Election 2024| 5 ನೇ ಹಂತದಲ್ಲಿ ಶೇ.60.48 ಮತದಾನ

543 ರಲ್ಲಿ 428 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಉಳಿದ ಎರಡು ಹಂತದ ಚುನಾವಣೆ ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ.;

Update: 2024-05-21 07:01 GMT
ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಮತದಾನದ ನಂತರ ಸಾಧುಗಳು ತಮ್ಮ ಶಾಯಿ ಬೆರಳುಗಳನ್ನು ತೋರಿಸಿದರು.

ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 49 ಸ್ಥಾನಗಳಿಗೆ ನಡೆದ ಲೋಕಸಭೆಯ ಐದನೇ ಹಂತದಲ್ಲಿ ಶೇ.60.48ರಷ್ಟು ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ತನ್ನ ಅತ್ಯಧಿಕ ಶೇಕಡಾವಾರು ಮತಚಲಾವಣೆಯನ್ನು ದಾಖಲಿಸಿದೆ. 

ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದಿದ್ದು, ರಾಜ್ಯದ ಕೆಲವು ಬೂತ್‌ಗಳಲ್ಲಿ ಇವಿಎಂ ದೋಷಗಳು ಕಂಡುಬಂದಿ ವೆ. ಮಹಾರಾಷ್ಟ್ರದಲ್ಲಿ ನಿಧಾನ ಮತದಾನದ ದೂರು ದಾಖಲಾಗಿದೆ.

ಬಂಗಾಳದಲ್ಲಿ ಅತಿ ಹೆಚ್ಚು ಮತದಾನ: ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಶೇ.76.05ರಷ್ಟು ಹಾಗೂ ಮಹಾರಾಷ್ಟ್ರದಲ್ಲಿ ಶೇ.54.33 ಮತದಾನ ದಾಖಲಾಗಿದೆ. ಮುಂಬೈನ ಆರು ಲೋಕಸಭೆ ಕ್ಷೇತ್ರಗಳಲ್ಲಿ ಶೇ.47 ರಿಂದ ಶೇ.55 ರಷ್ಟು ಹಾಗೂ ಥಾಣೆಯಲ್ಲಿ ಶೇ.49.81ರಷ್ಟು ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಮುಂಬೈ, ಥಾಣೆ, ನಾಸಿಕ್ ಮತ್ತು ಲಕ್ನೋದಂತಹ ನಗರಗಳಲ್ಲಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿದ್ದ ಮತದಾನದಲ್ಲಿ ನಿರಾಸಕ್ತಿ ಪ್ರವೃತ್ತಿ ಮುಂದುವರಿದಿದೆ ಎಂದು ಇಸಿ ಸೋಮವಾರ ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿ ಉತ್ತಮ ಸ್ಪಂದನೆ: ಒಂದು ಕಾಲದಲ್ಲಿ ಉಗ್ರಗಾಮಿಗಳಿಂದ ತುಂಬಿಹೋಗಿದ್ದ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಸೋಮವಾರ ಅತಿ ಹೆಚ್ಚು ಮತದಾನವಾಗಿದೆ. ಪ್ರಮಾಣ ಶೇ.59 ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ ಪಿ.ಕೆ. ಪೋಲ್ ತಿಳಿಸಿದ್ದಾರೆ. ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 22 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.ಕಳೆದೆರಡು ದಶಕಗಳಿಂದ ಒಂದಂಕಿ ಶೇಕಡಾವಾರು ಮತದಾನ ದಾಖಲಿಸಿದ್ದ ಸೋಪೋರ್ ವಿಧಾನಸಭೆ ಕ್ಷೇತ್ರದಲ್ಲಿ ಶೇ.44 ರಷ್ಟು ಮತದಾನವಾಗಿದೆ. ʻ1967ರಲ್ಲಿ ಬಾರಾಮುಲ್ಲಾ ಲೋಕಸಭೆ ಕ್ಷೇತ್ರಕ್ಕೆ ಮೊದಲ ಬಾರಿಗೆ ಸಂಸತ್‌ ಚುನಾವಣೆ ನಡೆದಾಗಿನಿಂದ ದಾಖಲೆ ಮತದಾನ ನಡೆದಿದೆʼ ಎಂದು ಪೋಲ್ ಹೇಳಿದರು. 1984ರಲ್ಲಿ ಕ್ಷೇತ್ರದಲ್ಲಿ ಶೇ.58.90ರಷ್ಟು ಮತದಾನವಾಗಿತ್ತು. 

