ನಳಂದಾ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ

ನಳಂದ ಎಂಬುದು ಕೇವಲ ಹೆಸರಲ್ಲ; ಅದೊಂದು ಗುರುತು ಮತ್ತು ಗೌರವ. ಒಂದು ಮೌಲ್ಯ ಮತ್ತು ಮಂತ್ರ. ಬೆಂಕಿ ಪುಸ್ತಕಗಳನ್ನು ಸುಡಬಹುದು.ಆದರೆ, ಜ್ಞಾನವನ್ನು ನಾಶ ಪಡಿಸಲು ಆಗುವುದಿಲ್ಲ ಎಂದು ಪ್ರಧಾನಿ ಹೇಳಿದರು.

Update: 2024-06-19 08:24 GMT
ನಳಂದ ವಿಶ್ವವಿದ್ಯಾನಿಲಯದ ಸಮೀಪದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ 'ನಳಂದ ಮಹಾವಿಹಾರ'ಕ್ಕೆ ಪ್ರಧಾನಿ ಭೇಟಿ ನೀಡಿದರು.

ʻನಳಂದಾ ವಿಶ್ವವಿದ್ಯಾನಿಲಯದ ಪುನರ್ನಿರ್ಮಾಣವು ಭಾರತದ ಸುವರ್ಣ ಯುಗವನ್ನು ಪ್ರಾರಂಭಿಸಲಿದೆ,ʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜೂನ್ 19) ಬಿಹಾರದ ರಾಜ್‌ಗಿರ್‌ನಲ್ಲಿ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ನ್ನು ಉದ್ಘಾಟಿಸಿದ ನಂತರ ಹೇಳಿದರು.

ʻ ನಳಂದದ ಪುನರುಜ್ಜೀವನ, ಈ ಹೊಸ ಕ್ಯಾಂಪಸ್ ಜಗತ್ತಿಗೆ ಭಾರತದ ಸಾಮರ್ಥ್ಯದ ಪರಿಚಯಿಸುತ್ತದೆ. ಭಾರತವನ್ನು ಶೈಕ್ಷಣಿಕ ಕೇಂದ್ರ ವನ್ನಾಗಿ ಮಾಡುವುದು ಅವರ ದೃಷ್ಟಿಯಾಗಿತ್ತು,ʼ ಎಂದು ಅವರು ತಿಳಿಸಿದರು. 3 ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ 10 ದಿನಗಳಲ್ಲಿ ನಳಂದಾಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಪ್ರಧಾನಿ ಅವರ ಪ್ರಕಾರ, ನಳಂದ ಎಂಬುದು ಕೇವಲ ಹೆಸರಲ್ಲ; ಅದು ಗುರುತು ಮತ್ತು ಗೌರವ. ನಳಂದವು ಒಂದು ಮೌಲ್ಯ ಮತ್ತು ಮಂತ್ರ. ಬೆಂಕಿ ಪುಸ್ತಕಗಳನ್ನು ಸುಡಬಹುದು. ಆದರೆ, ಜ್ಞಾನವನ್ನು ನಾಶಮಾಡುವುದಿಲ್ಲ ಎಂದು ಹೇಳಿದರು.

ಭಾರತದ ಶೈಕ್ಷಣಿಕ ಪರಂಪರೆ: ನಳಂದ ದೇಶದ ಶೈಕ್ಷಣಿಕ ಪರಂಪರೆ ಮತ್ತು ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿದೆ. ನಾವು ನಳಂದದ ಹಳೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಬೇಕಿದೆ ಎಂದು ಅವರು ಪುನರುಚ್ಚರಿಸಿದರು. 

2010 ರಲ್ಲಿ ನಳಂದಾ ವಿಶ್ವವಿದ್ಯಾನಿಲಯ ಕಾಯ್ದೆಯನ್ನು ಅಂಗೀಕರಿಸಿದ ನಂತರ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು. ವಿಶ್ವವಿದ್ಯಾನಿ ಲಯ 2014 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿ, 2020 ರಲ್ಲಿ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿತು. ಕ್ಯಾಂಪಸ್‌ ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪದ ಸಂಯೋಜನೆಯಾಗಿದೆ. 455 ಎಕರೆ ವಿಸ್ತೀರ್ಣದ ಕ್ಯಾಂಪಸ್ ನಲ್ಲಿ 100 ಎಕರೆಯಲ್ಲಿ ಜಲ ಮೂಲಗಳಿವೆ.

