಯ ಒಟ್ಟಾರೆ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಸಾರುತ್ತಿದೆ. 

Tags:    

Similar News