ಬೇರೆ ರಾಜ್ಯಗಳ ಮಾಹಿತಿ: ಬಿಹಾರದಲ್ಲಿ ಶೇ. 54.85, ಜಾರ್ಖಂಡ್‌ ಶೇ. 63.09, ಒಡಿಶಾ ಶೇ. 69.34, ಉತ್ತರ ಪ್ರದೇಶದಲ್ಲಿ ಶೇ. 57.79 ಮತ್ತು ಲಡಾಖ್‌ನಲ್ಲಿ ಶೇ 69.62 ಮತದಾನವಾಗಿದೆ. ದತ್ತಾಂಶವನ್ನು ಒಟ್ಟುಗೂಡಿಸಲಾಗುತ್ತಿದ್ದು, ಇದು ಅಂದಾಜು ಪ್ರಮಾಣ.

ಬಂಗಾಳದಲ್ಲಿ ಹಿಂಸಾಚಾರ, ಘರ್ಷಣೆ: ಪಶ್ಚಿಮ ಬಂಗಾಳದ ಏಳು ಸಂಸದೀಯ ಕ್ಷೇತ್ರಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬರಕ್‌ಪೋರ್, ಬೊಂಗಾವ್ ಮತ್ತು ಅರಾಂಬಾಗ್ ಕ್ಷೇತ್ರ ವ್ಯಾಪ್ತಿಯಲ್ಲಿ ಘರ್ಷಣೆ ನಡೆಯಿ ತು. ಇವಿಎಂ ಅಸಮರ್ಪಕ ಕಾರ್ಯ ಮತ್ತು ಮತಗಟ್ಟೆ ಏಜೆಂಟರನ್ನು ಬೂತ್‌ಗಳಿಗೆ ಪ್ರವೇಶಿಸದಂತೆ ತಡೆಯುವುದು ಸೇರಿದಂತೆ ರಾಜ್ಯ ಸಿಇಒ ಕಚೇರಿಗೆ ಸಂಜೆ 4.30 ರವರೆಗೆ 1,913 ದೂರುಗಳು ಬಂದಿವೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೂಗ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರು ಟಿಎಂಸಿ ಶಾಸಕ ಅಶಿಮಾ ಪಾತ್ರ ನೇತೃತ್ವದಲ್ಲಿ ಪ್ರತಿಭಟನೆ ಎದುರಿಸಿದರು. ಹೌರಾ ಕ್ಷೇತ್ರದ ವಿವಿಧ ಭಾಗಗಳಲ್ಲೂ ಹಿಂಸಾಚಾರ ವರದಿಯಾಗಿದೆ. ಬೊಂಗಾವ್ ಕ್ಷೇತ್ರದ ಗಯೇಶ್‌ಪುರ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕ ಸುಬೀರ್ ಬಿಸ್ವಾಸ್ ಅವರನ್ನು ಟಿಎಂಸಿ ಬೆಂಬಲಿಗರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ಕ್ಷೇತ್ರದ ಕಲ್ಯಾಣಿ ಪ್ರದೇಶದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ಶಂತನು ಠಾಕೂರ್ ಅವರು ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ಬಿಸ್ವಜಿತ್ ದಾಸ್ ಅವರ ಗುರುತಿನ ಚೀಟಿಯನ್ನು ಮತಗಟ್ಟೆಯೊಳಗೆ ಬಳಸಿದ ವ್ಯಕ್ತಿಯನ್ನು ಹಿಡಿದಿದ್ದಾರೆ. ಕೇಂದ್ರ ಪಡೆಗಳು ವ್ಯಕ್ತಿಯನ್ನು ಬೂತ್‌ನಿಂದ ಹೊರಗೆ ಕಳಿಸಿದರು. 

