ಸಂಸತ್ ಅಧಿವೇಶನ ಜೂನ್‌ 24ರಿಂದ: ಪುರಂದೇಶ್ವರಿ ಸ್ಪೀಕರ್?

Update: 2024-06-11 11:56 GMT

ಸಂಸತ್ತಿನ ಎಂಟು ದಿನಗಳ ಅಧಿವೇಶನ ಜೂನ್ 24 ರಂದು ಪ್ರಾರಂಭವಾಗಲಿದೆ. ಆಗ ಹೊಸ ಲೋಕಸಭಾ ಸ್ಪೀಕರ್ ಆಯ್ಕೆ ನಡೆಯಲಿದೆ. ಆಂಧ್ರಪ್ರದೇಶ ಬಿಜೆಪಿ ಮುಖ್ಯಸ್ಥೆ ಡಿ. ಪುರಂದೇಶ್ವರಿ ಅವರಿಗೆ ಈ ಹುದ್ದೆ ಒಲಿಯಬಹುದು ಎಂಬ ವದಂತಿಯಿದೆ.

ಸಂಸತ್ತಿನ ಹೊಸ ಸದಸ್ಯರು ಜೂನ್ 24 ಮತ್ತು 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26ರಂದು ಸ್ಪೀಕರ್ ಆಯ್ಕೆಯಾಗುವ ಸಾಧ್ಯತೆ ಇದೆ.

ಸ್ಪೀಕರ್ ಹುದ್ದೆ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದ ಮೊದಲ ಕೆಲಸವೆಂದರೆ ಸ್ಪೀಕರ್ ಆಯ್ಕೆ. ಈ ಹುದ್ದೆಯನ್ನು ಬಿಜೆಪಿ ಇಟ್ಟುಕೊಳ್ಳಲು ಬಯಸಿದೆ. ಆದರೆ, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ (ಯುನೈಟೆಡ್) ರಾಜಕೀಯ ಪಕ್ಷಗಳ ವಿಭಜನೆಯ ಸಂದರ್ಭದಲ್ಲಿ ಸ್ಪೀಕರ್ ವಹಿಸುವ ಪ್ರಮುಖ ಪಾತ್ರದಿಂದಾಗಿ ಹುದ್ದೆ ಮೇಲೆ ಕಣ್ಣಿಟ್ಟಿವೆ ಎಂದು ವರದಿಗಳು ಹೇಳಿವೆ.

ಪುರಂದೇಶ್ವರಿ ಮುಂಚೂಣಿಯಲ್ಲಿ?: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನ ಸಿಗದೆ ಇರುವ ಪುರಂದೇಶ್ವರಿ ಅವರು ಹಲವು ಕಾರಣದಿಂದ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಪುರಂದೇಶ್ವರಿ ಅವರು ಟಿಡಿಪಿ ನಾಯಕ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸೊಸೆ. ಟಿಡಿಪಿ ಬೆಂಬಲ ಮೋದಿ ಸರ್ಕಾರಕ್ಕೆ ಅತ್ಯಗತ್ಯವಾಗಿದೆ.

ಉತ್ತಮ ಸಾಧನೆಗೆ ಪುರಸ್ಕಾರ: ಸ್ಪೀಕರ್ ಆಗಿ ಅವರ ಆಯ್ಕೆಯು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಆಂಧ್ರಪ್ರದೇಶದಲ್ಲಿ ಬಿಜೆಪಿಯ ಉತ್ತಮ ಸಾಧನೆಗೆ ಪ್ರತಿಫಲ ನೀಡಿದಂತೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.ರಾಜ್ಯ ದಲ್ಲಿ ಬಿಜೆಪಿ ಸ್ಪರ್ಧಿಸಿದ್ದ 10 ವಿಧಾನಸಭೆ ಕ್ಷೇತ್ರಗಳಲ್ಲಿ ಎಂಟು ಮತ್ತು ಆರು ಲೋಕಸಭೆ ಸ್ಥಾನಗಳ ಪೈಕಿ ಮೂರರಲ್ಲಿ ಬಿಜೆಪಿ ಗೆದ್ದಿದೆ. ಪುರಂದೇಶ್ವರಿ ಮೂರನೇ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

Tags:    

Similar News