ಎನ್‌ಡಿಎ ಹಿರಿಯ ನಾಯಕರು ಹೊಸ ಸರ್ಕಾರದ ವಿವರಗಳನ್ನು ಚರ್ಚಿಸಲು ಬುಧವಾರ ದೆಹಲಿಯಲ್ಲಿ ಸಭೆ ನಡೆಸಿದರು.
ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಗಳಿಸಿದ ಒಂದು ದಿನದ ನಂತರ, ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಅಧಿಕಾರವನ್ನು ಪ್ರಾರಂಭಿಸುವ ಕುರಿತು ಚರ್ಚೆ ನಡೆಯಿತು.
ಸಮ್ಮಿಶ್ರ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿರುವ ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ)ದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ಬಿಜೆಪಿ ಮುಖ್ಯಸ್ಥರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ʻನಾವು ಎನ್‌ಡಿಎಯೊಂದಿಗೆ ಇದ್ದೇವೆ ಮತ್ತು ಹೊಸ ಸರ್ಕಾರದ ವಿವರಗಳನ್ನು ಚರ್ಚಿಸಲು ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಹೋಗುವುದಾಗಿ ಚಂದ್ರಬಾಬು ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದ್ದರು.
ಲೋಕಸಭೆಯಲ್ಲಿ ಎನ್‌ಡಿಎ 272 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದ್ದರೂ, ಬಿಜೆಪಿ 2014 ರಿಂದ ಮೊದಲ ಬಾರಿಗೆ ಮ್ಯಾಜಿಕ್ ಸಂಖ್ಯೆಯಿಂದ ಹಿಂದೆ ಬಿದ್ದಿದೆ. ಸರ್ಕಾರ ರಚನೆಗೆ ತನ್ನ ಮಿತ್ರಪಕ್ಷಗಳನ್ನು ಅವಲಂಬಿಸಿದೆ.
ಟಿಡಿಪಿ, ಜೆಡಿಯು, ಮಹಾರಾಷ್ಟ್ರ ಶಿವಸೇನೆ(ಸಿಎಂ ಏಕನಾಥ್ ಶಿಂಧೆ ನೇತೃತ್ವ) ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್) ಕ್ರಮವಾಗಿ 16, 12, 7 ಮತ್ತು 5 ಸ್ಥಾನಗಳನ್ನು ಗೆದ್ದಿದ್ದು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕ ಕುರಿತ ಯಾವುದೇ ಮಾತು ನಡೆದಿಲ್ಲ. ಆದರೆ, ಹೊಸ ಸರ್ಕಾರದ ರೂಪುರೇಷೆಗಳನ್ನು ತ್ವರಿತವಾಗಿ ರೂಪಿಸಿದರೆ, ಸಭೆ ವಾರಾಂತ್ಯ ನಡೆಯಲಿದೆ ಎಂಬ ಅಭಿಪ್ರಾಯ ಮೈತ್ರಿಕೂಟದ ಕೆಲವು ಸದಸ್ಯರಲ್ಲಿದೆ.
ಟಿಡಿಪಿ ಮತ್ತು ಜೆಡಿಯು ಕೆಲವು ಪ್ರಮುಖ ಖಾತೆಗಳಿಗೆ ಬೇಡಿಕೆ ಇಡುವ ನಿರೀಕ್ಷೆಯಿದೆ. ಏಕೆಂದರೆ, ಅವರ ಬೆಂಬಲ ಸರ್ಕಾರ ರಚನೆ ಮತ್ತು ಉಳಿವಿಗೆ ನಿರ್ಣಾಯಕವಾಗಿದೆ.