NEET 2024: ಎಲ್ಲ ಪ್ರಕರಣಗಳನ್ನು ವರ್ಗಾಯಿಸಲು ಸುಪ್ರೀಂ ಸೂಚನೆ

ನೀ‌‌ಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯವಹಾರಗಳ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಕೋರಿ ಹಲವಾರು ಅರ್ಜಿಗಳು ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ. ಈ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮನವಿ ಸಲ್ಲಿಸಿತ್ತು.;

Update: 2024-06-14 08:16 GMT

ನೀಟ್-ಯುಜಿ 2024 ಸಂಬಂಧ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದ ಪ್ರಕರಣಗಳನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸುವಂತೆ ಕೋರಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸಲ್ಲಿಸಿದ ಮನವಿ ಮೇರೆಗೆ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಜೂನ್ 14) ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲದ ಪೀಠವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ವಕೀಲರ ಸಲ್ಲಿಕೆಯನ್ನು ಗಮನಿಸಿತು. ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯವಹಾರದಿಂದ ನೀಟ್‌ ಪರೀಕ್ಷೆ 2024 ರದ್ದುಗೊಳಿಸುವಂತೆ ಕೋರಿ ಹಲವು ಮನವಿಗಳು ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ. 

ನೋಟೀಸ್ ನೀಡಲು ಸೂಚಿಸಿದ ಪೀಠ, ಜುಲೈ 8 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿತು.  1,563 ಅಭ್ಯರ್ಥಿಗಳಿಗೆ ಕೃಪಾಂಕ ನೀಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗಳಿಂದ ಪ್ರಕರಣಗಳನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾ ಯಿಸುವಂತೆ ಕೋರಿ ಸಲ್ಲಿಸಿರುವ ಮೂರು ಅರ್ಜಿಗಳನ್ನು ಹಿಂಪಡೆಯಲು ಬಯಸುವುದಾಗಿ ಎನ್‌ಟಿಎ ನ್ಯಾಯಾಲಯಕ್ಕೆ ತಿಳಿಸಿತು. 

ಸಮಸ್ಯೆ ಇತ್ಯರ್ಥಗೊಂಡಿದ್ದು,ಕೃಪಾಂಕಗಳನ್ನು ರದ್ದುಗೊಳಿಸಿರುವ ಜೂನ್ 13 ರ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಹೈಕೋರ್ಟ್‌ಗಳಿಗೆ ತಿಳಿಸುವುದಾಗಿ ಎನ್‌ಟಿಎ ಪರ ವಕೀಲರು ಹೇಳಿದರು.

ಅಕ್ರಮ ಆರೋಪಕ್ಕೆ ಪ್ರತಿಕ್ರಿಯೆ: 1,563 ಅಭ್ಯರ್ಥಿಗಳಿಗೆ ನೀಡಿದ್ದ ಕೃಪಾಂಕಗಳನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿಗಳು ಮರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಮತ್ತು ಎನ್‌ಟಿಎ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದವು.

ಮೇ 5 ರಂದು 4,750 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸುಮಾರು 24 ಲಕ್ಷ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶವನ್ನು ಜೂನ್ 14ರ ಬದಲು ಜೂನ್ 4 ರಂದೇ ಪ್ರಕಟಿಸಲಾಯಿತು. ಪರೀಕ್ಷೆಯಲ್ಲಿ ಕೃಪಾಂಕ ನೀಡಿಕೆ, ಭ್ರಷ್ಟಾಚಾರವನ್ನು ಆರೋಪಿಸಿ, ಹಲವು ನಗರಗಳಲ್ಲಿ ಪ್ರತಿಭಟನೆ ನಡೆದಿವೆ ಮತ್ತು ಏಳು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದಾರೆ. ಇದು ಎನ್‌ಟಿಎ ಇತಿಹಾಸದಲ್ಲಿ ಮೊದಲ ಘಟನೆ. ಹರಿಯಾಣದ ಫರೀದಾಬಾದ್‌ನ ಕೇಂದ್ರವೊಂದರ ಆರು ಮಂದಿ ಪಟ್ಟಿಯಲ್ಲಿದ್ದಾರೆ. 67 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.

Tags:    

Similar News