Pamban Bridge | ದೇಶದ ಮೊದಲ ವರ್ಟಿಕಲ್ ಲಿಫ್ಟ್ ಬ್ರಿಡ್ಜ್ “ಪಂಬನ್ ಸೇತುವೆ” ಉದ್ಘಾಟಿಸಿದ ಪ್ರಧಾನಿ ಮೋದಿ

Pamban Bridge: ಇದು ರಾಮೇಶ್ವರಂ ದ್ವೀಪಕ್ಕೆ ತಮಿಳುನಾಡಿನಿಂದ ರೈಲು ಸಂಪರ್ಕ ಒದಗಿಸುವ ಸೇತುವೆಯಾಗಿದೆ. ದೇಶದ ಆಧುನಿಕ ಎಂಜಿನಿಯರಿಂಗ್ ಅದ್ಭುತ ಎಂದೂ ಪರಿಗಣಿಸಲ್ಪಟ್ಟಿದೆ.;

Update: 2025-04-06 08:15 GMT

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಲಾಗಿರುವ ನೂತನ ಪಂಬನ್ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ದೇಶದ ಮೊದಲ ವರ್ಟಿಕಲ್ ಲಿಫ್ಟ್ ಬ್ರಿಡ್ಜ್ (ಲಂಬವಾಗಿ ಮೇಲೇಳುವ ಸಮುದ್ರ ಸೇತುವೆ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಂಬನ್ ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ತಮ್ಮ 3 ದಿನಗಳ ಶ್ರೀಲಂಕಾ ಪ್ರವಾಸ ಮುಗಿಸಿ ಭಾನುವಾರ ನೇರವಾಗಿ ತಮಿಳುನಾಡಿಗೆ ಬಂದಿಳಿದ ಪ್ರಧಾನಿ ಮೋದಿ ಸೇತುವೆ ಉದ್ಘಾಟನೆ ಮಾಡಿದರು.

ಇದು ರಾಮೇಶ್ವರಂ ದ್ವೀಪಕ್ಕೆ ತಮಿಳುನಾಡಿನಿಂದ ರೈಲು ಸಂಪರ್ಕ ಒದಗಿಸುವ ಸೇತುವೆಯಾಗಿದೆ. ದೇಶದ ಆಧುನಿಕ ಎಂಜಿನಿಯರಿಂಗ್ ಅದ್ಭುತ ಎಂದೂ ಪರಿಗಣಿಸಲ್ಪಟ್ಟಿದೆ.

ಭಾನುವಾರ ಶ್ರೀಲಂಕಾದಿಂದ ರಾಮೇಶ್ವರಂಗೆ ತಲುಪಿದ ಪ್ರಧಾನಿ ಮೋದಿ ಅವರು ಮಧ್ಯಾಹ್ನ ಸುಮಾರು 12:45ಕ್ಕೆ ಪ್ರಸಿದ್ಧ ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪೂಜೆ ಮಾಡಿದರು. ಮಧ್ಯಾಹ್ನ 1:30ರ ಸುಮಾರಿಗೆ, ಅವರು ಹೊಸ ಪಂಬನ್ ಸೇತುವೆಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಸೇತುವೆಯ 72.5 ಮೀಟರ್ ಉದ್ದದ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಏರಿಸಲಾಯಿತು. ಈ ವೇಳೆ ಸೇತುವೆಯಡಿಯಲ್ಲಿ ಕರಾವಳಿ ರಕ್ಷಕ ಪಡೆಯ ಹಡಗು ಸಾಗುವುದನ್ನು ತೋರಿಸಲಾಯಿತು.

ಪಂಬನ್ ಸೇತುವೆಯ ವೈಶಿಷ್ಟ್ಯತೆ

ಈ ಸೇತುವೆಯು 2.08 ಕಿಲೋಮೀಟರ್ ಉದ್ದವಿದ್ದು, 99 ಸ್ಪ್ಯಾನ್‌ಗಳನ್ನು ಹೊಂದಿದೆ. ಇದರ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ 17 ಮೀಟರ್ ಎತ್ತರಕ್ಕೆ ಏರಬಲ್ಲದು. ಇದು ಮೇಲಕ್ಕೇರುವ ಮೂಲಕ, ಸೇತುವೆಯ ಕೆಳಗೆ ದೊಡ್ಡ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಸೇತುವೆಯನ್ನು 550 ಕೋಟಿ ರೂ. ವೆಚ್ಚದಲ್ಲಿ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ನಿರ್ಮಿಸಿದೆ.

