NEET-UG 2024 SCAM: ಮೇ 5 ರ ಮೊದಲು ಸೋರಿಕೆ ಸಂಭವಿಸಿರಬಹುದು-ಸುಪ್ರೀಂ

ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ.;

Update: 2024-07-22 07:26 GMT

ನೀಟ್-ಯುಜಿ 2024 ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸೋಮವಾರ (ಜುಲೈ 22) ಆರಂಭಿಸಿದ ಸುಪ್ರೀಂ ಕೋರ್ಟ್, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಪ್ರಶ್ನೆಪತ್ರಿಕೆಗಳು ಬ್ಯಾಂ‌ಕ್‌ ಗಳಿಗೆ ಸಾಗಿಸುವ ಮುನ್ನವೇ ಸೋರಿಕೆ ಆಗಿರಬಹುದು ಎಂದು ಮು.ನ್ಯಾ.ಡಿ.ವೈ. ಚಂದ್ರಚೂಡ್ ಅವರು ಅಭಿಪ್ರಾಯಪಟ್ಟರು. 

ಪರೀಕ್ಷೆ ನಡೆದ ಮೇ 5 ರ ಬೆಳಗ್ಗೆ ಸೋರಿಕೆ ಸಂಭವಿಸಿದೆ. ಸೋರಿಕೆ ಬಿಹಾರ ಮತ್ತು ಜಾರ್ಖಂಡ್‌ನ ಸಣ್ಣ ಪ್ರದೇಶಗಳಿಗೆ ಸೀಮಿತವಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಮೇ 4 ರ ರಾತ್ರಿ ಸೋರಿಕೆ ನಡೆದಿದ್ದರೆ, ಬ್ಯಾಂಕ್‌ಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಭದ್ರಪಡಿಸುವ ಮೊದಲು ಅದು ಸಂಭವಿಸಿರಬೇಕು ಎಂದು ಸಿಜೆಐ ಹೇಳಿದರು. 

ʻಮೇ 4 ರ ರಾತ್ರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಡೆದಿದ್ದರೆ, ಎಸ್‌ಬಿಐ ಅಥವಾ ಕೆನರಾ ಬ್ಯಾಂಕ್‌ನಲ್ಲಿ ನಡೆದಿಲ್ಲ. ಪ್ರಶ್ನೆಪತ್ರಿಕೆಗಳನ್ನು ಬ್ಯಾಂಕ್‌ಗಳಿಗೆ ಸಾಗಿಸುವ ಮೊದಲೇ ಸೋರಿಕೆ ಆಗಿರಬೇಕು,ʼ ಎಂದು ಅವರು ಹೇಳಿದರು.

ವಾಟ್ಸ್‌ಆಪ್‌ ಮೂಲಕ ಸೋರಿಕೆ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಶ್ನೆಪತ್ರಿಕೆ ಸೋರಿಕೆಯನ್ನು ಮತ್ತು ವಾಟ್ಸಾಪ್ ಮೂಲಕ ಪ್ರಶ್ನೆಪತ್ರಿಕೆ ಪ್ರಸಾರವಾಗಿದೆ ಎಂಬುದನ್ನು ಒಪ್ಪಿಕೊಂಡಿದೆ ಎಂದು ನೀಟ್-ಯುಜಿ ಆಕಾಂಕ್ಷಿಗಳ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಮು.ನ್ಯಾ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಪರೀಕ್ಷೆಯ ಕೇಂದ್ರವಾರು ಮತ್ತು ನಗರವಾರು ಫಲಿತಾಂಶಗಳ ಘೋಷಣೆಯಿಂದ ಏನಾಯಿತು ಎಂದು ಕಕ್ಷಿದಾರರ ವಕೀಲರನ್ನು ಕೇಳಿತು. 

ವಿಚಾರಣೆ ಮುಂದುವರಿದಿದೆ. 

ಫಲಿತಾಂಶಗಳ ವಿಶ್ಲೇಷಣೆ: ಶನಿವಾರ ಎನ್‌ಟಿಎ ಬಿಡುಗಡೆ ಮಾಡಿದ ಕೇಂದ್ರವಾರು ಫಲಿತಾಂಶಗಳ ವಿಶ್ಲೇಷಣೆಯಿಂದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳಿಂದ ಲಾಭ ಪಡೆದ ಅಭ್ಯರ್ಥಿಗಳ ಫಲಿತಾಂಶ ಉತ್ತಮವಾಗಿಲ್ಲ ಎಂದು ತೋರಿಸಿದೆ. ಆದರೆ, ಕೆಲವು ಕೇಂದ್ರಗಲ್ಲಿ ಉತ್ತಮ ಸಾಧನೆ ಮಾಡಿರುವ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ ಎಂದು ಸ್ಪಷ್ಟಪಡಿಸಿದೆ. 

4,750 ಕೇಂದ್ರಗಳಲ್ಲಿ ಪರೀಕ್ಷೆ ಬರೆದ 32 ಲಕ್ಷ ಅಭ್ಯರ್ಥಿಗಳ ಮಾಹಿತಿಯನ್ನುಸಂಚಿತ ರೂಪದಲ್ಲಿ ಬಿಡುಗಡೆ ಮಾಡಿಲ್ಲ. ಬದಲಾಗಿ, ಪ್ರತಿ ಕೇಂದ್ರದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಲಕ್ಷಾಂತರ ಆಕಾಂಕ್ಷಿಗಳು ನ್ಯಾಯಾಲಯದ ಅಂತಿಮ ತೀರ್ಪಿಗಾಗಿ ಕಾಯುತ್ತಿರುವುದರಿಂದ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದತ್ತಾಂಶವನ್ನು ಬಿಡುಗಡೆ ಮಾಡಲಾಗಿದೆ. 

ಓಯಸಿಸ್ ಸ್ಕೂಲ್( ಹಜಾರಿಬಾಗ್, ಜಾರ್ಖಂಡ್), ಹರದಯಾಲ್ ಪಬ್ಲಿಕ್ ಸ್ಕೂಲ್( ಜಜ್ಜರ್, ಹರಿಯಾಣ), ಗುಜರಾತಿನ ಗೋಧ್ರಾದಲ್ಲಿರುವ ಜಯ್ ಜಲರಾಮ್ ಇಂಟರ್‌ನ್ಯಾಶನಲ್ ಸ್ಕೂಲ್ ಗಳಲ್ಲಿ ಅಭ್ಯರ್ಥಿಗಳ ಸಾಧನೆ ಕಡಿಮೆಯಾಗಿದೆ.

ಸುಪ್ರೀಂ ಕೋರ್ಟ್ ಪೀಠವು 40 ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

Tags:    

Similar News