ಬಾಂಗ್ಲಾ ಪ್ರಧಾನಿಯೊಂದಿಗೆ ಮೋದಿ ವಿಸ್ತೃತ ಮಾತುಕತೆ

ವ್ಯಾಪಾರ, ಸಂಪರ್ಕ ಮತ್ತು ಇಂಧನ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಕ್ಕೆ ವೇಗ ನೀಡಲು ನಿರ್ಧಾರ

Update: 2024-06-22 12:02 GMT

ಹೊಸದಿಲ್ಲಿ, ಜೂನ್ 22- ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ವ್ಯಾಪಾರ, ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ವ್ಯಾಪಕ ಮಾತುಕತೆ ನಡೆಸಿದರು. 

ಬಾಂಗ್ಲಾ ದೇಶದ ಪ್ರಧಾನಿ ಶುಕ್ರವಾರದಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಲೋಕಸಭೆ ಚುನಾವಣೆ ನಂತರ ವಿದೇಶಿ ನಾಯಕರೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. 

ʻಪ್ರಧಾನಿ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಚರ್ಚೆಗಳಿಗೆ ಮುನ್ನ ಸ್ವಾಗತಿಸಿದರುʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಬರೆದಿದ್ದಾರೆ.  ʻ2019 ರಿಂದ ಇಬ್ಬರು ನಾಯಕರು ಹತ್ತು ಬಾರಿ ಭೇಟಿಯಾಗಿದ್ದಾರೆ. ಅಭೂತಪೂರ್ವ ಸ್ಥಿತ್ಯಂತರಗಳನ್ನು ಮಾಡಿದ್ದಾರೆ,ʼ ಎಂದು ಹೇಳಿದರು.

ಬೆಳಗ್ಗೆ ಹಸೀನಾ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ಅವರಿಗೆ ಗೌರವ ಸಮರ್ಪಿಸಿದರು.

ಹಸೀನಾ ಅವರಿಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು.

ವ್ಯಾಪಾರ, ಸಂಪರ್ಕ ಮತ್ತು ಇಂಧನ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳಿಗೆ ವೇಗವನ್ನು ನೀಡುವುದು ಮೋದಿ-ಹಸೀನಾ ಮಾತುಕತೆಯ ಕೇಂದ್ರಬಿಂದುವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 9 ರಂದು ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಏಳು ಪ್ರಮುಖ ನಾಯಕರಲ್ಲಿ ಹಸೀನಾ ಕೂಡ ಇದ್ದರು.

ದ್ವಿಪಕ್ಷೀಯ ಸಂಬಂಧ ಏರುಗತಿಯಲ್ಲಿ: ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಏರುಗತಿಯಲ್ಲಿದೆ. ಬಾಂಗ್ಲಾ ದೇಶ ತನ್ನ ʻನೆರೆಹೊರೆಯ ಮೊದಲುʼ ನೀತಿಯಡಿ ಭಾರತದ ಪ್ರಮುಖ ಪಾಲುದಾರನಾಗಿದೆ. ಭದ್ರತೆ, ವ್ಯಾಪಾರ, ವಾಣಿಜ್ಯ, ಇಂಧನ, ಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ ಮತ್ತು ಸಾಗರ ವ್ಯವಹಾರಗಳ ಕ್ಷೇತ್ರಗಳಲ್ಲಿ ವಹಿವಾಟು ನಡೆಯುತ್ತಿದೆ. 

ಭಾರತ ಏಷ್ಯಾದಲ್ಲಿ ಬಾಂಗ್ಲಾ ದೇಶದ ಅತಿ ದೊಡ್ಡ ರಫ್ತು ತಾಣ. 2022-23 ರಲ್ಲಿ ಬಾಂಗ್ಲಾಕ್ಕೆ 2 ಶತಕೋಟಿ ಅಮೆರಿಕನ್‌ ಡಾಲರ್ ಮೌಲ್ಯದ ಸರಕುಗಳು ರಫ್ತುಆಗಿವೆ. ಉಭಯ ದೇಶಗಳು 4096.7 ಕಿಮೀ ಗಡಿಯನ್ನು ಹಂಚಿಕೊಂಡಿವೆ. ಮಾದಕವಸ್ತು ಕಳ್ಳಸಾಗಣೆ, ನಕಲಿ ಕರೆನ್ಸಿ ಮತ್ತು ಮಾನವ ಕಳ್ಳಸಾಗಣೆ ಮುಂತಾದವುಗಳನ್ನು ಎದುರಿಸಲು ಎರಡೂ ದೇಶಗಳ ವಿವಿಧ ಏಜೆನ್ಸಿಗಳ ನಡುವೆ ಸಕ್ರಿಯ ಸಹಕಾರವಿದೆ.

Tags:    

Similar News