ಎನ್‌ ಡಿಎ 3.0: ಖಾತೆ ಹಂಚಿಕೆಯಲ್ಲಿ ನಿರಂತರತೆ ಕಾಯ್ದುಕೊಂಡ ಪ್ರಧಾನಿ

ಮೋದಿಯವರ ಯಥಾಸ್ಥಿತಿಯ ಸಚಿವ ಸಂಪುಟವು ತಾವು ಮತ್ತು ಹಿಂದಿನ ಸರ್ಕಾರದ ಇತರ ಪ್ರಮುಖ ಸಚಿವರು ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಳ್ಳಲು ಪ್ರಧಾನ ಮಂತ್ರಿಯವರ ನಿರಾಕರಣೆಯನ್ನು ತೋರಿಸು ತ್ತದೆ.18ನೇ ಲೋಕಸಭೆಯಲ್ಲಿಇಂಡಿಯ ಒಕ್ಕೂಟದ 234 ಸಂಸದರಿದ್ದಾರೆ. ಆದರೆ, ಮೋದಿ ಅವರು ಸಮನ್ವಯ ದ ಬದಲು ಸಂಘರ್ಷವನ್ನು ಬಯಸುತ್ತಾರೆ ಎಂಬುದಕ್ಕೆ ಸಚಿವ ಸ್ಥಾನಗಳ ಹಂಚಿಕೆ ತೋರಿಸುತ್ತದೆ.;

Update: 2024-06-11 11:42 GMT

ಪ್ರಧಾನಿ ನರೇಂದ್ರ ಮೋದಿಯವರ ಮಂತ್ರಿಮಂಡಲವು ನಿರಂತರತೆ, ಬದಲಾವಣೆ ಮತ್ತು ರಾಜಿಗಳ ಅಸಮ ಮಿಶ್ರಣ ಎನ್ನಬಹುದಾದರೆ, 72 ಸಚಿವರಿಗೆ, ವಿಶೇಷವಾಗಿ 30 ಕ್ಯಾಬಿನೆಟ್ ದರ್ಜೆ ಸಚಿವರಿಗೆ, ಹಂಚಲಾದ ಖಾತೆಗಳು ಯಥಾಸ್ಥಿತಿ ಕಾಯ್ದುಕೊಳ್ಳುವಿಕೆಯ ಪ್ರಯತ್ನವಾಗಿದೆ.

'ಭಾರಿ ನಾಲ್ವರುʼಗಳಲ್ಲಿ ನಂಬಿಕೆ: ಹಿಂದಿನ ಸಂಪುಟದಲ್ಲಿದ್ದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಎಸ್. ಜೈಶಂಕರ್ ಅವರನ್ನು ಕ್ರಮವಾಗಿ ರಕ್ಷಣೆ, ಗೃಹ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರ ಸ್ಥಾನದಲ್ಲಿ ಉಳಿಸಿಕೊಂಡ ಮೋದಿ ಅವರ ನಡೆ ಕೇವಲ ನಿರಂತರ ವಿಶ್ವಾಸವನ್ನು ಮಾತ್ರವಷ್ಟೇ ಸೂಚಿಸಿಲ್ಲ. ಬಿಜೆಪಿಯ ಬಹುಮತವನ್ನುಗಮನಾರ್ಹವಾಗಿ ಕಡಿಮೆಗೊಂಡ ಪ್ರಸ್ತುತ ಸಂದರ್ಭದಲ್ಲಿ ಖಾತೆಗಳ ಹಂಚಿಕೆಯ ಇಂತಹ ಮೌಲ್ಯಮಾಪನ ಸರಳ ಮತ್ತು ದಾರಿ ತಪ್ಪಿಸುವ ಪ್ರಯತ್ನ ಆಗಿರಲಿದೆ. 

