ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹ ಆತ್ಮಹತ್ಯೆಗೆ ಸಮ

Update: 2024-06-18 12:27 GMT

ಹೊಸದಿಲ್ಲಿ, ಜು.18- ತರಬೇತಿ ಪಡೆದ ಶಿಕ್ಷಕರಿಲ್ಲದಿದ್ದರೂ ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿರುವ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಕಾಶ್‌ ಸಕ್ಲಾನಿ, ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ, ಇದು ಆತ್ಮಹತ್ಯೆಗೆ ಸಮನಾದುದು ಎಂದು ಹೇಳಿದ್ದಾರೆ. 

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮುಖ್ಯಸ್ಥರಾದ ಸಕ್ಲಾನಿ, ವಿಷಯವನ್ನು ಇಂಗ್ಲಿಷಿನಲ್ಲಿ ತುಂಬುವುದರಿಂದ ಮಕ್ಕಳಲ್ಲಿ ಜ್ಞಾನ ನಷ್ಟವಾಗುತ್ತದೆ ಮತ್ತು ಅವರನ್ನು ಬೇರುಗಳು ಹಾಗೂ ಸಂಸ್ಕೃತಿಯಿಂದ ದೂರವಿಡುತ್ತದೆ ಎಂದು ಹೇಳಿದರು. 

ʻಪೋಷಕರು ಆಂಗ್ಲಮಾಧ್ಯಮ ಶಾಲೆಗಳ ಗೀಳು ಹೊಂದಿದ್ದಾರೆ. ಶಾಲೆಯಲ್ಲಿ ಶಿಕ್ಷಕರಿಲ್ಲದಿದ್ದರೂ ಅಥವಾ ಅವರು ಸಾಕಷ್ಟು ತರಬೇತಿ ಪಡೆಯದಿದ್ದರೂ, ಅಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಬಯಸುತ್ತಾರೆ. ಇದು ಆತ್ಮಹತ್ಯೆಗಿಂತ ಕಡಿಮೆಯಲ್ಲ.ಇದರಿಂದಾಗಿಯೇ ಹೊಸ (ರಾಷ್ಟ್ರೀಯ) ಶಿಕ್ಷಣ ನೀತಿಯು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಹೇಳಿದೆ,ʼ ಎಂದರು. 

ʻಮಾತೃಭಾಷೆಯಲ್ಲೇ ಬೋಧನೆ ಏಕೆ ಮಾಡಬೇಕು? ಏಕೆಂದರೆ, ಅಲ್ಲಿಯವರೆಗೆ ನಾವು ನಮ್ಮ ತಾಯಿ, ನಮ್ಮ ಬೇರುಗಳು ಮತ್ತು ಏನನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ. ಬಹುಭಾಷಾ ವಿಧಾನ ಎಂದರೆ, ಯಾವುದೋ ಭಾಷೆಯಲ್ಲಿ ಬೋಧನೆ ಎಂದಲ್ಲ; ಬದಲಾಗಿ, ಬಹು ಭಾಷೆಗಳ ಕಲಿಕೆ,ʼ ಎಂದು ಸಕ್ಲಾನಿ ಹೇಳಿದರು. 

ಸ್ಥಳೀಯ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಆಧರಿಸಿದ ಚಿತ್ರ, ಕಥೆ ಮತ್ತು ಹಾಡುಗಳ ಮೂಲಕ ವಿದ್ಯಾರ್ಥಿಗಳ ಮಾತನಾಡುವ ಕೌಶಲ, ಕಲಿಕಾ ಫಲಿತಾಂಶದ ಸುಧಾರಣೆ ಹಾಗೂ ಅರಿವಿನ ಬೆಳವಣಿಗೆಗೆ ಕೇಂದ್ರ ಶಿಕ್ಷಣ ಸಚಿವರು ಆರಂಭಿಸಿದ ಒಡಿಶಾದ ಎರಡು ಬುಡಕಟ್ಟು ಭಾಷೆಗಳಲ್ಲಿ ಪುಸ್ತಕಗಳ ಅಭಿವೃದ್ಧಿ ಉಪಕ್ರಮವನ್ನು ಸಕ್ಲಾನಿ ಅವರು ಉಲ್ಲೇಖಿಸಿದರು. 

ʻನಾವು 121 ಭಾಷೆಗಳಲ್ಲಿ ಪುಸ್ತಕಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅವು ಈ ವರ್ಷ ಸಿದ್ಧವಾಗಲಿದೆ. ಶಾಲೆಗೆ ಹೋಗುವ ಮಕ್ಕಳನ್ನು ಅವರ ಬೇರುಗಳಿಗೆ ಸಂಪರ್ಕಿಸಲು ಸಹಾಯ ಮಾಡುತ್ತವೆ,ʼ ಎಂದು ಹೇಳಿದರು. 

ʻನಾವು ಇಂಗ್ಲೀಷಿನಲ್ಲಿ ವಿಷಯ ತುರುಕಲು ಪ್ರಾರಂಭಿಸುತ್ತೇವೆ. ಇದರಿಂದ ಜ್ಞಾನ ನಷ್ಟವಾಗಲಿದೆ. ಭಾಷೆ ಸಕ್ರಿಯಗೊಳಿಸುವ ಅಂಶವಾಗ ಬೇಕೇ ಹೊರತು ನಿಷ್ಕ್ರಿಯಗೊಳಿಸಬಾರದು. ಬಹುಭಾಷಾ ಶಿಕ್ಷಣದ ಮೂಲಕ ನಾವು ಜ್ಞಾನವನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು. 

2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), ಕನಿಷ್ಠ 5 ನೇ ತರಗತಿಯವರೆಗೆ ಬೋಧನಾ ಮಾಧ್ಯಮ ಮನೆ ಭಾಷೆ, ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಇರಬೇಕು ಎಂದು ಶಿಫಾರಸು ಮಾಡಿದೆ. ಈ ನೀತಿ ಶಿಕ್ಷಣ ಕ್ಷೇತ್ರದ ಪರಿಣತರು ಹಾಗೂ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಯಿತು. ಕಳೆದ ವರ್ಷ ಅಧಿಸೂಚನೆ ಹೊರಡಿಸಿದ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(ಎನ್‌ ಸಿಎಫ್‌) ಪ್ರಕಾರ, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಎರಡು ಭಾರತೀಯ ಭಾಷೆಗಳು ಸೇರಿದಂತೆ ಮೂರು ಭಾಷೆಗಳನ್ನು ಹಾಗೂ 11, 12 ನೇ ತರಗತಿ ವಿದ್ಯಾರ್ಥಿಗಳು ಒಂದು ಭಾರತೀಯ ಮತ್ತು ಇನ್ನೊಂದು ಬೇರೆ ಭಾಷೆ ಕಲಿಯಬೇಕಾಗುತ್ತದೆ. 

Tags:    

Similar News