ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಮರುಸ್ಥಾಪಿಸಲು ಜಗತ್ತಿನ ಯಾವುದೇ ಶಕ್ತಿಗೆ ಸಾಧ್ಯವಿಲ್ಲ; ನರೇಂದ್ರ ಮೋದಿ

ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನವನ್ನು ಹೊರಗಿಡಲು ಇಂಡಿಯಾ ಬಣ ಬಯಸಿದೆ ಎಂದು ಆರೋಪಿಸಿದ ಅವರು ಒಂದು ಜಾತಿಯನ್ನು ಮತ್ತೊಂದು ಜಾತಿಯ ವಿರುದ್ಧ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದು ಹೇಳಿದರು;

Update: 2024-11-08 13:18 GMT
ಧುಲೆ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನವೆಂಬರ್ 8) ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದ ಮೇಲೆ ಮಾತಿನ ದಾಳಿ ನಡೆಸಿದರು. ವಿಶ್ವದ ಯಾವುದೇ ಶಕ್ತಿಯು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಅವರು ನಡೆಸುವ ಪ್ರಯತ್ನಗಳೆಲ್ಲವೂ ವ್ಯರ್ಥ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನವನ್ನು ಹೊರಗಿಡಲು ಇಂಡಿಯಾ ಬಣ ಬಯಸಿದೆ ಎಂದು ಆರೋಪಿಸಿದ ಅವರು ಒಂದು ಜಾತಿಯನ್ನು ಮತ್ತೊಂದು ಜಾತಿಯ ವಿರುದ್ಧ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದು ಹೇಳಿದರು.

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದಲಿತರು ಮತ್ತು ಆದಿವಾಸಿಗಳನ್ನು ಪ್ರಚೋದಿಸಲು ಇಂಡಿಯಾ ಗುಂಪು ಖಾಲಿ ಪುಸ್ತಕಗಳನ್ನು ಸಂವಿಧಾನವೆಂದು ಬಿಂಬಿಸುತ್ತಿದೆ ಎಂದು ಲೇವಡಿ ಮಾಡಿದರು.

ಪಾಕಿಸ್ತಾನದ ಕಾರ್ಯಸೂಚಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನ ಕಾರ್ಯಸೂಚಿಯನ್ನು ಪ್ರೋತ್ಸಾಹಿಸುತ್ತಿವೆ. ಅವರು ಪ್ರತ್ಯೇಕತೆಯ ಮಾತನ್ನು ಆಡುತ್ತಿವೆ ಎಂದು ಮೋದಿ ಹೇಳಿದರು. ಜನರ ಆಶೀರ್ವಾದ ಇರುವವರೆಗೂ ಈ ಕಾರ್ಯಸೂಚಿ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ಮಾತ್ರ ಅನುಸರಿಸಲಾಗುತ್ತದೆ. 370ನೇ ವಿಧಿಯನ್ನು ಮರಳಿ ತರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯವನ್ನು ಹೇಗೆ ಮಂಡಿಸಲಾಗಿದೆ. ಬಿಜೆಪಿ ಶಾಸಕರು ಪ್ರತಿಭಟಿಸಿದಾಗ ಅವರನ್ನು ಹೊರಹಾಕಲಾಗಿದೆ ಎಂಬುದನ್ನು ನೀವು ಟಿವಿಯಲ್ಲಿ ನೋಡಿರಬಹುದು. ದೇಶ ಮತ್ತು ಮಹಾರಾಷ್ಟ್ರ ಇದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಮೋದಿ ಹೇಳಿದರು.

ಜಾತಿ ಮತ್ತು ಸಮುದಾಯಗಳನ್ನು ವಿಭಜಿಸುವ ಅಪಾಯಕಾರಿ ಆಟವನ್ನು ಕಾಂಗ್ರೆಸ್ ಆಡುತ್ತಿದೆ ಎಂದು ಮೋದಿ ಇದೇ ವೇಳೆ ಆರೋಪಿಸಿದರು. ಎಸ್ಟಿ (ಪರಿಶಿಷ್ಟ ಪಂಗಡ), ಎಸ್ಸಿ (ಪರಿಶಿಷ್ಟ ಜಾತಿ) ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) ಒಗ್ಗಟ್ಟಾಗಿ ಉಳಿದರೆ, ಕಾಂಗ್ರೆಸ್ ರಾಜಕೀಯವು ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದರು.

