ಸಿಜೆಐ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಪ್ರಧಾನಿ ಉಪಸ್ಥಿತಿ: ಪ್ರತಿಪಕ್ಷ ಖಂಡನೆ
ನವದೆಹಲಿಯ ಸಿಜೆಐ ಡಿ.ವೈ. ಚಂದ್ರಚೂಡ್ ಅವರ ನಿವಾಸದಲ್ಲಿ ಬುಧವಾರ (ಸೆಪ್ಟೆಂಬರ್ 11) ನಡೆದ ಗಣಪತಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಅವರು ಮೋದಿ ಅವರನ್ನು ಸ್ವಾಗತಿಸುತ್ತಿರುವುದು ಹಾಗೂ ಆನಂತರ ಪ್ರಧಾನಿ ಪೂಜೆ ಸಲ್ಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ಅವರು ಮಹಾರಾಷ್ಟ್ರದ ಸಾಂಪ್ರದಾಯಿಕ ಟೋಪಿ ಧರಿಸಿರುವುದು ಕಂಡುಬಂದಿದೆ.
ರಾಜಕೀಯ ಲಾಭಕ್ಕಾಗಿ ಪೂಜೆ?: ವಕೀಲರು ಮತ್ತು ವಿರೋಧ ಪಕ್ಷಗಳು ಪ್ರಕರಣವನ್ನು ಖಂಡಿಸಿ, ವಾಗ್ದಾಳಿ ನಡೆಸಿವೆ. ನ್ಯಾ.ಚಂದ್ರಚೂಡ್ ಅವರು ಪಕ್ಷಕ್ಕೆ ಸಂಬಂಧಿಸಿದ ಪ್ರಕರಣದಿಂದ ಹಿಂದೆ ಸರಿಯುವಂತೆ ಶಿವಸೇನೆ ಕೇಳಿದೆ.
ದೆಹಲಿಯ ಸಿಜೆ ಅವರ ನಿವಾಸದಲ್ಲಿ ನಡೆದ ಪೂಜೆಯಲ್ಲಿ ನ್ಯಾ. ಚಂದ್ರಚೂಡ್ ಮತ್ತು ಅವರ ಪತ್ನಿಯೊಂದಿಗೆ ಪ್ರಧಾನಿ ಭಾಗವಹಿಸಿದ್ದರು. ಪ್ರಧಾನಿ ಹಾಗೂ ಸಿಜೆ ಒಟ್ಟಿಗೆ ಆರತಿ ಮತ್ತು ಪ್ರಾರ್ಥನೆ ಮಾಡುತ್ತಿರುವುದು ಕಂಡುಬಂದಿದೆ.
ರಾವತ್ ಟೀಕೆ: ʻಸಂವಿಧಾನದ ಪಾಲಕರು ರಾಜಕೀಯ ನಾಯಕರನ್ನು ಈ ರೀತಿ ಭೇಟಿ ಮಾಡಿವುದು ಅನುಮಾನಗಳನ್ನು ಹುಟ್ಟುಹಾಕುತ್ತದೆ,ʼ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ʻಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಒಳಗೊಂಡಿರುವ ನಮ್ಮ ಪ್ರಕರಣ ಮುಖ್ಯ ನ್ಯಾಯಾಧೀಶರ ಮುಂದೆ ವಿಚಾರಣೆಯಲ್ಲಿದೆ ಮತ್ತು ಪ್ರಧಾನಿ ಅದರ ಭಾಗವಾಗಿದ್ದಾರೆ. ನಮಗೆ ನ್ಯಾಯ ಸಿಗುತ್ತದೆಯೇ ಎಂಬ ಆತಂಕ ಕಾಡುತ್ತಿದೆ. ಸಿಜೆಐ ಅವರು ಈ ಪ್ರಕರಣದಿಂದ ಹಿಂದೆ ಸರಿಯುವುದನ್ನು ಪರಿಗಣಿಸಬೇಕು,ʼ ಎಂದು ಅವರು ಹೇಳಿದರು. ʻಗಣಪತಿ ಪೂಜೆ ಮಾಡಿದ ಇನ್ನೂ ಹಲವು ಸ್ಥಳಗಳಿವೆ. ಆದರೆ, ಮೋದಿ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದರು ಎಂಬುದು ತಿಳಿದಿಲ್ಲ,ʼ ಎಂದು ರಾವತ್ ಹೇಳಿದ್ದಾರೆ.