ಉತ್ತರಪ್ರದೇಶ: ರಕ್ಷಣಾ ಸಚಿವ ರಾಜನಾಥ್ ಸಿಂಗ್ (ಲಖನೌ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (ಅಮೇಥಿ), ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ (ಮೋಹನ್‌ ಲಾಲ್‌ ಗಂಜ್), ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಸಾಧ್ವಿ ನಿರಂಜನ್ ಜ್ಯೋತಿ (ಫತೇಪುರ್) ಮತ್ತು ಕೇಂದ್ರ ಎಂಎಸ್‌ಎಂಇ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ (ಜಲೌನ್) ಉತ್ತರ ಪ್ರದೇಶದಲ್ಲಿ ಕಣದಲ್ಲಿದ್ದಾರೆ.

ಅಮೇಥಿಯಲ್ಲಿ ಶೇ. 54.15, ಲಕ್ನೋದಲ್ಲಿ ಶೇ. 52.03 ಮತ್ತು ರಾಯ್ ಬರೇಲಿಯಲ್ಲಿ ಶೇ. 57.85 ರಷ್ಟು ಮತದಾನವಾಗಿದೆ. ನಿಧಾನಗತಿಯ ಮತದಾನ ಮತ್ತು ಇವಿಎಂಗಳ ಬಗ್ಗೆ ಸುಮಾರು 250 ದೂರುಗಳು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರಿಗೆ ಬಂದಿವೆ. ಲಲಿತ್‌ಪುರ ಜಿಲ್ಲೆಯ ಝಾನ್ಸಿ ಕ್ಷೇತ್ರದ ಮೂರು ಬೂತ್‌ಗಳಲ್ಲಿ ಶೇ.100 ಮತದಾನವಾಗಿದೆ. ರಾಯ್‌ಬರೇಲಿಯಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಪೋಟೋ ತೆಗೆಸಿಕೊಂಡರು. ಚುರುವಾದ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿ ಮಾತನಾಡಿ,ʻನಾನು ಮತ ಹಾಕಿದ್ದೇನೆ. ಎಲ್ಲಾ ಮತದಾರರು ತಮ್ಮ ಹಕ್ಕು ಚಲಾಯಿಸಲು ನಾನು ಮನವಿ ಮಾಡುತ್ತೇನೆ,ʼ ಎಂದು ಹೇಳಿದರು. ಲಕ್ನೋದಿಂದ ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವಿಪುಲ್ ಖಂಡ್‌ನ ಮತಗಟ್ಟೆಯಲ್ಲಿ ಹಾಗೂ ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರು ಮತ ಚಲಾಯಿಸಿ ದರು.

ಉದ್ದೇಶಪೂರ್ವಕ ವಿಳಂಬ: ಮಹಾರಾಷ್ಟ್ರದಲ್ಲಿ ಮುಂಬೈ ನಿವಾಸಿಗಳು ದೀರ್ಘ ಸರತಿ ಸಾಲುಗಳನ್ನು ಎದುರಿಸಿದ್ದು, ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿವೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರ್ಕಾರದ ಆಜ್ಞೆ ಮೇರೆಗೆ ಚುನಾವಣೆ ಪ್ರಕ್ರಿಯೆಯನ್ನು ಆಯೋಗ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ ಎಂದು ಆರೋಪಿಸಿದರು. ಆದರೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ʻನಗರದಲ್ಲಿನಿಧಾನಗತಿಯ ಮತದಾನದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಪ್ರತಿಪಕ್ಷಗಳು ಸೋಲಿನ ಆತಂಖದಿಂದ ಠಾಕ್ರೆ, ಮೋದಿ ಸರ್ಕಾರವನ್ನು ದೂಷಿಸುತ್ತಿವೆ ಎಂದು ಹೇಳಿದರು.ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಮತಗಟ್ಟೆಗಳ ಹೊರಗಿನ ಸೌಲಭ್ಯಗಳ ಬಗ್ಗೆ ಮತದಾರರಿಂದ ಸಾಕಷ್ಟು ದೂರುಗಳಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಮತ್ತು ಹಾಲಿ ಕಲ್ಯಾಣ್ ಸಂಸದ ಶ್ರೀಕಾಂತ್ ಶಿಂಧೆ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬ ಮತ ಚಲಾಯಿಸಿವೆ. 

