NEET-UG 2024| ಒಎಂಆರ್ ಶೀಟ್ ಕಾಲಮಿತಿ: ಎನ್‌ಟಿಎಗೆ ಸುಪ್ರೀಂ ನೋಟಿಸ್
ಖಾಸಗಿ ಕೋಚಿಂಗ್ ಕೇಂದ್ರಗಳು ಮತ್ತು ನೀಟ್ ಅಭ್ಯರ್ಥಿಗಳು ಸಲ್ಲಿಸಿದ ಹೊಸ ಮನವಿ ಮೇಲೆ ಸುಪ್ರೀಂ ಕೋರ್ಟಿನ ರಜಾಕಾಲದ ಪೀಠವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ನೀಡಿದೆ.;
ಒಎಂಆರ್ ಹಾಳೆಗಳ ಬಗ್ಗೆ ದೂರು ನೀಡಲು ಕಾಲಮಿತಿ ಇದೆಯೇ ಎಂದು ತಿಳಿಸಬೇಕೆಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯನ್ನು ಸುಪ್ರೀಂ ಕೋರ್ಟ್ ಕೇಳಿದೆ.
ನೀಟ್-ಯುಜಿ 2024ಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಒಎಂಆರ್ ಹಾಳೆಗಳನ್ನು ಒದಗಿಸಲಾಗಿದೆ.
ಖಾಸಗಿ ಕೋಚಿಂಗ್ ಸೆಂಟರ್ ಮತ್ತು ಕೆಲವು ನೀಟ್ ಅಭ್ಯರ್ಥಿಗಳು ಸಲ್ಲಿಸಿದ ಹೊಸ ಮನವಿ ಮೇಲೆ ಎನ್‌ಟಿಎಗೆ ನೋಟಿಸ್ ನೀಡಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್.ವಿ.ಎನ್. ಭಟ್ಟಿ ಅವರ ರಜಾಕಾಲದ ಪೀಠವು ಅರ್ಜಿಯನ್ನು ಬಾಕಿ ಉಳಿದ ವಿಷಯಗಳೊಂದಿಗೆ ಜೋಡಿಸಿ ಜುಲೈ 8 ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ಒಎಂಆರ್ ಹಾಳೆಗಳ ವಿಷಯ: ಕೋಚಿಂಗ್ ಇನ್‌ಸ್ಟಿಟ್ಯೂಟ್ ಮತ್ತು ಅಭ್ಯರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್.ಬಸಂತ್, ಪರೀಕ್ಷೆಗೆ ಹಾಜರಾದ ಕೆಲವು ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ಸಿಕ್ಕಿಲ್ಲ ಎಂದರು.
ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಗಳು ಆರ್ಟಿಕಲ್ 32 ಅರ್ಜಿಯನ್ನು ಹೇಗೆ ಸಲ್ಲಿಸಬಹುದು ಮತ್ತು ಸಂಸ್ಥೆಯ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಪೀಠವು ಬಸಂತ್ ಅವರಿಗೆ ವಿವರಿಸಿತು.
ಎನ್‌ಟಿಎ ಪರ ವಾದ ಮಂಡಿಸಿದ ವಕೀಲ, ಒಎಂಆರ್ ಹಾಳೆಗಳನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂದರು.
ಒಎಂಆರ್ ಹಾಳೆಗಳ ಬಗ್ಗೆ ದೂರು ನೀಡಲು ಯಾವುದೇ ಕಾಲಮಿತಿ ಇದೆಯೇ ಎಂದು ಪೀಠವು ಅವರನ್ನು ಕೇಳಿತು. ಪ್ರತಿಕ್ರಿಯಿಸಿದ ಎನ್‌ಟಿಎ ವಕೀಲರು, ತಾವು ಸೂಚನೆಗಳನ್ನು ತೆಗೆದುಕೊಳ್ಳಬೇಕಿದೆ. ಬಾಕಿ ಉಳಿದ ವಿಷಯಗಳ ಜೊತೆಗೆ ಅರ್ಜಿಯನ್ನು ಸೇರಿಸಿ. ಅಷ್ಟರೊಳಗೆ ಪ್ರಶ್ನೆಗೆ ಉತ್ತರ ಸಲ್ಲಿಸುತ್ತೇವೆ ಎಂದು ಹೇಳಿದರು.
ʻಕುಂದುಕೊರತೆಗಳನ್ನು ಎತ್ತಲು ನಿಗದಿತ ಕಾರ್ಯವಿಧಾನ ಅಥವಾ ಸಮಯದ ಮಿತಿ ಇಲ್ಲ. ಆದ್ದರಿಂದ ಅಭ್ಯರ್ಥಿಗಳು ಮಧ್ಯಂತರ ಪರಿಹಾರ ಕೋರುತ್ತಿದ್ದಾರೆ ಎಂದು ಬಸಂತ್ ಹೇಳಿದರು.
ಆನಂತರ ನೋಟಿಸ್ ಜಾರಿ ಮಾಡಿದ ಪೀಠ, ಬಾಕಿ ಉಳಿದ ವಿಷಯಗಳೊಂದಿಗೆ ಅರ್ಜಿಯನ್ನು ಜೋಡಿಸಿತು. ಕಾಲಮಿತಿ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ಸಲ್ಲಿಸುವಂತೆ ಎನ್‌ಟಿಎ ಪರ ವಕೀಲರಿಗೆ ಹೇಳಿತು.