ಐದನೇ ಶತಮಾನದಿಂದ ಅಸ್ತಿತ್ವದಲ್ಲಿದ್ದ ನಳಂದಾ ವಿಶ್ವವಿದ್ಯಾನಿಲಯವು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ತಜ್ಞರ ಪ್ರಕಾರ, 12 ನೇ ಶತಮಾನದಲ್ಲಿ ಆಕ್ರಮಣಕಾರರಿಂದ ನಾಶವಾಗುವ ಮೊದಲು, 800 ವರ್ಷ ಕಾಲ ಪ್ರವರ್ಧಮಾನಗೊಂಡಿತ್ತು.

ದೇಶದಲ್ಲಿ 23 ಐಐಟಿ, 21 ಐಐಎಂ: ʻಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಪ್ರತಿ ವಾರಕ್ಕೊಂದು ವಿಶ್ವವಿದ್ಯಾನಿಲಯವನ್ನು ನಿರ್ಮಿಸಲಾಗಿದೆ. ಪ್ರತಿದಿನ ಒಂದು ಐಟಿಐ ಹಾಗೂ ಪ್ರತಿದಿನ ಸರಾಸರಿ ಎರಡು ಹೊಸ ಕಾಲೇಜುಗಳನ್ನು ನಿರ್ಮಿಸಲಾಗಿದೆ. ದೇಶದಲ್ಲಿ 23 ಐಐಟಿಗಳಿವೆ. ಐಐಎಂಗಳ ಸಂಖ್ಯೆ 13ರಿಂದ 21 ಕ್ಕೆ ಏರಿದೆ,ʼ ಎಂದು ಪ್ರಧಾನಿ ಹೇಳಿದರು. 

ಪ್ರಧಾನಿ ಹೊಸ ಕ್ಯಾಂಪಸ್ ಉದ್ಘಾಟಿಸುವ ಮೊದಲು ವಿಶ್ವವಿದ್ಯಾನಿಲಯದ ಸಮೀಪದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ 'ನಳಂದ ಮಹಾವಿಹಾರ'ಕ್ಕೆ ಭೇಟಿ ನೀಡಿದರು. ನಳಂದಕ್ಕೆ ಪ್ರಧಾನಿ ಅವರ ಭೇಟಿಯ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. 

ಎಎಸ್‌ಐ ಪಾಟ್ನಾ ವೃತ್ತದ ಅಧೀಕ್ಷಕರಾದ ಗೌತಮಿ ಭಟ್ಟಾಚಾರ್ಯ ಅವರು ಪ್ರಾಚೀನ ಅವಶೇಷಗಳ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಿದರು. ನಳಂದಾ ಭೇಟಿಗೂ ಮುನ್ನ ಪ್ರಧಾನಿಯವರು ಎಕ್ಸ್‌ನಲ್ಲಿ ಬರೆದಿದ್ದಾರೆ; ʻ ಶಿಕ್ಷಣ ಕ್ಷೇತ್ರಕ್ಕೆ ಇದು ಅತ್ಯಂತ ವಿಶೇಷವಾದ ದಿನ. ನಳಂದ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ನ್ನು ರಾಜ್‌ಗೀರ್‌ನಲ್ಲಿ ಉದ್ಘಾಟಿಸಲಾಗುವುದು. ಈ ವಿಶ್ವವಿದ್ಯಾನಿಲಯವು ಯುವಜನರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲಿದೆ,ʼ

ನಳಂದ ವಿಶ್ವವಿದ್ಯಾನಿಲಯದ ಬಗ್ಗೆ: ನಳಂದ ವಿಶ್ವವಿದ್ಯಾನಿಲಯದ 455 ಎಕರೆ ಕ್ಯಾಂಪಸ್ 100 ಎಕರೆ ಜಲಮೂಲಗಳೊಂದಿಗೆ ನಿವ್ವಳ ಶೂನ್ಯ ಪ್ರದೇಶವನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯವು ಎರಡು ಕಟ್ಟಡಗಳಲ್ಲಿದ್ದು, 40 ತರಗತಿ ಕೊಠಡಿ, 300 ಆಸನಗಳ 2 ಸಭಾಂಗಣ, 2,000 ಆಸನಗಳ ಆಂಫಿ ಥಿಯೇಟರ್, ಕ್ರೀಡಾ ಸಂಕೀರ್ಣ ಮತ್ತು ಅಂತಾರಾಷ್ಟ್ರೀಯ ಕೇಂದ್ರವನ್ನು ಒಳಗೊಂಡಿದೆ. ಸುಮಾರು 550 ಮಂದಿ ಇರಬಲ್ಲ ವಿದ್ಯಾರ್ಥಿನಿಲಯ ಇದೆ.

ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಸಂಶೋಧನಾ ಕೋರ್ಸ್‌ಗಳು, ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್‌ಗಳನ್ನು ನೀಡುತ್ತದೆ ಮತ್ತು 137 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿದೆ.

Tags:    

Similar News