ಪುರಿ ಕಡಲತೀರದ ಬಳಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್; ಮೂವರ ಬಂಧನ
ಘಟನೆ ಶನಿವಾರ ನಡೆದಿದ್ದರೂ, ಆರಂಭಿಕ ಆಘಾತದಿಂದ ಚೇತರಿಸಿಕೊಂಡ ನಂತರ ಸಂತ್ರಸ್ತೆ ಸೋಮವಾರ ಸಂಜೆ ಎಫ್‌ಐಆರ್ ದಾಖಲಿಸಿದ್ದಾರೆ.;
ಒಡಿಶಾದ ಪುರಿ ಜಿಲ್ಲೆಯ ಕಡಲತೀರದ ಬಳಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಕಳೆದ ವಾರಾಂತ್ಯದಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ (ಸೆಪ್ಟೆಂಬರ್ 15) ತಿಳಿಸಿದ್ದಾರೆ.
ಬ್ರಹ್ಮಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಹರಚಂಡಿ ದೇವಸ್ಥಾನದ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಕಾಲ ಕಳೆಯಲು ಅಲ್ಲಿಗೆ ಹೋಗಿದ್ದಾಗ ಈ ಕೃತ್ಯ ನಡೆದಿದೆ.
ಸ್ಥಳೀಯ ಯುವಕರ ಗುಂಪೊಂದು ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು ಹಣಕ್ಕೆ ಬೇಡಿಕೆ ಇಟ್ಟಿದೆ ಎಂದು ಆರೋಪಿಸಲಾಗಿದೆ. "ಹಣ ನೀಡಲು ನಿರಾಕರಿಸಿದಾಗ, ಗುಂಪಿನಲ್ಲಿದ್ದ ಇಬ್ಬರು ಯುವಕರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ" ಎಂದು ಪುರಿ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ ಸಿಂಗ್ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಕೃತ್ಯ ಎಸಗುವ ಮುನ್ನ ಆರೋಪಿಗಳು ಸಂತ್ರಸ್ತೆಯ ಸ್ನೇಹಿತನ ಕೈಗಳನ್ನು ಕಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಡವಾಗಿ ದೂರು ದಾಖಲು
ಘಟನೆ ಶನಿವಾರ ನಡೆದಿದ್ದರೂ, ಆರಂಭಿಕ ಆಘಾತದಿಂದ ಚೇತರಿಸಿಕೊಂಡ ನಂತರ ಸಂತ್ರಸ್ತೆ ಸೋಮವಾರ ಸಂಜೆ ಎಫ್‌ಐಆರ್ ದಾಖಲಿಸಿದ್ದಾರೆ. ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಈ ಘಟನೆಯು ಜೂನ್ 15 ರಂದು ಗಂಜಾಂ ಜಿಲ್ಲೆಯ ಗೋಪಾಲ್‌ಪುರ ಕಡಲತೀರದಲ್ಲಿ ನಡೆದಿದ್ದ ಇದೇ ರೀತಿಯ ಮತ್ತೊಂದು ಅಪರಾಧವನ್ನು ನೆನಪಿಸುತ್ತದೆ. ಆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹತ್ತು ಜನರನ್ನು ಬಂಧಿಸಲಾಗಿತ್ತು.
ಪುರಿ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.