ನೊಸ್ತುಶ್ ಕೆಂಜಿಗೆ: ಕರ್ನಾಟಕದಿಂದ ಅಮೆರಿಕ ಕ್ರಿಕೆಟ್ ತಂಡಕ್ಕೆ ಯಶಸ್ವಿ ಪ್ರಯಾಣ
ಕೆಂಜಿಗೆ ಅವರು ಉಸ್ಮಾನ್ ಖಾನ್, ಅಜಂ ಖಾನ್ ಮತ್ತು ಶಾದಾಬ್ ಖಾನ್ ಅವರ ವಿಕೆಟ್ ಉರುಳಿಸಿ, ಪಾಕಿಸ್ತಾನ ತಂಡದ ಬೆನ್ನೆಲುಬು ಮುರಿದರು.;
ಬೆಂಗಳೂರು, ಜೂ.7 - 2013ರಲ್ಲಿ ಇಲ್ಲಿನ ಸಿಬಿಡಿ ಹತ್ತಿರವಿರುವ ಪಿಜಿ ಕೊಠಡಿಯಲ್ಲಿದ್ದ ನೊಸ್ತುಶ್ ಕೆಂಜಿಗೆ(22)ಗೆ ವೃತ್ತಿಪರ ಕ್ರಿಕೆಟಿಗನಾಗುವ ಕನಸು ನನಸಾಗುವ ಯಾವುದೇ ಭರವಸೆ ಇರಲಿಲ್ಲ.
ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ನಲ್ಲಿ ಕಠಿಣ ತರಬೇತಿ ಹೊರತಾಗಿಯೂ, ರಾಜ್ಯ ಕ್ರಿಕೆಟ್ಟಿಗೆ ಪ್ರವೇಶ ಪಡೆಯುವ ಸಾಧ್ಯತೆ ತೀರ ಕಡಿಮೆಯಿತ್ತು. ಆದರೆ, ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಯುಎಸ್‌ಎ ಅದ್ಭುತ ಜಯ ಸಾಧಿಸಲು ನೆರವಾಗಿರುವ ಕೆಂಜಿಗೆ ತೆರೆಯಾಗಿ ಪ್ರಕಾಶಿಸುತ್ತಿದ್ದಾರೆ.
ಹುಟ್ಟಿನಿಂದ ಅಮೆರಿಕ ಪ್ರಜೆಯಾದ ಕೆಂಜಿಗೆ, ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದು ಮಾತೃ ರಾಷ್ಟ್ರಕ್ಕೆ ಮರಳಿದರು. ನ್ಯೂಯಾರ್ಕ್‌ನಲ್ಲಿ ವೈದ್ಯಕೀಯ ಸಲಕರಣೆಗಳ ತಪಾಸಣೆ ವೃತ್ತಿ ಆರಂಭಿಸಿದ ಅವರ ಕ್ರಿಕೆಟ್ ಆಟದ ಬಯಕೆ ಅಳಿದುಹೋಗಲಿಲ್ಲ. ಆದರೆ, ಸುಪ್ತವಾಗಿತ್ತು.
ʻಅದೊಂದು ಹಂತವಾಗಿತ್ತು. ಗುರಿಯಿಲ್ಲದೆ ಅಲೆಯುತ್ತಿದ್ದೆ. ಆದರೆ, ಒಂದು ವರ್ಷದ ನಂತರ ನ್ಯೂಯಾರ್ಕ್ ನ ಕೊಲಂಬಿಯಾ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡೆ. ಕ್ರಿಕೆಟ್ ನಲ್ಲಿ ಮುಂದುವರಿಯುವ ನನ್ನ ಆಸೆ ಪುನರುಜ್ಜೀವನಗೊಂಡಿತು,ʼ ಎಂದರು. ಕೆಲವು ತಿಂಗಳ ಹಿಂದೆ ಅವರು ಬೆಂಗಳೂರಿಗೆ ಬಂದಿದ್ದರು.
ಕೆಐಒಸಿಯಲ್ಲಿ ನೊಸ್ತುಶ್ ಅವರ ಆರಂಭಿಕ ತರಬೇತುದಾರರಾದ ಇರ್ಫಾನ್ ಸೇಟ್, ಕೆಂಜಿಗೆ ಅಮೆರಿಕಕ್ಕೆ ಸರಿಯಾದ ಸಮಯದಲ್ಲಿ ಮರಳಿದರು ಎಂದು ಹೇಳಿದರು. ʻಆತ ಪ್ರತಿಭಾವಂತ. ಸಾಕಷ್ಟು ಶ್ರಮ ವಹಿಸುತ್ತಿದ್ದರು ಮತ್ತು ರಾಜ್ಯ ಲೀಗ್‌ನಲ್ಲೂ ಆಡುತ್ತಿದ್ದರು. ಆದರೆ, ಇಲ್ಲಿ ಸಾವಿರಾರು ಕ್ರಿಕೆಟಿಗರು ರಾಜ್ಯ ಕ್ರಿಕೆಟ್ ತಂಡವನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಕೆಲವರು ಯಶಸ್ವಿ ಆಗುತ್ತಾರೆ; ಕೆಲವರು ಆಗುವುದಿಲ್ಲ. ನೋಶ್ ಗೆ ಅದು ಸಾಧ್ಯವಾಗ ಲಿಲ್ಲ. ಆದರೆ, ಅದು ಆತನ ಪ್ರತಿಭೆ ಅಥವಾ ಶ್ರದ್ಧೆಯ ಪ್ರತಿಬಿಂಬವಾಗಿರಲಿಲ್ಲ. ಯುಎಸ್ಎಗೆ ಹಿಂತಿರುಗಲು ನಿರ್ಧರಿಸಿದಾಗ, ಇದು ಉತ್ತಮ ಕ್ರಮವೆಂದು ನಾನು ಭಾವಿಸಿದೆ,ʼ ಎಂದು ಸೇಟ್ ಹೇಳಿದರು.