ಇಬ್ಬರು ಸಾವು: ಮುಂಬೈ ದಕ್ಷಿಣ ಲೋಕಸಭೆ ಕ್ಷೇತ್ರದ ಮತಗಟ್ಟೆಯಲ್ಲಿ 56 ವರ್ಷದ ಚುನಾವಣಾ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದರು. ಒಡಿಶಾದಲ್ಲಿ ಬರ್ಗಢ್ ಜಿಲ್ಲೆಯ ಸರ್ಸರ ಬಳಿ ಕೆಲವು ಅಪರಿಚಿತ ವ್ಯಕ್ತಿಗಳು ಆಟೋರಿಕ್ಷಾ ಚಾಲಕನನ್ನು ಕೊಂದಿದ್ದಾರೆ. ಇದು ರಾಜಕೀಯ ಕೊಲೆ ಎಂದು ಕುಟುಂಬಸ್ಥರು ದೂರಿದ್ದು, ವೈಯಕ್ತಿಕ ದ್ವೇಷ ಅಪರಾಧಕ್ಕೆ ಕಾರಣ ಎಂದು ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಶೇ. 63 ಮತದಾನ: ಜಾರ್ಖಂಡ್‌ನಲ್ಲಿ ಶೇ 63ರಷ್ಟು ಮತದಾನವಾಗಿದೆ. ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೆನ್ ಜೆಎಂಎಂ ಅಭ್ಯರ್ಥಿಯಾಗಿರುವ ಗಂಡೇ ವಿಧಾನಸಭೆ ಉಪಚುನಾವಣೆಯಲ್ಲಿ ಶೇ.68.26 ರಷ್ಟು ಮತದಾನ ಆಗಿದೆ. ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಗಾಗಿ ಏಳು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕೆ. ರವಿ ಕುಮಾರ್ ಹೇಳಿದ್ದಾರೆ.

ಅಂಚೆ ಮತಪತ್ರಗಳ ಎಣಿಕೆ ಮತ್ತು ಒಟ್ಟು ಮತದಾನದ ಶೇಕಡಾವಾರು ಲೆಕ್ಕದ ನಂತರ ಅಂತಿಮ ಪ್ರಮಾಣ ಲಭ್ಯವಾಗಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. 5 ನೇ ಹಂತದಲ್ಲಿ 4.26 ಕೋಟಿ ಮಹಿಳೆಯರು ಮತ್ತು 5,409 ತೃತೀಯಲಿಂಗಿ ಮತದಾರರು ಸೇರಿದಂತೆ, 8.95 ಕೋಟಿಗೂ ಹೆಚ್ಚು ಜನ ಮತ ಚಲಾವಣೆ ಅರ್ಹತೆ ಹೊಂದಿದ್ದರು. ಮೊದಲ ನಾಲ್ಕು ಹಂತಗಳಲ್ಲಿ ಶೇ. 66.14, ಶೇ.66.71, ಶೇ.65.68 ಮತ್ತು ಶೇ.69.16 ರಷ್ಟು ಮತದಾನ ವಾಗಿದೆ. 543 ರಲ್ಲಿ 428 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಉಳಿದ ಎರಡು ಹಂತದ ಚುನಾವಣೆ ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ.

Tags:    

Similar News