ಶಿವಸೇನೆಯ ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡ ವ್ಯಂಗ್ಯಭರಿತ ಪೋಸ್ಟ್ ಹಾಕಿದ್ದಾರೆ. ʻಸರಿ. ಹಬ್ಬ ಮುಗಿದ ನಂತರ, ಸಿಜೆಐ ಮಹಾರಾಷ್ಟ್ರದಲ್ಲಿ ಸಂವಿಧಾನದ 10 ನೇ ವಿಧಿಯ ನಿರ್ಲಕ್ಷ ಕುರಿತ ಪ್ರಕರಣದ ವಿಚಾರಣೆ ಮುಗಿಸುತ್ತಾರೆ ಎಂದು ಭಾವಿಸೋಣ. ಚುನಾವಣೆ ಇರುವುದರಿಂದ ಅದನ್ನು ಇನ್ನೊಂದು ದಿನಕ್ಕೆ ಮುಂದೂಡಬಹುದು, ʼಎಂದು ಬರೆದಿದ್ದಾರೆ.
ಕೆಟ್ಟ ಸಂದೇಶ ರವಾನೆ: ಖ್ಯಾತ ವಕೀಲ ಪ್ರಶಾಂತ್ ಭೂಷಣ್, ಮೋದಿಯವರ ಭೇಟಿಯು ನ್ಯಾಯಾಂಗಕ್ಕೆ ಅತ್ಯಂತ ಕೆಟ್ಟ ಸಂದೇಶವನ್ನು ಕಳುಹಿಸುತ್ತದೆ. ಹೀಗಾಗಿಯೇ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಪ್ರತ್ಯೇಕತೆ ಇರಬೇಕು,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಮುಖ್ಯ ನ್ಯಾಯಾಧೀಶರು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರದ ಪ್ರತ್ಯೇಕತೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ವಕೀಲೆ ಮತ್ತು ಹೋರಾಟಗಾರ್ತಿ ಇಂದಿರಾ ಜೈ ಸಿಂಗ್ ಆರೋಪಿಸಿದರು. ʻನಾನು ಸಿಜೆಐ ಅವರ ಸ್ವಾತಂತ್ರ್ಯದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇನೆ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನ್ಯಾಯಾಂಗದ ರಾಜಿಯನ್ನು ಖಂಡಿಸಬೇಕು,ʼ ಎಂದು ಕೇಳಿದರು.
ರಾಜಕೀಯ ಲಾಭಕ್ಕೆ ಪೂಜೆ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ವಕ್ತಾರ ಕ್ಲೈಡ್ ಕ್ರಾಸ್ಟೊ,ʼ ಸುಪ್ರೀಂ ಶರಣಾದರೆ, ರಾಷ್ಟ್ರ ಸಂಕಷ್ಟಕ್ಕೀಡಾಗುತ್ತದೆ,ʼ ಎಂದು ಹೇಳಿದ್ದಾರೆ.
ಬಿಜೆಪಿ ಮೋದಿ ಅವರ ಭೇಟಿಯನ್ನು ಸಮರ್ಥಿಸಿಕೊಂಡಿದ್ದು, ʻಭೇಟಿ ಪ್ರಾರ್ಥನೆಗೆ ಸೀಮಿತವಾಗಿದೆ ಮತ್ತು ನಮ್ಮ ಸಂಸ್ಕೃತಿಯ ಭಾಗ,ʼ ಎಂದು ಹೇಳಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್, ಬಿಜೆಪಿ ರಾಜಕೀಯ ಲಾಭಕ್ಕಾಗಿ ಪೂಜೆಯನ್ನು ಬಳಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಪ್ರತಿಸ್ಪರ್ಧಿ ಶಿವಸೇನೆ ನಾಯಕ ಮಿಲಿಂದ್ ದಿಯೋರಾ ಅವರು ಮೋದಿ ಭೇಟಿಯನ್ನು ಸಮರ್ಥಿಸಿಕೊಂಡಿದ್ದು, ʻತೀರ್ಪು ತಮ್ಮ ಪರವಾಗಿ ಬಂದಾಗ, ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಹೊಗಳುತ್ತವೆ. ತಾವು ಅಂದುಕೊಂಡಂತೆ ಆಗದೆ ಇದ್ದಾಗ, ನ್ಯಾಯಾಂಗ ರಾಜಿಯಾಗಿದೆ ಎನ್ನುತ್ತವೆ,ʼ ಎಂದು ಟೀಕಿಸಿದರು.