ಅರಮನೆ ಮೈದಾನ; ರಾಜಮನೆತನಕ್ಕೆ 3400 ಕೋಟಿ ರೂ. ಟಿಡಿಆರ್ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ನೇತೃತ್ವದ ಪೀಠವು ಈ ಹಿಂದೆ (ಫೆಬ್ರವರಿ 27) ರಾಜ್ಯ ಸರ್ಕಾರಕ್ಕೆ ಒಂದು ವಾರದೊಳಗೆ 3400 ಕೋಟಿ ರೂ ಮೌಲ್ಯದ ಟಿಡಿಆರ್ ಪ್ರಮಾಣಪತ್ರಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಠೇವಣಿ ಇಡುವಂತೆ ಸೂಚಿಸಿತ್ತು.;
ಸುಪ್ರೀಂ ಕೋರ್ಟ್
ಬೆಂಗಳೂರಿನ ಅರಮನೆ ಮೈದಾನದ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ 15.7 ಎಕರೆ ಅರಮನೆ ಮೈದಾನದ ಭೂಮಿಗೆ 3400 ಕೋಟಿ ರೂ ಮೌಲ್ಯದ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರಗಳನ್ನು ಕೂಡಲೇ ಮೈಸೂರು ರಾಜವಂಶಸ್ಥರಿಗೆ ಹಸ್ತಾಂತರಿಸುವಂತೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ನೇತೃತ್ವದ ಪೀಠವು ಈ ಹಿಂದೆ (ಫೆಬ್ರವರಿ 27) ರಾಜ್ಯ ಸರ್ಕಾರಕ್ಕೆ ಒಂದು ವಾರದೊಳಗೆ 3400 ಕೋಟಿ ರೂ ಮೌಲ್ಯದ ಟಿಡಿಆರ್ ಪ್ರಮಾಣಪತ್ರಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಠೇವಣಿ ಇಡುವಂತೆ ಸೂಚಿಸಿತ್ತು. ರಾಜ್ಯ ಸರ್ಕಾರವು ಈ ಆದೇಶವನ್ನು ಪಾಲಿಸಿತ್ತು. ಆದರೆ, ಈ ಟಿಡಿಆರ್‌ಗಳನ್ನು ಮೈಸೂರು ರಾಜವಂಶಸ್ಥರಿಗೆ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಾರಸುದಾರರಿಗೆ) ಹಸ್ತಾಂತರ ಮಾಡಬಾರದು ಎಂದು ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ರಾಜ್ಯ ಸರ್ಕಾರವು 1996ರ ಬೆಂಗಳೂರು ಅರಮನೆ (ವರ್ಗಾವಣೆ) ಅಧಿನಿಯಮದ ಆಧಾರದ ಮೇಲೆ ಈ ಭೂಮಿಯನ್ನು ತನ್ನ ಸ್ವಾಧೀನದಲ್ಲಿದೆ ಎಂದು ವಾದಿಸಿತ್ತು. ಜನವರಿ 23ರಂದು ರಾಜ್ಯ ಸರ್ಕಾರವು ರಸ್ತೆ ಅಗಲೀಕರಣ ಯೋಜನೆಯನ್ನೇ ಕೈಬಿಟ್ಟು ಸುಗ್ರೀವಾಜ್ಞೆ ಹೊರಡಿಸಿ, 3400 ಕೋಟಿ ಟಿಡಿಆರ್ ಪರಿಹಾರ ತಪ್ಪಿಸಲು ಪ್ರಯತ್ನಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಸುಗ್ರೀವಾಜ್ಞೆ ಒಪ್ಪದೆ, ಟಿಡಿಆರ್ ಪಾವತಿಗೆ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಏನು?
ಗುರುವಾರದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಮಧ್ಯಂತರ ಅರ್ಜಿ ತಿರಸ್ಕರಿಸಿ, 3400 ಕೋಟಿ ಮೌಲ್ಯದ ಟಿಡಿಆರ್ ಅನ್ನು ಮೈಸೂರು ರಾಜವಂಶಸ್ಥರಿಗೆ ತಕ್ಷಣವೇ ಹಸ್ತಾಂತರಿಸುವಂತೆ ಆದೇಶಿಸಿತು. ಕೋರ್ಟ್ ರಾಜ್ಯ ಸರ್ಕಾರದ ನಿಲುವು "ಏಕರೂಪವಾಗಿಲ್ಲ" ಮತ್ತು "ಸರ್ಕಾರ ಆಗಾಗ್ಗೆ ನಿಲುವು ಬದಲಾಯಿಸುತ್ತಿದೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಾಲಯವು 2001ರ ಆದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ, 2 ಲಕ್ಷ ಚದರ ಮೀಟರ್‌ನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿರುವುದಕ್ಕೆ ಸಂಬಂಧಿಸಿದಂತೆ ಅರಮನೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಸಹ ಪರಿಗಣಿಸಿತು. ಆದರೆ, ಈ ತೀರ್ಪಿನಲ್ಲಿ ಟಿಡಿಆರ್ ಹಸ್ತಾಂತರವೇ ಮುಖ್ಯವಾಗಿತ್ತು. ಬಳ್ಳಾರಿ ರಸ್ತೆಗೆ ಪ್ರತಿ ಚದರ ಮೀಟರ್‌ಗೆ 2,83,500 ರೂ. ಮತ್ತು ಜಯಮಹಲ್ ರಸ್ತೆಗೆ 2,04,000 ರೂಪಾಯಿಯಂತೆ ಒಟ್ಟು 3400 ಕೋಟಿ ರೂಪಾಯಿ ಮೌಲ್ಯದ ಟಿಡಿಆರ್‌ಗೆ ಆದೇಶ ನೀಡಲಾಗಿದೆ.
ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್, "ಸರ್ಕಾರ ಟಿಡಿಆರ್ ನೀಡದಿದ್ದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ" ಎಂದು ಜನವರಿ 2025ರಲ್ಲಿ ಹೇಳಿದ್ದರು. ರಾಣಿ ಪ್ರಮೋದಾದೇವಿ ಒಡೆಯರ್ ಕೂಡ ಸರ್ಕಾರದ ಸುಗ್ರೀವಾಜ್ಞೆಯನ್ನು "ಅನ್ಯಾಯ" ಎಂದು ಆರೋಪಿಸಿದ್ದರು. ಸುಪ್ರೀಂ ಕೋರ್ಟ್‌ನ ಈ ತೀರ್ಪು ರಾಜವಂಶಸ್ಥರಿಗೆ ಪರಿಹಾರವನ್ನು ಖಾತರಿಪಡಿಸಿದೆ.