ಸರ್ಕಾರಿ ನೌಕರಿ ಕನಸು ನನಸಾಗುವ ಸಮಯ: ರೈಲ್ವೆಯಲ್ಲಿ ಇವೆ 30,000ಕ್ಕೂ ಅಧಿಕ ಹುದ್ದೆಗಳು
ಟಿಕೆಟ್ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್ ಹಾಗೂ ಗೂಡ್ಸ್ ರೈಲಿನ ವ್ಯವಸ್ಥಾಪಕ ಹುದ್ದೆಗಳಿಗೆ ದೇಶದಲ್ಲಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪೂರೈಸಿರಬೇಕು.;
ಎಐ ಆಧಾರಿತ ಚಿತ್ರ
ರೈಲ್ವೆ ಇಲಾಖೆಯು ದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಭರ್ಜರಿ ಅವಕಾಶವೊಂದನ್ನು ಒದಗಿಸಿದೆ. ಪದವಿ ಮತ್ತು ದ್ವಿತೀಯ ಪಿಯುಸಿ ಪಾಸಾದವರಿಗಾಗಿ 30,000ಕ್ಕೂ ಅಧಿಕ ತಾಂತ್ರಿಕೇತರ ಹುದ್ದೆಗಳಿಗೆ (Non-Technical Popular Categories) ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ರೈಲ್ವೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಸುವರ್ಣಾವಕಾಶವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 29 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿದೆ.
ಯಾವೆಲ್ಲಾ ಹುದ್ದೆಗಳು ಲಭ್ಯ?
ರೈಲ್ವೆ ಇಲಾಖೆಯು ವಿವಿಧ ವಿಭಾಗಗಳಲ್ಲಿ ಒಟ್ಟು 30,307 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈ ನೇಮಕಾತಿಯಲ್ಲಿ 6,235 ಟಿಕೆಟ್ ಮೇಲ್ವಿಚಾರಕರು, 5,623 ಸ್ಟೇಷನ್ ಮಾಸ್ಟರ್‌ಗಳು, 3,562 ಗೂಡ್ಸ್ ರೈಲು ವ್ಯವಸ್ಥಾಪಕರು, 7,520 ಕಿರಿಯ ಲೆಕ್ಕ ಸಹಾಯಕ ಹಾಗೂ ಟೈಪಿಸ್ಟ್‌ಗಳು ಮತ್ತು 7,367 ಹಿರಿಯ ಲಿಪಿಕ ಹಾಗೂ ಟೈಪಿಸ್ಟ್ ಹುದ್ದೆಗಳು ಸೇರಿವೆ.
ಯಾರು ಅರ್ಜಿ ಸಲ್ಲಿಸಬಹುದು?
ಪದವಿ ವಿದ್ಯಾರ್ಹತೆ: ಟಿಕೆಟ್ ಮೇಲ್ವಿಚಾರಕ, ಸ್ಟೇಷನ್ ಮಾಸ್ಟರ್ ಹಾಗೂ ಗೂಡ್ಸ್ ರೈಲು ವ್ಯವಸ್ಥಾಪಕ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.
ದ್ವಿತೀಯ ಪಿಯುಸಿ ವಿದ್ಯಾರ್ಹತೆ: ಕಿರಿಯ ಲೆಕ್ಕ ಸಹಾಯಕ, ಹಿರಿಯ ಲಿಪಿಕ ಹಾಗೂ ಟೈಪಿಸ್ಟ್ ಹುದ್ದೆಗಳಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ ಮತ್ತು ವಿಶೇಷ ಸಡಿಲಿಕೆ
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವರ್ಗವಾರು ವಯೋಮಿತಿ ಸಡಿಲಿಕೆ ಕೂಡ ಲಭ್ಯವಿದೆ. ಹಿಂದುಳಿದ ವರ್ಗಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ. ವಿಶೇಷವಾಗಿ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಒಂದು ಬಾರಿಯ ಕ್ರಮವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಕರ್ಷಕ ವೇತನ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಉತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಪದವಿ ಮಟ್ಟದ ಹುದ್ದೆಗಳಾದ ಟಿಕೆಟ್ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಮಾಸಿಕ 35,400 ರೂಪಾಯಿ ಹಾಗೂ ದ್ವಿತೀಯ ಪಿಯುಸಿ ಮಟ್ಟದ ಕಿರಿಯ ಮತ್ತು ಹಿರಿಯ ಲಿಪಿಕ ಹುದ್ದೆಗಳಿಗೆ ಮಾಸಿಕ 29,200 ರೂಪಾಯಿ ಸಂಬಳ ದೊರೆಯಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಹೊಸ ಬಳಕೆದಾರರು ಮೊದಲು ನೋಂದಣಿ ಮಾಡಿಕೊಂಡು, ನಂತರ ಅರ್ಜಿ ಸಲ್ಲಿಸಬೇಕು. ಈಗಾಗಲೇ ನೋಂದಾಯಿಸಿಕೊಂಡವರು ನೇರವಾಗಿ ಲಾಗಿನ್ ಆಗಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.