ಅಮೆರಿಕ ನೀಡಿದ H-1B ವೀಸಾಗಳ ಪೈಕಿ 72%ಕ್ಕೂ ಅಧಿಕ ಭಾರತೀಯರ ಪಾಲು: ಸರ್ಕಾರ

H-1B Visas : ಯುದ್ಧ ಆರಂಭಕ್ಕೂ ಮುನ್ನ 21,928 ಭಾರತೀಯ ವಿದ್ಯಾರ್ಥಿಗಳು ಆ ದೇಶದಲ್ಲಿ ಇದ್ದರು. ಆದರೆ, ನವೆಂಬರ್ 1, 2024ರ ವೇಳೆಗೆ ಕೇವಲ 1,802 ವಿದ್ಯಾರ್ಥಿಗಳು ಮಾತ್ರ ಉಕ್ರೇನಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿದ್ದಾರೆ.;

Update: 2025-02-07 03:19 GMT
ಸಾಂದರ್ಭಿಕ ಚಿತ್ರ.

ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023ರವರೆಗೆ ಅಮೆರಿಕ ವಿತರಿಸಿರುವ ಒಟ್ಟು H-1B ವೀಸಾಗಳ (H-1B Visas ) ಪೈಕಿ ಶೇಕಡಾ 72. ವೀಸಾಗಳನ್ನು ಭಾರತೀಯರು ಪಡೆದಿದ್ದಾರೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಮಾಹಿತಿಯನ್ನು ಉಲ್ಲೇಖಿಸಿ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಸಂಸತ್ತಿನ ಮೇಲ್ಮನೆಗೆ ನೀಡಿದ ಇನ್ನೊಂದು ಮಾಹಿತಿ ಪ್ರಕಾ, ಉಕ್ರೇನ್‌ನಲ್ಲಿ ಯುದ್ಧ ಆರಂಭಕ್ಕೂ ಮುನ್ನ 21,928 ಭಾರತೀಯ ವಿದ್ಯಾರ್ಥಿಗಳು ಆ ದೇಶದಲ್ಲಿ ಇದ್ದರು. ಆದರೆ, ನವೆಂಬರ್ 1, 2024ರ ವೇಳೆಗೆ ಕೇವಲ 1,802 ವಿದ್ಯಾರ್ಥಿಗಳು ಮಾತ್ರ ಉಕ್ರೇನಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿದ್ದಾರೆ ಎಂದು ತಿಳಿಸಲಾಗಿದೆ.

ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿದೇಶಾಂಗ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, H-1B ವೀಸಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಭಾರತ ಸರ್ಕಾರ ಅಮೆರಿಕ ಆಡಳಿತ ಹಾಗೂ ಸಂಬಂಧಿತ ದೇಶಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಉದ್ಯೋಗ ನಷ್ಟದ ಮಾಹಿತಿ ಇಲ್ಲ

 ಉದ್ಯೋಗ ಕಳೆದುಕೊಳ್ಳುವುದು ಸೇರಿದಂತೆ ಭಾರತಕ್ಕೆ ಹಿಂದಿರುಗಿದ ವಲಸಿಗರ ಸಂಖ್ಯೆ ಹಾಗೂ ಕಳೆದ ಐದು ವರ್ಷಗಳಲ್ಲಿ  ಮರಳಿದವರ ವಿವರ ಹಾಗೂ ಅವರಿಗೆ ನೆರವು ನೀಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಕೋರಲಾಯಿತು.

ವಿದೇಶಾಂಗ ಸಚಿವಾಲಯದ ಪ್ರಕಾರ, ಆರ್ಥಿಕ ಕುಸಿತ ಅಥವಾ ಉದ್ಯೋಗ ನಷ್ಟದಿಂದ ಭಾರತಕ್ಕೆ ಮರಳಿದ ಭಾರತೀಯರ ನಿಖರ ಮಾಹಿತಿ ಲಭ್ಯವಿಲ್ಲ. ವಾಪಸ್‌ ಬಂದ ವಲಸಿಗರ ನಿರ್ವಹಣೆ ರಾಜ್ಯ ಸರ್ಕಾರಗಳ ಮೇಲಿದೆ. ಅನೇಕ ರಾಜ್ಯ ಸರ್ಕಾರಗಳು ವಿದೇಶದಿಂದ ಮರಳಿದ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಲು ವಿಭಿನ್ನ ಕಾರ್ಯಕ್ರಮ ರೂಪಿಸಿವೆ ಎಂದು ಸಚಿವರು ಹೇಳಿದ್ದಾರೆ.

ಇಸ್ರೇಲ್‌ನಲ್ಲಿಯೂ 900 ವಿದ್ಯಾರ್ಥಿಗಳು

ಇಸ್ರೇಲ್‌ನಲ್ಲಿ ಸುಮಾರು 900 ಭಾರತೀಯ ವಿದ್ಯಾರ್ಥಿಗಳು ಇದ್ದಾರೆ, ಇವರಲ್ಲಿ ಹೆಚ್ಚಿನವರು ಪಿಎಚ್‌ಡಿ ಅಥವಾ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವವರು. 2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ನಂತರ, ಭಾರತ ಸರ್ಕಾರ 'ಆಪರೇಷನ್ ಅಜಯ್' ಆರಂಭಿಸಿತು, ಇದರಿಂದ 1,309 ಭಾರತೀಯರು ಸುರಕ್ಷಿತವಾಗಿ ಮರಳಿದರು, ಇದರಲ್ಲಿ 768 ವಿದ್ಯಾರ್ಥಿಗಳಿದ್ದರು. ಈ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಇಸ್ರೇಲ್‌ಗೆ ಮರಳಿ ತಮ್ಮ ಅಧ್ಯಯನ ಪುನರಾರಂಭಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಪ್ಯಾಲೆಸ್ತೀಲ್‌ನಲ್ಲಿ ಯಾವುದೇ ಭಾರತೀಯ ವಿದ್ಯಾರ್ಥಿಗಳು ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಯುದ್ಧ ವಿರಾಮ ಒಪ್ಪಂದದ ಕುರಿತು ಸರ್ಕಾರದ ಪ್ರತಿಕ್ರಿಯೆ ಬಗ್ಗೆ ಸಹ ಕೇಳಲಾಯಿತು.  

Tags:    

Similar News