OYO Rooms: ಮದುವೆಯಾಗದ ಜೋಡಿಗೆ ಇನ್ನು ಮುಂದೆ ಓಯೊದಲ್ಲಿ ರೂಮ್‌ ಸಿಗುವುದಿಲ್ಲ

OYO Rooms: ಆನ್‌ಲೈನ್‌ನಲ್ಲಿ ರೂಮ್‌ ಬುಕ್‌ ಮಾಡಿದರೂ ಚೆಕ್‌ ಇನ್‌ ಮಾಡುವ ಸಮಯದಲ್ಲಿ ಮದುವೆಯಾಗಿದ್ದೇವೆ ಎಂಬ ದಾಖಲೆಯನ್ನು ನೀಡಬೇಕಾಗುತ್ತದೆ ಎಂದು ಓಯೊ ಕಂಪನಿ ತನ್ನ ಹೊಸ ನಿಯಮದಲ್ಲಿ ಹೇಳಿದೆ.;

Update: 2025-01-05 06:40 GMT
ಓಯೊ ರೂಮ್ಸ್‌ (ಸಾಂಧರ್ಭಿಕ ಚಿತ್ರ)

ಓಯೊ ರೂಮ್ಸ್‌ (OYO Rooms) ಹೋಟೆಲ್‌ ಬುಕಿಂಗ್‌ ಫ್ಲಾಟ್‌ಫಾರ್ಮ್‌ ಅಕ್ರಮ ಸಂಬಂಧಗಳ ತಾಣವಾಗಿದೆ ಎಂಬ ಆರೋಪ ಮತ್ತು ಟ್ರೋಲ್‌ಗಳ ನಡುವೆ ಬುಕಿಂಗ್‌ ನಿಯಮ ಬದಲಾವಣೆಗೆ ಟ್ರಾವೆಲ್ ಬುಕಿಂಗ್ ದೈತ್ಯ ಓಯೋ ನಿರ್ಧರಿಸಿದೆ. ತನ್ನ ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿ ಜಾರಿಗೆ ತಂದಿದೆ. ಇನ್ನು ಮುಂದೆ ವಿವಾಹವಾಗದ ಜೋಡಿಗೆ ಹೋಟೆಲ್‌ ರೂಮ್‌ ನೀಡದೇ ಇರಲು ನಿರ್ಧರಿಸಿದೆ.

ಪರಿಷ್ಕೃತ ನೀತಿಯ ಅಡಿಯಲ್ಲಿ, ದಂಪತಿ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದರೂ ಚೆಕ್-ಇನ್ ಸಮಯದಲ್ಲಿ ಸಂಬಂಧಿಸಿದ ದಾಖಲೆಗಳನ್ನುನೀಡಲೇಬೇಕಾಗುತ್ತದೆ. ಸ್ಥಳೀಯ ಸಾಮಾಜಿಕ ವಿಚಾರಗಳಿಗೆ ಪೂರಕವಾಗಿ ಬುಕಿಂಗ್‌ ಕ್ಯಾನ್ಸಲ್‌ ಮಾಡುವುದಕ್ಕೆ ಓಯೊ ರೂಮ್ಸ್‌ ನಿರ್ಧಾರ ಕೈಗೊಂಡಿದೆ.

ದಂಪತಿಗಳ ಬುಕಿಂಗ್ ಅನ್ನು ಕ್ಯಾನ್ಸಲ್‌ ಮಾಡಲು ಓಯೋ ತನ್ನ ಪಾಲುದಾರ ಹೋಟೆಲ್‌ಗಳಿಗೆ ಅಧಿಕಾರವನ್ನೂ ನೀಡಿದೆ.

ಹೊಸ ನಿಯಮವನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್‌ಗಳಿಗೆ ನಿರ್ದೇಶನ ನೀಡಿದೆ. ಜನರ ಪ್ರತಿಕ್ರಿಯೆ ಆಧರಿಸಿ , ಕಂಪನಿಯು ಇದನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಲಿದೆ.

"ಓಯೋ ವಿಶೇಷವಾಗಿ ಮೀರತ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಹೆಚ್ಚುವರಿಯಾಗಿ, ಇತರ ಕೆಲವು ನಗರಗಳ ನಿವಾಸಿಗಳು ಅವಿವಾಹಿತ ಜೋಟಿಗೆ ಓಯೋ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಲು ಅವಕಾಶ ನೀಡದಂತೆ ಅರ್ಜಿ ಸಲ್ಲಿಸಿದ್ದರು. ಅದರ ಪ್ರಕಾರ ಹೊಸ ನಿಮಯ ಜಾರಿ ತರಲಾಗಿದೆ" ಎಂದು ಮೂಲಗಳು ತಿಳಿಸಿವೆ.

ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ವ್ಯವಸ್ಥೆಯನ್ನು ಕಾಪಾಡಲು ಓಯೋ ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ತಿಳಿಸಿದ್ದಾರೆ.

ನಾವು ವೈಯಕ್ತಿಕ ಸ್ವಾತಂತ್ರ್ಯ ಗೌರವಿಸುವ ಜತೆಗೆ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮತ್ತು ನಾಗರಿಕ ಸಮಾಜ ಸಮುದಾಯದ ಪ್ರತಿಕ್ರಿಯೆಗಳನ್ನು ಆಲಿಸುವ ನಮ್ಮ ಜವಾಬ್ದಾರಿಯನ್ನು ಗುರುತಿಸುತ್ತೇವೆ. ಈ ನೀತಿ ಮತ್ತು ಅದರ ಪರಿಣಾಮವನ್ನು ನಿಯಮಿತವಾಗಿ ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ. ಹೊಸ ನಿಯಮ ಹಳೆಯ ಗ್ರಹಿಕೆಯನ್ನು ಪರಿವರ್ತಿಸುವ ಮತ್ತು ಕುಟುಂಬಗಳು, ವಿದ್ಯಾರ್ಥಿಗಳು, ವ್ಯವಹಾರ, ಧಾರ್ಮಿಕ ಮತ್ತು ಏಕವ್ಯಕ್ತಿ ಪ್ರಯಾಣಿಕರಿಗೆ ಸುರಕ್ಷಿತ ಅನುಭವ ಒದಗಿಸುವ ಓಯೋದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.

ಹೆಚ್ಚುವರಿಯಾಗಿ, ಈ ಯೋಜನೆಯು ದೀರ್ಘಕಾಲದ ವಾಸ್ತವ್ಯ ಮತ್ತು ಪುನರಾವರ್ತಿತ ಬುಕಿಂಗ್ ಅನ್ನು ಉತ್ತೇಜಿಸುವ ಗುರಿ ಹೊಂದಿದೆ. ಗ್ರಾಹಕರ ನಂಬಿಕೆ ಮತ್ತು ನಿಷ್ಠೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ಕುರಿತು ಜಂಟಿ ಸೆಮಿನಾರ್‌ಗಳು, ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್‌ಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದು ಮುಂತಾದ ಪ್ಯಾನ್-ಇಂಡಿಯಾ ಕ್ರಮಗಳನ್ನು ಓಯೋ ಪ್ರಾರಂಭಿಸಿದೆ. 

Tags:    

Similar News