ʼಮೋದಿ 3.0ʼ ಭರವಸೆ ವ್ಯಕ್ತಪಡಿಸಿದ ಪ್ರಧಾನಿ
ಮೋದಿ ಸರ್ಕಾರವು ಐದು ವರ್ಷಗಳ ತನ್ನ ಎರಡನೇ ಅವಧಿಯನ್ನು ಈ ವರ್ಷ ಪೂರ್ಣಗೊಳಿಸುತ್ತಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿವೆ.;
ಹೊಸದಿಲ್ಲಿ, ಫೆ.7 (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸುವ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂದಿನ ಐದು ವರ್ಷಗಳ ಅವಧಿಯ ಮುನ್ನೋಟವನ್ನು ಬುಧವಾರ ವಿವರಿಸಿದ್ದಾರೆ. ಮೋದಿ 3.0 ಸರಕಾರವು 'ವಿಕಸಿತ್ ಭಾರತ್' ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರದ ಬಲವರ್ಧನೆಗಾಗಿ ತನ್ನೆಲ್ಲ ಶಕ್ತಿಯನ್ನು ಹಾಕಲಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಕುರಿತು ತೀವ್ರವಾಗಿ ಟೀಕಿಸಿದ ಮೋದಿ, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರವು ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ. ಭಾರತವು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ರಾಜ್ಯಸಭೆಗೆ ತಿಳಿಸಿದರು.
"ಸಬಕಾ ಸಾಥ್ ಒಂದು ಘೋಷಣೆಯಲ್ಲ, ಅದು ಮೋದಿಯವರ ಗ್ಯಾರಂಟಿ. ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ (ವಿಕಸಿತ್ ಭಾರತ್) ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ನಮ್ಮ ಸರ್ಕಾರದ ಮೂರನೇ ಅವಧಿ ದೂರವಿಲ್ಲ. ಕೆಲವರು ಇದನ್ನು ಮೋದಿ 3.0 ಎಂದು ಕರೆಯುತ್ತಾರೆ. ಮೋದಿ 3.0 'ವಿಕಸಿತ್ ಭಾರತ್' ಅಡಿಪಾಯವನ್ನು ಬಲಪಡಿಸಲು ತನ್ನ ಸರ್ವಶಕ್ತಿಯನ್ನು ಹಾಕುತ್ತದೆ. ವಿಕಸಿತ್ ಭಾರತ್ ಒಂದು ಪದವಲ್ಲ, ಆದರೆ ಇದು ನಮ್ಮ ಬದ್ಧತೆ” ಎಂದು ಮೋದಿ ಹೇಳಿದರು.
ಮೋದಿ ಸರ್ಕಾರವು ಐದು ವರ್ಷಗಳ ತನ್ನ ಎರಡನೇ ಅವಧಿಯನ್ನು ಈ ವರ್ಷ ಪೂರ್ಣಗೊಳಿಸುತ್ತಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿವೆ.
ಮುಂದಿನ ಐದು ವರ್ಷಗಳ ಕಾಲ ತಮ್ಮ ದೃಷ್ಟಿಕೋನವನ್ನು ವಿವರಿಸಿದ ಮೋದಿ, ಪಿಎಂ ಕಿಸಾನ್, ಪಿಎಂ ಆವಾಸ್ ಯೋಜನೆ, ಉಚಿತ ಪಡಿತರ, ಆಯುಷ್ಮಾನ್ ಭಾರತ್ ಮತ್ತು ಅಗ್ಗದ ಔಷಧಗಳು (ಜನ್ ಔಷಧಿ ಕೇಂದ್ರ) ನಂತಹ ಎಲ್ಲಾ ಪ್ರಮುಖ ಕಾರ್ಯಕ್ರಮಗಳು ಮುಂದುವರಿಯುತ್ತವೆ ಎಂದರು.
ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಭಾರತವು ಹಲವಾರು ಪಟ್ಟು ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ವೈದ್ಯಕೀಯ ಚಿಕಿತ್ಸೆಯು ಹೆಚ್ಚು ಸುಲಭವಾಗಿ ಮತ್ತು ಅಗ್ಗವಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ದೆಹಲಿಯಲ್ಲಿ ನಡೆಸಿರುವ ಪ್ರತಿಭಟನೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಆಡಳಿತದ ಸರ್ಕಾರ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ‘ಪ್ರತ್ಯೇಕ ರಾಷ್ಟ್ರ’ ಹೇಳಿಕೆಯನ್ನು ಬುಧವಾರ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಪಕ್ಷದ ಸದಸ್ಯರಿಂದ ಇಂತಹ ಹೇಳಿಕೆ ದುರದೃಷ್ಟಕರ ಎಂದು ಹೇಳಿದ್ದಾರೆ.
"ರಾಷ್ಟ್ರ ಎನ್ನುವುದು ನಮಗೆ ಕೇವಲ ಒಂದು ತುಂಡು ಭೂಮಿ ಅಲ್ಲ. ನಮಗೆಲ್ಲರಿಗೂ ಇದು ಸ್ಪೂರ್ತಿದಾಯಕ ಘಟಕವಾಗಿದೆ ... ದೇಹದ ಒಂದು ಅಂಗವು ಕಾರ್ಯನಿರ್ವಹಿಸದಿದ್ದರೆ, ಇಡೀ ದೇಹವನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ದೇಶದ ಒಂದು ಮೂಲೆಯಲ್ಲಿ ಅಭಿವೃದ್ಧಿಯಿಲ್ಲದಿದ್ದರೆ, ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ" ಎಂದು ತೆರಿಗೆ ಅಸಮಾನ ಹಂಚಿಕೆಯ ಬಗ್ಗೆ ಪ್ರಧಾನಿ ಪರೋಕ್ಷ ಸಮರ್ಥನೆ ನೀಡಿದ್ದಾರೆ.