ಪುಟಿನ್ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ

ತಾವು ಮತ್ತು ಪುಟಿನ್ ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳ ಬಗ್ಗೆ ಚರ್ಚಿಸಿದೆವು ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ಹೇಳಿದ್ದಾರೆ..;

Update: 2024-08-27 13:10 GMT

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು.

ಇತ್ತೀಚಿನ ಉಕ್ರೇನ್ ಭೇಟಿಯ ʻಒಳನೋಟʼಗಳನ್ನು ಪುಟಿನ್‌ ಅವರೊಂದಿಗೆ  ಹಂಚಿಕೊಂಡು, ಉಕ್ರೇನ್‌ನೊಂದಿಗಿನ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. 

ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳ ಬಗ್ಗೆ ಚರ್ಚಿಸಿದೆವು ಎಂದು ಮೋದಿ ಎಕ್ಸ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.  ʻರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಇತ್ತೀಚಿನ ಉಕ್ರೇನ್ ಭೇಟಿ ಕುರಿತ ಒಳನೋಟಗಳನ್ನು ವಿನಿಮಯ ಮಾಡಿಕೊಂಡೆ. ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಬೆಂಬಲಿಸಲು ಭಾರತದ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆ,ʼ ಎಂದು ಹೇಳಿದರು. 

ಮೋದಿ ಅವರು ಉಕ್ರೇನ್‌ ಭೇಟಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಸೋಮವಾರ ಮಾಹಿತಿ ನೀಡಿದ್ದರು.

ಎಂಇಎ ಹೇಳಿಕೆ: ಕಳೆದ ತಿಂಗಳು 22 ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಿದ್ದಾಗ ನಡೆದ ತಮ್ಮಿಬ್ಬರ ಭೇಟಿಯನ್ನು ಪುಟಿನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ಸಮಯದಲ್ಲಿ ಮೋದಿ ಸ್ಮರಿಸಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ʻಉಭಯ ನಾಯಕರು ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಮೋದಿ ಅವರು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಒತ್ತಿ ಹೇಳಿದರು. ಶಾಶ್ವತ ಮತ್ತು ಶಾಂತಿಯುತ ಪರಿಹಾರಕ್ಕಾಗಿ ಎಲ್ಲಾ ಮಧ್ಯಸ್ಥಗಾರರ ಪ್ರಾಮಾಣಿಕ ಮತ್ತು ಪ್ರಾಯೋಗಿಕ ಒಳಗೊಳ್ಳುವಿಕೆ ಕುರಿತು ಒತ್ತಿ ಹೇಳಿದರು,ʼ ಎಂದಿದೆ.

ʻಉಭಯ ನಾಯಕರು ಹಲವು ದ್ವಿಪಕ್ಷೀಯ ವಿಷಯಗಳ ಪ್ರಗತಿಯನ್ನು ಪರಿಶೀಲಿಸಿದರು. ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಪರಸ್ಪರ ಸಂಪರ್ಕದಲ್ಲಿ ಇರಲು ಒಪ್ಪಿಕೊಂಡರು,ʼ ಎಂದು ತಿಳಿಸಿದೆ.

ಆಗಸ್ಟ್ 23 ರಂದು ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಭಾರತಕ್ಕೆ ಭೇಟಿ ನೀಡುವಂತೆ ಝೆಲೆನ್ಸ್ಕಿ ಅವರನ್ನು ಆಹ್ವಾನಿಸಿದರು.

Tags:    

Similar News