ಅದು ಅನಿಸಿಕೆ ತಪ್ಪಾಗಲಿಲ್ಲ. ಕೆಂಜಿಗೆ ಮುಂದಿನ ಕೆಲವು ವರ್ಷಗಳಲ್ಲಿ ಅಮೆರಿಕದ ರಾಷ್ಟ್ರೀಯ ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ರು ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಎಂಐ ನ್ಯೂಯಾರ್ಕ್ ಸೇರಿದರು. ಮಾರ್ಟಿನ್ ಗುಪ್ತಿಲ್ ಸೇರಿದಂತೆ ಅಗ್ರ ಬ್ಯಾಟರ್‌ಗಳ ವಿಕೆಟ್ ಪಡೆದುಕೊಂಡರು. ʻಅನುಭವ ನನ್ನ ಕೈ ಹಿಡಿಯಿತು. ಉತ್ತಮ ಆಟಗಾರರನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೇನೆ,ʼ ಎಂದು ಅವರು ಹೇಳಿದರು.
ಮಾಜಿ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೋ ಫ್ಲೋರಿಡಾದಲ್ಲಿ ನಡೆದ ವಾರ್ಷಿಕ ಕ್ರಿಕೆಟ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾಗ, ಕೆಂಜಿಗೆ ಅವರ ಗಮನಕ್ಕೆ ಬಂದಿದ್ದು ದೆಸೆ ಬದಲಿಸಿತು. ಕ್ರಿಕೆಟ್‌ಪ್ಲೆಕ್ಸ್ ರೆಸಾರ್ಟ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೆಂಜಿಗೆ ಮತ್ತು ಸಹ ಆಟಗಾರ ಅಲಿ ಖಾನ್ ಅವರನ್ನು ಬ್ರಾವೋ ಆಯ್ಕೆ ಮಾಡಿಕೊಂಡರು.
ʻಇದು ನನ್ನ ಬದುಕನ್ನು ಬದಲಿಸುತ್ತದೆ ಎಂದು ನಾನು ಯೋಚಿಸಲಿಲ್ಲ; ನನ್ನನ್ನು ದೊಡ್ಡ ಲೀಗ್‌ಗೆ ಮುಂದೂಡುತ್ತದೆ ಎಂದುಕೊಂಡಿರಲಿ ಲ್ಲ. ಅಮೆರಿಕ ತಂಡ ಸೇರಲು ಯುವ ಕ್ರಿಕೆಟಿಗರಿಗೆ ತರಬೇತಿ ಮತ್ತು 800 ಗಂಟೆಗಳ ಸಮುದಾಯ ಸೇವೆ ಮಾಡಬೇಕಿತ್ತು,ʼ ಎಂದು ಹೇಳಿದರು.
2019 ರಲ್ಲಿ ಕೆಂಜಿಗೆ ಯುಎಇ ವಿರುದ್ಧ ಮೈದಾನಕ್ಕೆ ಕಾಲಿಟ್ಟರು. ಗುರುವಾರ ನ್ಯೂಯಾರ್ಕ್‌ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಪಂದ್ಯ ಸೇರಿದಂತೆ 40 ಒಂದು ದಿನ ಮತ್ತು ಏಳು ಟಿ 20 ಪಂದ್ಯಗಳನ್ನು ಆಡಿದ್ದಾರೆ. ಕೆಂಜಿಗೆ ಅವರು ಉಸ್ಮಾನ್ ಖಾನ್, ಅಜಂ ಖಾನ್ ಮತ್ತು ಶಾದಾಬ್ ಖಾನ್ ಅವರ ವಿಕೆಟ್ ಉರುಳಿಸಿ, ಪಾಕಿಸ್ತಾನ ತಂಡದ ಬೆನ್ನೆಲುಬು ಮುರಿದರು.
ʻಅಸೋಸಿಯೇಟ್ ತಂಡದಿಂದ ಬರುವ ನಮಗೆ ದೊಡ್ಡ ತಂಡಗಳ ವಿರುದ್ಧ ಆಡುವ ಅವಕಾಶ ಸಿಗುವುದಿಲ್ಲ. ಅವಕಾಶ ಬಂದಾಗ ಎರಡೂ ಕೈಗಳಿಂದ ಬಾಚಿಕೊಳ್ಳಬೇಕುʼ ಎಂದರು. ಕೆಂಜಿಗೆ ಕಳೆದ ವರ್ಷ ಐಸಿಸಿ ಕ್ವಾಲಿಫೈಯರ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಜೂನ್ 12 ರಂದು ಅಮೆರಿಕ ತಂಡವು ಭಾರತವನ್ನು ಎದುರಿಸಲಿದ್ದು, ಕೆಂಜಿಗೆ ಅವರಿಗೆ ಮತ್ತೊಂದು ಸವಾಲು ಎದುರಾಗುತ್ತದೆ. ʻಕರ್ನಾಟಕದಲ್ಲಿ ನಾನು ಕ್ರಿಕೆಟ್‌ನಿಂದ ದೂರವಿರಲು ಸಿದ್ಧನಾಗಿದ್ದೆ. ಆದರೆ, ವಿಧಿ ನನ್ನನ್ನು ಬೇರೆ ಮಾರ್ಗಕ್ಕೆ ಕರೆದೊಯ್ದಿತು. ನಾನು ಕ್ರಿಕೆಟ್ ನಲ್ಲಿ ಮುಂದುವರಿಯುತ್ತೇನೆ, ʼ ಎಂದರು.