ಬದಲಾಗಿ, ಸೋಮವಾರ ನಡೆದ ಖಾತೆ ಹಂಚಿಕೆ ಚಟುವಟಿಕೆಯು ನರೇಂದ್ರ ಮೋದಿಯವರ ಹೆಗ್ಗುರುತುಗಳನ್ನು ಒಳಗೊಂಡಿದೆ; ಕ್ಷಮೆ ಯಾಚಿಸದ, ಪ್ರತಿಭಟನೆಯ, ರಾಜಿಯಾಗದ ಮತ್ತು ಮುಖಾಮುಖಿಯಾಗಲು ಸದಾ ಸಿದ್ಧವಾಗಿರುವ ಮನಸ್ಥಿತಿ. ಮೋದಿ 3.0 ಅಥವಾ ನಿಖರವಾಗಿ ಹೇಳಬೇಕೆಂದರೆ ಎನ್‌ಡಿಎ.3 ಸರ್ಕಾರದ ಸಚಿವ ಸಂಪುಟವು ತಾವು ಮತ್ತು ತಮ್ಮ ಸರ್ಕಾರದ ಪ್ರಮುಖರು ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಳ್ಳಲು ಪ್ರಧಾನಿ ಅವರ ನಿರಾಕರಣೆಯಾಗಿದೆ; ಅದು ಆರ್ಥಿಕತೆ, ಸರ್ಕಾರದ ನಿರ್ವಹಣೆ, ಸ್ವತಂತ್ರ ಸಂಸ್ಥೆಗಳು ವಿಶೇಷವಾಗಿ ವಿವಿಧ ಕೇಂದ್ರೀಯ ತನಿಖಾ ಸಂಸ್ಥೆಗಳ ನೈತಿಕತೆ, ವಿದೇಶಾಂಗ ನೀತಿ ಅಥವಾ ದೇಶದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವೈಫಲ್ಯವನ್ನು ಒಪ್ಪಿಕೊಳ್ಳದ ಮನಸ್ಥಿತಿಯ ಪ್ರತೀಕವಾಗಿದೆ. 

ಮೋದಿ ಅವರು ಮಿತ್ರ ಪಕ್ಷಗಳಿಗೆ, ವಿಶೇಷವಾಗಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿ (ಯು) ಗೆ ನೀಡಬೇಕಿರುವ ರಿಯಾಯಿತಿಗಳ ಮೂಲಕ ನೋಡಿದಾಗ, ಸರ್ಕಾರ ಮೊದಲ ಬಾರಿಗೆ ಎರಡು ಊರುಗೋಲುಗಳ ನೆರವಿನಲ್ಲಿ ನಿಂತಿರುವುದು ಕಾಣುತ್ತದೆ.

ಎನ್‌ಡಿಎ ಮಿತ್ರಪಕ್ಷಗಳ ಅಪಹಾಸ್ಯ: ಇಂಡಿಯ ಒಕ್ಕೂಟದ ಸದಸ್ಯರು ಎನ್ಡಿಎ ಮಿತ್ರಪಕ್ಷಗಳನ್ನು ಅಪಹಾಸ್ಯ ಮಾಡುವುದು ಆಶ್ಚರ್ಯವೇನಲ್ಲ; ವಿಶೇಷವಾಗಿ ಟಿಡಿಪಿ ಮತ್ತು ಜೆಡಿ (ಯು) ಕೋಟಾದ ಮಂತ್ರಿಗಳು ನಗಣ್ಯ ಖಾತೆಗಳನ್ನು ಹೊಂದಿದ್ದಾರೆ. ಬಿಜೆಪಿಯು ಬಹುತೇಕ ಪ್ರಮುಖ ಖಾತೆಗಳನ್ನು ಹಿಡಿದುಕೊಂಡಿದೆ.

ಟಿಡಿಪಿಯ ಕೆ. ರಾಮಮೋಹನ್ ನಾಯ್ಡು ಅವರಿಗೆ ನಾಗರಿಕ ವಿಮಾನಯಾನ, ಜೆಡಿಯುನ ರಾಜೀವ್ ರಂಜನ್ ಸಿಂಗ್ 'ಲಾಲನ್' ಅವರಿಗೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ಪಂಚಾಯತ್ ರಾಜ್ ಸಚಿವ ಸ್ಥಾನ ನೀಡಲಾಗಿದೆ. ಹಿಂದೂಸ್ತಾನ್ ಅವಾಮ್ ಮೋರ್ಚಾ ಸಂಸ್ಥಾಪಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಸಂಸತ್ತಿನಲ್ಲಿ ಅವರ ಪಕ್ಷದ ಏಕೈಕ ಸಂಸದರಾಗಿದ್ದರೂ ಸಂಪುಟ ದರ್ಜೆ ನೀಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಬಹುದು. ಆದರೆ, ಮೋದಿ ಅವರ ಸಂಪುಟದ ಹಿರಿಯ ಸದಸ್ಯರಾದ ಅವರು ಎಂಎಸ್‌ಎಂಇಯಂಥ ಸಾಧಾರಣ ಖಾತೆಯಿಂದ ತೃಪ್ತಿಪಡುತ್ತಾರೆಯೇ? ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆಡಿ(ಎಸ್)ನ ಎಚ್‌.ಡಿ. ಕುಮಾರಸ್ವಾಮಿ ಅವರು ಉಕ್ಕು ಮತ್ತು ಭಾರೀ ಕೈಗಾರಿಕೆ ಹಾಗೂ ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್‌ ಅವರಿಗೆ ಆಹಾರ ಸಂಸ್ಕರಣೆ ಖಾತೆ ನೀಡಲಾಗಿದೆ. 

