NEET- UG 2024| ನಗರವಾರು,ಕೇಂದ್ರವಾರು ಫಲಿತಾಂಶ ಬಿಡುಗಡೆ
ಅಭ್ಯರ್ಥಿಗಳ ಫಲಿತಾಂಶಗಳನ್ನು ಇತರರು ನೋಡಲಾಗುವುದಿಲ್ಲ; ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು exams.nta.ac.in/NEET/ ಅಥವಾ neet.ntaonline.in ನಲ್ಲಿ ಪರಿಶೀಲಿಸಬಹುದು.;
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, ಎನ್‌ಟಿಎ)ಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) 2024ರ ನಗರವಾರು ಮತ್ತು ಪರೀಕ್ಷಾ ಕೇಂದ್ರವಾರು ಫಲಿತಾಂಶಗಳನ್ನು ಶನಿವಾರ (ಜುಲೈ 20) ಪ್ರಕಟಿಸಿದೆ. ಆದರೆ, ಅಭ್ಯರ್ಥಿಗಳ ವೈಯಕ್ತಿಕ ಗುರುತುಗಳನ್ನು ಗೌಪ್ಯವಾಗಿಡಲಾಗಿದೆ.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಎನ್ಟಿಎ ನೀಟ್ ಅಧಿಕೃತ ವೆಬ್‌ಸೈಟ್(exam s.nta.ac.in /NEET)ಗೆ ಭೇಟಿ ನೀಡಬೇಕು. neet.ntaonline.in ನಲ್ಲಿ ಕೂಡ ಫಲಿತಾಂಶಗಳನ್ನು ನೋಡಬಹುದು.
ಸುಪ್ರೀಂ ಕೋರ್ಟ್ ಆದೇಶ: ಸುಪ್ರೀಂ ಕೋರ್ಟ್ ಜುಲೈ 20 ರೊಳಗೆ ನೀಟ್-ಯುಜಿ ಫಲಿತಾಂಶಗಳನ್ನು ಪ್ರಕಟಿಸಬೇಕೆಂದು ಎನ್‌ಟಿಎಗೆ ಜುಲೈ 18 ರಂದು ಆದೇಶಿಸಿತ್ತು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಆದರೆ, ವಿದ್ಯಾರ್ಥಿಗಳ ಗುರುತನ್ನು ಬಹಿರಂಗಪಡಿಸಬಾರದು ಎಂದು ಹೇಳಿತ್ತು.
ನೀಟ್-ಯುಜಿ ಪರೀಕ್ಷೆಯನ್ನು ಮೇ 5 ರಂದು ನಡೆಸಲಾಗಿದ್ದು, ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಫಲಿತಾಂಶಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದವು.
1,500 ಕ್ಕೂ ಹೆಚ್ಚು ಅಭ್ಯರ್ಥಿಗಳು ಗಳಿಸಿದ ಅಂಕಗಳು ಸಂಶಯಕ್ಕೆ ಕಾರಣವಾಗಿದ್ದರಿಂದ, ಜೂನ್ 23 ರಂದು ಮರು ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ಫಲಿತಾಂಶವನ್ನು ಜೂನ್ 30, 2024 ರಂದು ಪ್ರಕಟಿಸಲಾಯಿತು.
ಫಲಿತಾಂಶ ಪರಿಶೀಲಿಸುವುದು ಹೀಗೆ: 1. ಅಧಿಕೃತ ನೀಟ್ ವೆಬ್‌ಸೈಟ್‌ಗೆ ಭೇಟಿ ನೀಡಿ
2. ಮುಖಪುಟದಲ್ಲಿ ನೀಟ್ ಅಂಕಪಟ್ಟಿ ಲಿಂಕ್ ಮೇಲೆ ಕ್ಲಿಕ್ ಮಾಡಿ
3. ನಿಮ್ಮ ಸ್ಕೋರ್‌ಕಾರ್ಡ್ ಪ್ರವೇಶಿಸಲು ವಿವರಗಳನ್ನು ನಮೂದಿಸಿ
4. ಸ್ಕೋರ್ ಕಾರ್ಡ್ ಡೌನ್ಲೋಡ್ ಮಾಡಿ
5. ಸ್ಕೋರ್ ಕಾರ್ಡ್ ಉಳಿಸಿಕೊಳ್ಳಿ ಅಥವಾ ಮುದ್ರತಿ ಪ್ರತಿ ತೆಗೆದುಕೊಳ್ಳಿ
ಅಂಕ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ರೋಲ್ ಸಂಖ್ಯೆ, ಅರ್ಜಿ ಸಂಖ್ಯೆ, ವರ್ಗ, ಒಟ್ಟು ಅಂಕ, ಶೇಕಡಾವಾರು ಅಂಕ, ವರ್ಗ ಶ್ರೇಣಿ ಮತ್ತು ಅರ್ಹತಾ ಸ್ಥಿತಿ ಮತ್ತಿತರ ಪ್ರಮುಖ ಮಾಹಿತಿ ಇರಲಿದೆ. ಜೊತೆಗೆ, ಅಖಿಲ ಭಾರತ ಶ್ರೇಣಿ ಕೂಡ ಇರುತ್ತದೆ.