NEET- UG 2024| ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು: ಬಂಧಿತ ಅಭ್ಯರ್ಥಿಯಿಂದ ತಪ್ಪೊಪ್ಪಿಗೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ ನಡೆಸಿದ್ದು,ಬಿಜೆಪಿ ಸರ್ಕಾರವು ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದೆ ಎಂದು ಕಾಂಗ್ರೆಸ್ ದೂರಿದೆ.;

Update: 2024-06-20 10:48 GMT

NEET-UG 2024 ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಬಿಹಾರದಲ್ಲಿ ಬಂಧಿಸಿದ ಅಭ್ಯರ್ಥಿ ಸೇರಿದಂತೆ ನಾಲ್ವರು ತಪ್ಪೊಪ್ಪಿ ಕೊಂಡಿದ್ದು, ಈ ಸಂಬಂಧ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡುತ್ತಿದ್ದ ಆರೋಪಗಳು ದೃಢಪಟ್ಟಿವೆ.

ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ಕೇಂದ್ರ ಶಿಕ್ಷಣ ಸಚಿವರು ನಿರಾಕರಿಸುತ್ತಿದ್ದಾರೆ. 

ಬಿಹಾರದಲ್ಲಿ ನೀಟ್ ಅಭ್ಯರ್ಥಿ ಅನುರಾಗ್ ಯಾದವ್, ಅವರ ಚಿಕ್ಕಪ್ಪ ಸಿಕಂದರ್ ಪ್ರಸಾದ್ ಯಾದವೇಂದು, ನಿತೀಶ್ ಕುಮಾರ್ ಮತ್ತು ಅಮಿ ತ್ ಆನಂದ್ ಅವರನ್ನು ಬಂಧಿಸಲಾಗಿದೆ. ಅಮಿತ್‌ ಆನಂದ್‌ ಅವರಿಂದ ಯಾದವೇಂದು ಪ್ರಶ್ನೆಪತ್ರಿಕೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. 

ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಕೇಳಲಾಗಿದೆ: ಪರೀಕ್ಷೆಯ ಹಿಂದಿನ ದಿನ ನಾನು ಮತ್ತು ಇತರ ಮೂವರು ಅಭ್ಯರ್ಥಿಗಳು ತಮ್ಮ ಚಿಕ್ಕಪ್ಪನಿಂದ ಪ್ರಶ್ನೆಪತ್ರಿಕೆ ಪಡೆದಿದ್ದು, ಅದನ್ನು ಕಂಠಪಾಠ ಮಾಡಿದೆವು ಎಂದು ಅನುರಾಗ್ ಯಾದವ್ ಪೊಲೀಸರಿಗೆ ತಿಳಿಸಿದ್ದಾರೆ. ಮರುದಿನ ಪರೀಕ್ಷೆಯಲ್ಲಿ ಅದೇ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಹೇಳಿದರು. 

ʻಪರೀಕ್ಷೆಯ ನಂತರ ಪೊಲೀಸರು ನನ್ನನ್ನು ಬಂಧಿಸಿದರು. ನಾನು ನನ್ನ ಅಪರಾಧವನ್ನು ಒಪ್ಪಿಕೊಂಡೆ,ʼ ಎಂದು ಅನುರಾಗ್ ಹೇಳಿದ್ದಾರೆ. 

ಯಾವುದೇ ಪರೀಕ್ಷೆಯ ಪತ್ರಿಕೆ ಸೋರಿಕೆ ಆಗಬಹುದು: ದಾನಪುರ ಪುರಸಭೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿರುವ ಅನುರಾಗ್ ಅವರ ಚಿಕ್ಕಪ್ಪ ಯಾದವೇಂದು‌, ಆರೋಪಿಗಳಾದ ನಿತೀಶ್ ಮತ್ತು ಅಮಿತ್ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಬಹುದು. ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ 30-32 ಲಕ್ಷ ರೂ. ಶುಲ್ಕ ವಿಧಿಸುವುದಾಗಿ ಹೇಳಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಾನು ಪ್ರತಿ ಆಕಾಂಕ್ಷಿಯಿಂದ 10 ಲಕ್ಷ ರೂ. ಹೆಚ್ಚುವರಿ ಶುಲ್ಕ ಪಡೆದಿದ್ದೇನೆ ಎಂದು ಯಾದವೇಂದು ಹೇಳಿದ್ದಾರೆ. 