ಇಂಡಿಯ ಒಕ್ಕೂಟ ಮೋದಿಯವರ ಪಾಲುದಾರರ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತಿದೆ. ಎನ್‌ಡಿಎ ಮಿತ್ರ ಪಕ್ಷಗಳು, ನಾಯ್ಡು ಅವರ ಟಿಡಿಪಿ ಹೊರತುಪಡಿಸಿ, ತಮ್ಮದೇ ಆದ ಚುನಾವಣೆ ಒತ್ತಡಗಳಿಂದ ಸುಮ್ಮನಿವೆ. ಜೆಡಿ(ಯು) ನಾಯಕರೊಬ್ಬರು ದ ಫೆಡರಲ್‌ ಗೆ ಹೇಳಿದಂತೆ, ಮಿತ್ರ ಪಕ್ಷಗಳು ಇಂಡಿಯ ಒಕ್ಕೂಟದ ನಾಯಕರಂತೆ ʻಕಾಯ್ದು ನೋಡುವʼ ನೀತಿ ಅಳವಡಿಸಿಕೊಂಡಿವೆ. ಬಹುಮತವಿಲ್ಲದ ಮೋದಿಯವರು ತಮ್ಮ ಹಿಂದಿನ ಎರಡು ಅವಧಿಗಳಲ್ಲಿ ಮಾಡಿದಂತೆ ಒರಟುತನದ ಸವಾರಿ ಬದಲು ಗೌರವಿಸುತ್ತಾರೆ ಎಂದು ಆಶಿಸುತ್ತಿವೆ.

ಯಾವುದೇ ತಿದ್ದುಪಡಿ ಆಗಿಲ್ಲ: ಬಿಜೆಪಿ ಚುನಾವಣೆಯಲ್ಲಿ 2019 ರ 303 ಸ್ಥಾನಗಳ ಬದಲು 240 ಸ್ಥಾನಗಳಿಗೆ ಕುಸಿದಿದೆ. ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಸಂಕಷ್ಟ, ಅಗ್ನಿವೀರ್ ಯೋಜನೆ, ಸಂವಿಧಾನ, ಸಾಂಸ್ಥಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣದಿಂದ ಮತದಾರರು ಕೋಪಗೊಂಡಿದ್ದರು ಎಂದು ಈಗ ಒಪ್ಪಿಕೊಳ್ಳಲಾಗಿದೆ.

ಈ ಸಮಸ್ಯೆಗಳು ಇಂಡಿಯಾ ಒಕ್ಕೂಟದ ಚುನಾವಣೆ ಸಂಕಥನದ ಆಧಾರ. ಮೋದಿಯವರ ಗೊಂದಲಮಯ ವಿದೇಶಾಂಗ ನೀತಿ, ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾದ ಅತಿಕ್ರಮಣ ಹೆಚ್ಚಳ ಇತ್ಯಾದಿ ವಿಷಯಗಳನ್ನು ವಿರೋಧ ಪಕ್ಷ ಬಳಸಿಕೊಂಡಿದೆ. ಈ ಎಲ್ಲ ಸಮಸ್ಯೆಗಳಿಗೆ ನೇರವಾಗಿ ಹೊಣೆಗಾರರಾಗಿರುವ ಪ್ರತಿಯೊಬ್ಬ ಸಚಿವರನ್ನು ಉಳಿಸಿಕೊಂಡಿರುವ ಪ್ರಧಾನಿ, ಹಿಂದಿನ ಆಡಳಿತದ ವೈಫಲ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದನ್ನು ತೋರಿಸುತ್ತದೆ.

