ಭಾರತದಲ್ಲಿನ ಭಯೋತ್ಪಾದನೆ ಸಮಸ್ಯೆಗೆ ಪಾಕಿಸ್ತಾನವೇ ಕಾರಣ; ಸೇನಾ ಮುಖ್ಯಸ್ಥ
ಉತ್ತರ ಕಾಶ್ಮೀರ ಮತ್ತು ದೋಡಾ-ಕಿಶ್ತ್ವಾರ್ ಬೆಲ್ಟ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ;
ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಲ್ಲಿ ಶೇಕಡಾ 80 ರಷ್ಟು ಪಾಕಿಸ್ತಾನಿಗಳೇ ಇದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಜನವರಿ 15 ರಂದು ಸೇನಾ ದಿನಾಚರಣೆಗೆ ಮುಂಚಿತವಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜನರಲ್ ದ್ವಿವೇದಿ, ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದೊಂದಿಗಿನ ಭಾರತದ ಪರಿಸ್ಥಿತಿಯನ್ನು ಪ್ರಸ್ತಾಪಿಸಿದರು. ಅದು "ಸೂಕ್ಷ್ಮ. ಆದರೆ ಸ್ಥಿರವಾಗಿದೆ" ಎಂದು ಅವರು ಹೇಳಿದರು.
ಇತ್ತೀಚಿನ ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಲು ಪಾಕಿಸ್ತಾನವೇ ಕಾರಣ ಎಂದು ಸೇನಾ ಮುಖ್ಯಸ್ಥರು ದೂರಿದರು. ಇದೇ ವೇಳೆ ಅವರು ಭಯೋತ್ಪಾದಕರು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳುತ್ತಲೇ ಇದ್ದಾರೆ ಎಂದು ಆರೋಪಿಸಿದರು.
ಉತ್ತರ ಕಾಶ್ಮೀರ ಮತ್ತು ದೋಡಾ-ಕಿಶ್ತ್ವಾರ್ ಬೆಲ್ಟ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ ಎಂದು ಅವರು ಹೇಳಿದರು. ಆದರೂ ಹಿಂಸಾಚಾರವನ್ನು ನಿಯಂತ್ರಣದಲ್ಲಿಟ್ಟಿದ್ದೇವೆ ಎಂದು ಹೇಳಿದರು.
80% ಭಯೋತ್ಪಾದಕರು ಪಾಕಿಸ್ತಾನ ಮೂಲದವರು
ಕಳೆದ ವರ್ಷ ಹತ್ಯೆಗೀಡಾದ ಉಗ್ರರಲ್ಲಿ ಶೇ.60ರಷ್ಟು ಮಂದಿ ಪಾಕಿಸ್ತಾನ ಮೂಲದವರಾಗಿದ್ದಾರೆ. ಸುಮಾರು 80 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನವರು ಪಾಕಿಸ್ತಾನ ಮೂಲದವರು ಎಂದು ನಾವು ಭಾವಿಸುತ್ತೇವೆ" ಎಂದು ಸೇನಾ ಮುಖ್ಯಸ್ಥರು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದರು.
ಚೀನಾದ ಬಗ್ಗೆ ಮಾತನಾಡಿದ ಅವರು, ಪೂರ್ವ ಲಡಾಖ್‌ನ ಎಲ್ಎಸಿಯ ಉದ್ದಕ್ಕೂ ಚೀನಾದ ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ. ಹೀಗಾಗಿ "ಪರಿಸ್ಥಿತಿ ಸೂಕ್ಷ್ಮವಾಗಿದ್ದು ಸ್ಥಿರವಾಗಿದೆ" ಎಂದು ಹೇಳಿದರು. ಅಕ್ಟೋಬರ್ 2024ರಲ್ಲಿ, ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಲ್ಲಿನ ಪರಿಸ್ಥಿತಿ ತಿಳಿಗೊಳಿಸಲಾಗಿದೆ ಎಂದು ಜನರಲ್ ದ್ವಿವೇದಿ ಮಾಹಿತಿ ನೀಡಿದರು.