ಪರೀಕ್ಷೆಯ ಮಾರನೇ ದಿನ ವಾಹನ ತಪಾಸಣೆ ವೇಳೆ ವಿದ್ಯಾರ್ಥಿಗಳ ಪರೀಕ್ಷೆಯ ಪ್ರವೇಶಪತ್ರದೊಂದಿಗೆ ಅವರು ಪೊಲೀಸರಿಗೆ ಸಿಕ್ಕಿಬಿದ್ದರು. ವಿಚಾರಣೆ ವೇಳೆ ಅಪರಾಧವನ್ನು ಒಪ್ಪಿಕೊಂಡರು. 

ಬಿಹಾರ ಪೊಲೀಸರಿಂದ ವರದಿ: ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ (ಜೂನ್ 19) ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕದಿಂದ ವರದಿ ಕೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕಾಂಗ್ರೆಸ್‌ ಟೀಕೆ: ಯುಜಿಸಿ-ನೆಟ್ ಪರೀಕ್ಷೆಯನ್ನು ಸರ್ಕಾರ ಬುಧವಾರ ರದ್ದುಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ʻಪರೀಕ್ಷಾ ಪೆ ಚರ್ಚಾʼ ಎಂದು ಕರೆಯುವ ತಮಾಶಾ ನಡೆಸುತ್ತಾರೆ. ಆದರೆ, ಅವರ ಸರ್ಕಾರಕ್ಕೆ ಸೋರಿಕೆ ಮತ್ತು ವಂಚನೆಗಳಿಲ್ಲದೆ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ. 

ʻಸೋರಿಕೆ ಬಗ್ಗೆ ಮಾತನಾಡುತ್ತೀರಾ?ʼ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದೆ. 

ನೀಟ್-ಯುಜಿ 2024 ಪರೀಕ್ಷೆ‌ ಗಂಭೀರ ಪ್ರಶ್ನೆಗಳನ್ನು ಎದುರಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ನೆಟ್‌ ರದ್ದು: ʻರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ)ಯ ಸಮಗ್ರತೆ ಅನುಮಾನಾಸ್ಪದವಾಗಿದೆ,ʼ ಎಂದು ಅವರು ಹೇಳಿದರು. ʻನಿನ್ನೆಯಷ್ಟೇ ನಡೆದಿದ್ದ ಯುಜಿಸಿ-ನೆಟ್‌ನ್ನು ರಾತ್ರಿ ರದ್ದುಪಡಿಸಲಾಗಿದೆ ,ʼ ಎಂದು ರಮೇಶ್ ಹೇಳಿದ್ದಾರೆ. 

ಯುಜಿಸಿ-ನೆಟ್ ಪರೀಕ್ಷೆಯ ಸಮಗ್ರತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ ತಡರಾತ್ರಿ (ಜೂನ್ 19) ರದ್ದು ಆದೇಶ ಹೊರಡಿಸಿದೆ.

ತೇಜಸ್ವಿ ಯಾದವ್‌ ಅವರತ್ತ ಬೆರಳು: ಏತನ್ಮಧ್ಯೆ ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಸಹಾಯಕ ಪೇಪರ್ ಸೋರಿಕೆ ಮತ್ತು ನೀಟ್-ಯುಜಿ G 2024 ಅಕ್ರಮದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೇಜಸ್ವಿ ಯಾದವ್ ಅವರ ಸಹಾಯಕ ಪ್ರೀತಮ್ ಕುಮಾರ್ ಅವರು ಬಿಹಾರ ರಸ್ತೆ ನಿರ್ಮಾಣ ವಿಭಾಗದ (ಆರ್‌ಸಿಡಿ) ಉದ್ಯೋಗಿಗೆ ಕರೆ ಮಾಡಿ, ಎಂಜಿನಿಯರ್ ಸಿಕಂದರ್ ಪ್ರಸಾದ್ ಯಾದವೇಂದು ಅವರಿಗೆ ಕೊಠಡಿಯನ್ನು ಕಾಯ್ದಿರಿಸಲು ಹೇಳಿದರು. ಯಾದವೇಂದು ಈ ಹಿಂದೆ ಮಂತ್ರಿಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದರು.

