NEET UG 2024: ಆರು ಟಾಪರ್‌ಗಳ ಅಂಕ ಕಡಿಮೆಯಾಗುವ ಸಾಧ್ಯತೆ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮೂಲಗಳ ಪ್ರಕಾರ, ಕೃಪಾಂಕ ರದ್ದಾದ ನಂತರ 67 ಟಾಪ್ ಸ್ಕೋರರ್‌ಗಳಲ್ಲಿ ಆರು ಮಂದಿಯ ಅಂಕಗಳು ಕಡಿಮೆಯಾಗುವ ಸಾಧ್ಯತೆಯಿದೆ.;

Update: 2024-06-19 12:57 GMT

ನೀಟ್-ಯುಜಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಆರು ಟಾಪರ್‌ಗಳಿಗೆ ನೀಡಿದ ಕೃಪಾಂಕಗಳನ್ನು ಕಡಿತಗೊಳಿಸಿದ ನಂತರ, ಅವರು ಸುಮಾರು 60-70 ಅಂಶಗಳನ್ನು ಕಳೆದುಕೊಳ್ಳಲಿದ್ದಾರೆ. 

ನೀಟ್‌ ಪರೀಕ್ಷೆಯಲ್ಲಿ ಅಕ್ರಮಗಳು ಮತ್ತು ಕೃಪಾಂಕ ನೀಡಿರುವುದಕ್ಕೆ ಟೀಕೆಗೆ ಒಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಕೆಲವು ಕೇಂದ್ರಗಳಲ್ಲಿ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಿದ ಕೃಪಾಂಕಗಳ ಮರುಮೌಲ್ಯಮಾಪನ ಮಾಡುತ್ತಿದೆ. 

ಎನ್‌ಟಿಎ ʻಅಂಕಗಳ ಹಣದುಬ್ಬರ' ನಡೆಸಿದೆ ಎಂದು ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಆನಂತರ ಎನ್‌ಟಿಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಿದ ಕೃಪಾಂಕಗಳನ್ನು ಪರಿಶೀಲಿಸಲು ಸಮಿತಿ ರಚಿಸಿತು. 

ಕೃಪಾಂಕ ವಿವಾದ: ಇಂಡಿಯಾ ಟುಡೇ ವರದಿ ಪ್ರಕಾರ, ಕೃಪಾಂಕಗಳನ್ನು ರದ್ದುಗೊಳಿಸಿದರೆ 67 ಅಖಿಲ ಭಾರತ ಟಾಪ‌ರ್‌ ಗಳಲ್ಲಿ ಆರು ಮಂದಿಯ ಅಂಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 67 ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಪಡೆದಿದ್ದರು. ಇದು ಪೋಷಕರು ಹಾಗೂ ಅಭ್ಯರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸೂತ್ರವೊಂದನ್ನು ಆಧರಿಸಿ ನೀಡಲಾಗುವ ಈ ಅಂಕಗಳು ಆರು ಅಭ್ಯರ್ಥಿಗಳ 60-70 ಅಂಶಗಳನ್ನು ತಗ್ಗಿಸಬಹುದು. ಕೃಪಾಂಕ ಕಡಿತಗೊಳಿಸಿ ದರೆ ತೊಂದರೆಗೊಳಗಾಗುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಹರಿಯಾಣದ ಜಜ್ಜರ್‌ನಲ್ಲಿರುವ ಕೇಂದ್ರದಲ್ಲಿ ತೆಗೆದುಕೊಂಡಿದ್ದರು. 

ಈ ವರ್ಷ ಆರು ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ತಪ್ಪಾಗಿ ವಿತರಿಸಲಾಗಿತ್ತು. ನಷ್ಟವಾದ ಸಮಯವನ್ನು ಸರಿದೂಗಿಸಲು ಪರೀಕ್ಷಾ ಏಜೆನ್ಸಿಯು ಕೃಪಾಂಕಗಳನ್ನು ನೀಡಿತು. ಈ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಟಿಎ ತಿಳಿಸಿದೆ.

