ಮೋದಿ ಸರ್ಕಾರದಿಂದ 'ಸಂಶಯಾಸ್ಪದ' ಉದ್ಯೋಗ ದತ್ತಾಂಶ ಬಳಕೆ: ಖರ್ಗೆ
ಎಷ್ಟೇ ಬಿಳಿ ಬಣ್ಣ ಹಚ್ಚಿದರೂ ಲಕ್ಷಗಟ್ಟಲೆ ಉದ್ಯೋಗಾಕಾಂಕ್ಷಿಗಳು ದಿನನಿತ್ಯ ಕಷ್ಟಪಡುತ್ತಿದ್ದಾರೆ ಎಂಬ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.;
ನರೇಂದ್ರ ಮೋದಿ ಸರ್ಕಾರವು ʻಸಾರ್ವಜನಿಕ ಸಂಪರ್ಕಕ್ಕೆ ಸಂಶಯಾಸ್ಪದ ಉದ್ಯೋಗ ದತ್ತಾಂಶʼವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಆದರೆ, ಮರೆಮಾಚುವಿಕೆಯಿಂದ ಲಕ್ಷಗಟ್ಟಲೆ ಉದ್ಯೋಗಾಕಾಂಕ್ಷಿಗಳು ದಿನನಿತ್ಯ ಕಷ್ಟ ಪಡುತ್ತಿರುವ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಂಬೈ ಪೊಲೀಸರು ಮಹಿಳಾ ಕಾನ್‌ಸ್ಟೆಬಲ್‌ಗಳು ಮತ್ತು ಮಹಿಳಾ ಕಾನ್ಸ್‌ಟೇಬಲ್ ಚಾಲಕರ 1,257 ಹುದ್ದೆಗಳಿಗೆ 1.11 ಲಕ್ಷ ಅರ್ಜಿ ಸ್ವೀಕರಿಸಿದ್ದಾರೆ ಎಂಬ ವರದಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಖರ್ಗೆ ಅವರು, ಮೋದಿ ಸರ್ಕಾರದ ಆಡಳಿತದಲ್ಲಿ ನಿರುದ್ಯೋಗ ದೊಡ್ಡ ಶಾಪವಾಗಿದೆ ಎಂದು ಹೇಳಿದರು.
ಕಠಿಣ ಪರಿಸ್ಥಿತಿ: ʻಮೋದಿ ಸರ್ಕಾರವು ಉದ್ಯೋಗ ಕುರಿತ ಸಂಶಯಾಸ್ಪದ ದತ್ತಾಂಶವನ್ನು ಬಳಸುತ್ತಿದೆ. 'ಪಾವತಿಯಿಲ್ಲದ ಕೆಲಸ' ಮತ್ತು 'ವಾರಕ್ಕೆ ಒಂದು ಗಂಟೆ ಕೆಲಸʼವನ್ನು ಎಣಿಸುವ ಸಂಖ್ಯೆಯನ್ನು ಉಬ್ಬಿಸುವ ಹಾಸ್ಯಾಸ್ಪದ ಸಾರ್ವಜನಿಕ ಸಂಪರ್ಕ ಚಟುವಟಿಕೆಯಾಗಿ ಪರಿಣಮಿಸಿದೆ,ʼ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ 1,257 ಕಾನ್‌ಸ್ಟೆಬಲ್ ಹುದ್ದೆಗಳಿಗೆ 1.11 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.ಇವರಲ್ಲಿ ಅನೇಕರು ಅಂಬೆಗಾಲಿಡುವ ಮಕ್ಕಳೊಂದಿಗೆ ಪಾದಚಾರಿ ಮಾರ್ಗದಲ್ಲಿ ರಾತ್ರಿ ಕಳೆಯುವಂತೆ ಮಾಡಲಾಗಿದೆ. ಇದು ನಿರುದ್ಯೋಗದ ಕಠೋರ ಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಸೂರತ್‌ನಲ್ಲಿ ಬಿಕ್ಕಟ್ಟು: ಗುಜರಾತಿನ ವಜ್ರ ಕಾರ್ಮಿಕರ ಸಂಘಟನೆ ಜುಲೈ 15 ರಂದು ಪ್ರಾರಂಭಿಸಿದ ಆತ್ಮಹತ್ಯೆ ಸಹಾಯವಾಣಿಗೆ ಉದ್ಯೋಗ ಕಳೆದುಕೊಂಡವರು ಅಥವಾ ಕಡಿಮೆ ವೇತನ ಪಡೆಯುತ್ತಿರುವವರಿಂದ 1,600 ಕ್ಕೂ ಕರೆಗಳು ಬಂದಿವೆ. ಸೂರತ್‌ನ ಪ್ರಸಿದ್ಧ ವಜ್ರ ಉದ್ಯಮ ಹಿಂಜರಿತವನ್ನು ಎದುರಿಸುತ್ತಿದೆ. ಸಂಸ್ಥೆಗಳು ತಮ್ಮ 50,000 ಉದ್ಯೋಗಿಗಳಿಗೆ ʻ10 ದಿನಗಳ ರಜೆʼ ಘೋಷಿಸಿವೆ ಎಂದು ಹೇಳಿದರು.
ಕೆಲವು ಉದ್ಯೋಗಗಳು, ಹಲವು ಆಕಾಂಕ್ಷಿಗಳು: ಕಳೆದ ತಿಂಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಲೋಡರ್‌ಗಳ 2,216 ಹುದ್ದೆಗಳಿಗೆ 25,000 ಉದ್ಯೋಗಾಕಾಂಕ್ಷಿಗಳು ಬಂದಿದ್ದರು. ಗುಜರಾತಿನ ಭರೂಚ್‌ನ ಖಾಸಗಿ ಕಂಪನಿಯೊಂದರ 10 ಉದ್ಯೋಗಕ್ಕೆ 1,800 ಜನ ಬಂದು ಕಾಲ್ತುಳಿತದ ಸಾಧ್ಯತೆ ಸೃಷ್ಟಿಯಾಗಿತ್ತು. ಮೋದಿ ಸರಕಾರವು ಎಷ್ಟೇ ಬಿಳಿ ಬಣ್ಣ ಹಚ್ಚಿದರೂ, ನಿರುದ್ಯೋಗ ಸಮಸ್ಯೆಯೆಂಬ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಎಂಬ ಬಿಜೆಪಿಯ ʻಜುಮ್ಲಾʼ ಭಾರತೀಯರಿಗೆ ಮಾಡಿದ ನಾಚಿಕೆಯಿಲ್ಲದ ದ್ರೋಹ ಎಂದು ಖರ್ಗೆ ಹೇಳಿದರು.