ಪಂಬನ್ ಸೇತುವೆಯು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯಾಗಿದೆ. 1914 ರಲ್ಲಿ ಬ್ರಿಟಿಷ್ ಎಂಜಿನಿಯರ್‌ಗಳು ನಿರ್ಮಿಸಿದ ಹಳೆಯ ಪಂಬನ್ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಹಳೆಯ ಸೇತುವೆಯು 2022 ರಲ್ಲಿ ತುಕ್ಕು ಹಿಡಿದ ಕಾರಣ ಅದರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಹಳೆಯ ಸೇತುವೆಯ ನಿರ್ವಹಣಾ ವೆಚ್ಚವೂ ಅಧಿಕವಾಗಿದ್ದರಿಂದ 2019ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಿತ್ತು. ಹಳೆಯ ಸೇತುವೆಯಲ್ಲಿ ರೈಲುಗಳ ವೇಗದ ಮಿತಿ ಗಂಟೆಗೆ 10 ಕಿ.ಮೀ. ನಿಗದಿಪಡಿಸಲಾಗಿತ್ತು. ಆದರೆ ನೂತನ ಸೇತುವೆಯಲ್ಲಿ ರೈಲುಗಳು ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ಎತ್ತರ ಮತ್ತು ವಿನ್ಯಾಸ: ಹಳೆಯ ಸೇತುವೆಗಿಂತ ಹೊಸ ಸೇತುವೆ 3 ಮೀಟರ್ ಎತ್ತರದಲ್ಲಿದ್ದು, ದೊಡ್ಡ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ವರ್ಟಿಕಲ್ ಲಿಫ್ಟ್ ಮೆಕ್ಯಾನಿಸಂ: ಇದು ಕೇವಲ 5 ನಿಮಿಷಗಳಲ್ಲಿ 22 ಮೀಟರ್ ಎತ್ತರಕ್ಕೆ ಏರಬಲ್ಲದು. ಹಳೆಯ ಸೇತುವೆಗೆ 25-30 ನಿಮಿಷಗಳು ಬೇಕಾಗಿತ್ತು.

ಬಾಳಿಕೆ: ಸ್ಟೇನ್‌ಲೆಸ್ ಸ್ಟೀಲ್ ಅನ್ನು ಬಳಸಲಾಗಿದೆ. ಉತ್ತಮ ಗುಣಮಟ್ಟದ ರಕ್ಷಣಾತ್ಮಕ ಪೇಂಟ್ ಅನ್ನೂ ಬಳಸಲಾಗಿದೆ. ಕಠಿಣ ಸಮುದ್ರ ಪರಿಸರದಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.

ಇತರೆ ಯೋಜನೆಗಳ ಲೋಕಾರ್ಪಣೆ

ಪಂಬನ್ ಸೇತುವೆಯ ಉದ್ಘಾಟನೆಯ ಜೊತೆಗೆ, ಮೋದಿ ಅವರು ತಮಿಳುನಾಡಿನಲ್ಲಿ 8,300 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲು ಮತ್ತು ರಸ್ತೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇವುಗಳಲ್ಲಿ ಪ್ರಮುಖವಾದವೆಂದರೆ, ವಾಲಾಜಪೇಟ್ - ರಾಣಿಪೇಟ್ ಎನ್‌ಎಚ್-40: 28 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಯೋಜನೆಗೆ ಶಂಕುಸ್ಥಾಪನೆ. ವಿಲುಪ್ಪುರಂ - ಪುದುಚೇರಿ ಎನ್‌ಎಚ್-332: 29 ಕಿ.ಮೀ ಉದ್ದದ ರಸ್ತೆಯ ಚತುಷ್ಪಥ ಯೋಜನೆ ಸಮರ್ಪಣೆ. ಪೂಂಡಿಯಾನ್‌ಕುಪ್ಪಂ - ಸಟ್ಟನಾಥಪುರಂ ಎನ್‌ಎಚ್-32: 57 ಕಿ.ಮೀ ಉದ್ದದ ರಸ್ತೆ ಲೋಕಾರ್ಪಣೆ. ಚೋಲಾಪುರಂ - ತಂಜಾವೂರು ಎನ್‌ಎಚ್-36: 48 ಕಿ.ಮೀ ಉದ್ದದ ರಸ್ತೆಯ ಉದ್ಘಾಟನೆ.

Tags:    

Similar News