ಸೋರಿಕೆಯಾದ ಪತ್ರಿಕೆಗಳು: ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಇತರ ಕೇಂದ್ರಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು 500 ಕ್ಕಿಂತ ಕಡಿಮೆ ಅಂಕ ಗಳಿಸಿದ್ದಾರೆ ಎಂದು ಏಜೆನ್ಸಿ ಹೇಳಿದೆ. ವೈದ್ಯಕೀಯ ಸೀಟು ಪಡೆಯಲು ಈ ಅಂಕಗಳು ಸಾಕಾಗುವು ದಿಲ್ಲ.ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಸೀಟು ಪಡೆಯಲು 650 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಬೇಕಾಗುತ್ತದೆ. ಆದರೆ, ಉತ್ತಮ ಕಾಲೇಜುಗಳಿಗೆ 690 ಕ್ಕಿಂತ ಹೆಚ್ಚಿನ ಅಂಕಗಳು ಬೇಕಾಗುತ್ತವೆ.

ಬಿಹಾರ ಮತ್ತು ಗುಜರಾತ್‌ನ ಗೋಧ್ರಾದಲ್ಲಿರುವ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ ಎಂದು ಎನ್‌ಟಿಎ ಹೇಳಿದೆ. ಈ ಕೇಂದ್ರಗಳಲ್ಲಿ ತನಿಖೆ ನಡೆಯುತ್ತಿದೆ.

ಕೌನ್ಸೆಲಿಂಗಿಗೆ ತಡೆ ಇಲ್ಲ: ನೀಟ್‌ ಕೌನ್ಸೆಲಿಂಗ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ (ಜೂನ್ 19) ಮತ್ತೆ ನಿರಾಕರಿಸಿದೆ. 10 ನೀಟ್‌ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಜುಲೈ 8 ರಂದು ವಿಚಾರಣೆಗೆ ಬಾಕಿ ಇರುವ ಅರ್ಜಿಯೊಂದಿಗೆ ಸೇರಿಸಿದ್ದು, ʻಪರೀಕ್ಷೆ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ. ನಮಗೆ ಉತ್ತರಗಳು ಬೇಕುʼ ಎಂದು ಹೇಳಿದೆ. 

ಸಿಬಿಐ ತನಿಖೆಗೆ ಆದೇಶಿಸಲು ಸುಪ್ರೀಂ ನಿರಾಕರಿಸಿದೆ. ಆದರೆ, ಶೇ.0.001 ರಷ್ಟು ನಿರ್ಲಕ್ಷ್ಯವನ್ನೂ ಸಹಿಸುವುದಿಲ್ಲ ಎಂದಿದ್ದು, ಎನ್‌ಟಿಎಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಪರೀಕ್ಷೆಯ ಸಮಯದಲ್ಲಿ ಮಾಡಿದ ತಪ್ಪುಗಳಿಗೆ ದೃಢವಾದ ನಿಲುವು ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರು ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ಕೋರಿ, ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್ ಜಾರಿ ಮಾಡಿದೆ.

ಕಾಂಗ್ರೆಸ್ ಮತ್ತು ಎಎಪಿ ಪ್ರತಿಭಟನೆ: ನೀಟ್‌ ಅಭ್ಯರ್ಥಿಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿ, ಜೂನ್ 21 (ಶುಕ್ರವಾರ) ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ನೀಟ್ ಪ್ರಶ್ನೆಪೇಪರ್ ಸೋರಿಕೆ ವಿರುದ್ಧ ಆಮ್‌ ಆದ್ಮಿ ಪಕ್ಷ, ಸತತ ಎರಡನೇ ದಿನವೂ ಪ್ರತಿಭಟನೆ ಮುಂದುವರಿಸಿದೆ. ವಿದ್ಯಾರ್ಥಿಗಳಿಂದ 30 ರಿಂದ 50 ಲಕ್ಷ ರೂ. ವಸೂಲು ಮಾಡಲಾಗಿದೆ ಎಂದು ಎಎಪಿ ಮುಖಂಡರು ಆರೋಪಿಸಿದ್ದಾರೆ. ʻಗೋಧ್ರಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಒಎಂಆರ್ ಶೀಟ್ ಖಾಲಿ ಬಿಡುವಂತೆ ಹೇಳಲಾಯಿತು. ಆನಂತರ ಶಿಕ್ಷಕರು ಒಎಂಆರ್ ಶೀಟ್ ಅನ್ನು ಭರ್ತಿ ಮಾಡಿದರು. ಕೇಂದ್ರ ಸರ್ಕಾರಕ್ಕೆ ಈ ವಿಷಯ ತಿಳಿದಿದೆ. ಹಗರಣವನ್ನು ಮರೆಮಾಡಲು ಪ್ರಯತ್ನಿಸುತ್ತಿದೆ,ʼ ಎಂದು ಆಪ್‌ ಹೇಳಿದೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

Tags:    

Similar News