"ಕಾಂಗ್ರೆಸ್ ಒಂದು ಜಾತಿಯನ್ನು ಮತ್ತೊಂದು ಜಾತಿಯ ವಿರುದ್ಧ ಎತ್ತಿಕಟ್ಟಲು ಮತ್ತು ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಏಕತೆ ದುರ್ಬಲಗೊಳಿಸಲು ಬಯಸಿದೆ. ನೆಹರೂ ಕಾಲದಿಂದಲೂ ಕಾಂಗ್ರೆಸ್ ಮತ್ತು ಅವರ ಕುಟುಂಬ ಮೀಸಲಾತಿಯನ್ನು ವಿರೋಧಿಸಿತ್ತು ಮತ್ತು ಈಗ ಅವರ ನಾಲ್ಕನೇ ತಲೆಮಾರಿನ 'ಯುವರಾಜ' (ರಾಹುಲ್‌ಗಾಂಧಿ ) ಜಾತಿ ವಿಭಜನೆಗಾಗಿ ಕೆಲಸ ಮಾಡುತ್ತಿದ್ದಾರೆ. 'ಏಕ್ ಹೈ ತೋ ಸೇಫ್ ಹೈ' (ನಾವು ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ) ಎಂದು ನೀವು ಅರಿತುಕೊಳ್ಳಬೇಕು" ಎಂದು ಅವರು ಹೇಳಿದರು.

ಧುಲೆಯಲ್ಲಿ ಪ್ರಚಾರ ಆರಂಭ

ಈ ಹಿಂದೆ, ಕಾಂಗ್ರೆಸ್ ಧರ್ಮದ ಮೇಲೆ ರಾಜಕೀಯ ಮಾಡಿತು. ಇದು ಭಾರತದ ವಿಭಜನೆಗೆ ಕಾರಣವಾಯಿತು. ಈಗ ಆ ಪಕ್ಷವು ಜಾತಿಯ ರಾಜಕೀಯದಲ್ಲಿ ತೊಡಗಿದೆ ಎಂದು ಮೋದಿ ಆರೋಪಿಸಿದರು. ಉತ್ತರ ಮಹಾರಾಷ್ಟ್ರ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ವಿರುದ್ಧ ಇದಕ್ಕಿಂತ ದೊಡ್ಡ ಪಿತೂರಿ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್‌ ಪವಾರ್) ಒಳಗೊಂಡ ಮಹಾ ವಿಕಾಸ್ ಅಘಾಡಿ (ಎಂವಿಎ) ‌ಚಕ್ರ ಮತ್ತು ಬ್ರೇಕ್‌ ಇಲ್ಲ ವಾಹನವಾಗಿದೆ. ಅಲ್ಲಿ ಚಾಲಕನ ಆಸನದಲ್ಲಿ ಕುಳಿತುಕೊಳ್ಳಲು ಹೋರಾಟ ನಡೆಯುತ್ತಿದೆ ಎಂದು ಮೋದಿ ವ್ಯಂಗ್ಯವಾಡಿದರು.

ಧುಲೆ ಮತ್ತು ಮಹಾರಾಷ್ಟ್ರದೊಂದಿಗಿನ ತಮ್ಮ ಸಂಬಂಧ ನೆನಪಿಸಿಕೊಂಡ ಮೋದಿ, ರಾಜ್ಯದ ಜನರಿಂದ ಏನನ್ನಾದರೂ ಕೇಳಿದಾಗಲೆಲ್ಲಾ ಅವರು ದಯೆ ತೋರಿದ್ದಾರೆ ಎಂದು ಹೇಳಿದರು.

"ಹಿಂದಿನ ಸರ್ಕಾರದ 15 ವರ್ಷಗಳ ದುರಾಡಳಿತವನ್ನು ಕೊನೆಗೊಳಿಸಲು ನಾನು 2014 ರಲ್ಲಿ ನಿಮ್ಮ ಆಶೀರ್ವಾದ ಕೋರಿದ್ದೆ. ಬಿಜೆಪಿಗೆ ಅಭೂತಪೂರ್ವ ಯಶಸ್ಸು ಸಿಗುವಂತೆ ನೀವು ನೋಡಿಕೊಂಡಿದ್ದೀರಿ. ಇಂದು, ನಾನು ಮಹಾರಾಷ್ಟ್ರದ ಧುಲೆಯಿಂದ ನನ್ನ ಅಭಿಯಾನ ಪ್ರಾರಂಭಿಸುತ್ತಿದ್ದೇನೆ. ಮಹಾಯುತಿಯ ಪ್ರತಿಯೊಬ್ಬ ಅಭ್ಯರ್ಥಿಯೂ ನಿಮ್ಮ ಆಶೀರ್ವಾದವನ್ನು ಬಯಸುತ್ತಾರೆ" ಎಂದು ಅವರು ಹೇಳಿದರು.

"ಕಳೆದ ಎರಡೂವರೆ ವರ್ಷಗಳಲ್ಲಿ ಆಗಿರುವ ಮಹಾರಾಷ್ಟ್ರದ ಅಭಿವೃದ್ಧಿಯ ವೇಗವನ್ನು ನಿಲ್ಲಿಸಲು ನಾನು ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಪ್ರಧಾನಿ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುವುದು. ಮಹಾಯುತಿ ಮಾತ್ರ ಉತ್ತಮ ಆಡಳಿತ ನೀಡಬಲ್ಲದು ಎಂದು ನುಡಿದರು. 

Tags:    

Similar News