ಸೋದರಳಿಯ ನೀಟ್‌ ಅಭ್ಯರ್ಥಿ ಅನುರಾಗ್ ಯಾದವ್, ಅವರ ತಾಯಿ ಮತ್ತು ಇತರ ಸಹಚರರನ್ನು ಪಾಟ್ನಾದ ಸರ್ಕಾರಿ ಬಂಗಲೆಯಲ್ಲಿ ಉಳಿದುಕೊಳ್ಳಲು ಶಿಫಾರಸು ಮಾಡಿದ್ದೆ ಎಂದು ಯಾದವೇಂದು ಹೇಳಿದ್ದರು. ಅವರು ಸದ್ಯ ಜೈಲಿನಲ್ಲಿದ್ದಾರೆ.

ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ ಸರ್ಕಾರ: ಸಿಯುಇಟಿ (ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ)ಯನ್ನು ಹಾಳುಗೆಡವುವ ಮೂಲಕ ಸರ್ಕಾರ 12 ನೇ ತರಗತಿಯ ಪರೀಕ್ಷೆಗಳನ್ನು ಅಪಹಾಸ್ಯ ಮಾಡಿದೆ ಎಂದು ರಮೇಶ್ ಹೇಳಿದರು.

ʻಎನ್‌ಸಿಇಆರ್‌ಟಿ, ಯುಜಿಸಿ ಮತ್ತು ಸಿಬಿಎಸ್‌ಇಗಳ ವೃತ್ತಿಪರತೆ ನಾಶವಾಗಿದೆ,ʼ ಎಂದು ಪ್ರತಿಪಾದಿಸಿದರು.

ʻ2020 ರ ಹೊಸ ಶಿಕ್ಷಣ ನೀತಿಯು ದೇಶದ ಶಿಕ್ಷಣ ವ್ಯವಸ್ಥೆಯನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವುದಕ್ಕಿಂತ ಹೆಚ್ಚಾಗಿ ನಾಗ್ಪುರ ಶಿಕ್ಷಣ ನೀತಿ 2020 ಆಗಿ ಕಾರ್ಯನಿರ್ವಹಿಸುತ್ತದೆʼ ಎಂದು ಅವರು ಆರೋಪಿಸಿದರು.

ʻಇದು ಎಂಟೈರ್‌ ಪೊಲಿಟಿಕಲ್‌ ಸೈನ್ಸ್‌ ನಲ್ಲಿ ಎಂಎ ಪಡೆದವರ ಪರಂಪರೆ. ಅವರು ಎಂದಾದರೂ 'ಸೋರಿಕೆ ಬಗ್ಗೆ ಮಾತಾಡುತ್ತಾರಾ?ʼ ಎಂದು ರಮೇಶ್ ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ಸರ್ಕಾರ: ಯುಜಿಸಿ-ನೆಟ್‌ ರದ್ದಾದ ನಂತರ ಕಾಂಗ್ರೆಸ್, ಮೋದಿ ಸರ್ಕಾರವನ್ನು ʻಪೇಪರ್ ಲೀಕ್ ಸರ್ಕಾರʼ ಎಂದು ಕರೆ ದಿದ್ದು, ಶಿಕ್ಷಣ ಸಚಿವರು ಇದರ ಹೊಣೆಗಾರಿಕೆ ತೆಗೆದುಕೊಳ್ಳುತ್ತಾರೆಯೇ? ಎಂದು ಕೇಳಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 'ನೀಟ್ ಪರೀಕ್ಷೆಯ ಚರ್ಚೆಯನ್ನು ಪ್ರಧಾನಿ ಯಾವಾಗ ನಡೆಸುತ್ತಾರೆ?' ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಉತ್ತರದಾಯಿತ್ವವನ್ನು ನಿಶ್ಚಯಿಸಬೇಕೆಂದು ಒತ್ತಾಯಿಸಿದರು.

Tags:    

Similar News