ಬೆಲೆ ಏರಿಕೆ ಮತ್ತು ನಿರುದ್ಯೋಗ ನಿಜವಾದ ಸಮಸ್ಯೆಗಳೆಂಬುದನ್ನು ಒಪ್ಪಲೇ ಸಿದ್ಧವಿಲ್ಲದ, ವಿನಾಶಕಾರಿ ಆರ್ಥಿಕ ನೀತಿ ನಿರ್ಧಾರಗಳ ಮೂಲವಾಗಿದ್ದ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆಗೆ ಮರಳಿದ್ದಾರೆ. ಅಗ್ನಿವೀರ್, ಲಡಾಖ್- ಅರುಣಾಚಲಕ್ಕೆ ಚೀನಾದ ಒಳನುಗ್ಗುವಿಕೆ ಮತ್ತು ಸಶಸ್ತ್ರ ಪಡೆಗಳ ರಾಜಕೀಕರಣದ ಹೊರತಾಗಿಯೂ ರಾಜನಾಥ್ ಮತ್ತೆ ರಕ್ಷಣಾ ಚುಕ್ಕಾಣಿ ಹಿಡಿದಿದ್ದಾರೆ. ರಾಜಕಾರಣಿಯಾಗಿ ಬದಲಾದ ರಾಜತಾಂತ್ರಿಕ ಜೈಶಂಕರ್ ಅವರು ಎಂಇಎಗೆ ವಾಪಸಾಗಿದ್ದಾರೆ. ಅವರ ಕಣ್ಗಾವಲಿನಲ್ಲಿ ದೇಶವು ಹಿಂದಿನ ಮಿತ್ರರು ಮತ್ತು ವಿರೋಧಿಗಳೊಂದಿಗೆ ಆಗಾಗ ಚಕಮಕಿ ನಡೆಸಿತು. ಮಣಿಪುರದ ಅತ್ಯಂತ ಭೀಕರ ಜನಾಂಗೀಯ ನಿರ್ಮೂಲನ ಸಂಘರ್ಷದ ಅಧ್ಯಕ್ಷತೆ ವಹಿಸಿದ್ದ ಷಾ, ಜಮ್ಮು ಮತ್ತು ಕಾಶ್ಮೀರ (ಮತ್ತು ಲಡಾಖ್) ಜನರನ್ನು ಐದು ವರ್ಷ ಕಾಲ ಸೆರೆಯಲ್ಲಿ ಇರಿಸಿದ್ದರು, ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟರು. ಒಕ್ಕೂಟ ವ್ಯವಸ್ಥೆ ಮೇಲಿನ ಪ್ರತಿಯೊಂದು ದಾಳಿಯನ್ನು ಸಮರ್ಥಿಸಿಕೊಂಡಿದ್ದ ಅವರು, ಮತ್ತೆ ಗೃಹ ಸಚಿವರಾಗಿದ್ದಾರೆ.

ಇಂಥದ್ದೇ ಪ್ರವೃತ್ತಿ: ಈ ಲಜ್ಜೆಗೆಟ್ಟ ವಿಕೃತಿಯು ಸರ್ಕಾರದ ದೊಡ್ಡ ನಾಲ್ವರು ಸಚಿವರಿಗೆ ಸೀಮಿತವಾಗಿಲ್ಲ. ಹಿಂದಿನ ಜವಾಬ್ದಾರಿಗಳಿಗೆ ಮರಳಿದ ಇತರ ಮಂತ್ರಿಗಳು, ಹೆಚ್ಚುವರಿ ಖಾತೆಗಳನ್ನು ಹೊಂದಿರುವವರು ಅಥವಾ ಹೊಸ ಹಾಗೂ ಹೆಚ್ಚು ಮಹತ್ವದ ಪಾತ್ರಗಳಿಗೆ ನಿಯೋಜಿಸಲ್ಪಟ್ಟವರು ಕೂಡ ಇದೇ ಪ್ರವೃತ್ತಿ ಹೊಂದಿದವರು.

ರೈಲ್ವೆ ಸಚಿವರಾಗಿದ್ದ ಅಶ್ವನಿ ವೈಷ್ಣವ್ ಅವರ ಅಧಿಕಾರಾವಧಿಯಲ್ಲಿ ಭೀಕರ ಬಾಲಸೋರ್ ರೈಲು ದುರಂತವಲ್ಲದೆ, ಜನದಟ್ಟಣೆ, ರೈಲುಗಳ ವಿಳಂಬ, ಕಳಪೆ ಗುಣಮಟ್ಟದ ಆಹಾರ, ದೊಡ್ಡ ಪ್ರಮಾಣದ ರೈಲು ರದ್ದು, ಹಲವು ರೈಲುಗಳ ಸ್ಥಗಿತ ಇನ್ನಿತರ ರೈಲ್ವೆ ಮೂಲಸೌಕರ್ಯ ಮತ್ತು ಸೇವೆಗಳ ಕುಸಿತಕ್ಕೆ ಸಾಕ್ಷಿಯಾಗಿದ್ದರು. ಅವರು ಮತ್ತೊಮ್ಮೆ ರಾಷ್ಟ್ರದ ಜೀವನಾಡಿಯನ್ನು ಮುನ್ನಡೆಸುತ್ತಾರೆ. ಅಷ್ಟಲ್ಲದೆ, ಹೆಚ್ಚುವರಿ ಯಾಗಿ ಮಾಹಿತಿ-ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನದಂಥ ನಿರ್ಣಾಯಕ ಸಚಿವಾಲಯಗಳು ಅವರಿಗೆ ಲಭ್ಯವಾಗಿವೆ.

18ನೇ ಲೋಕಸಭೆಯಲ್ಲಿಇಂಡಿಯ ಒಕ್ಕೂಟದ 234 ಸಂಸದರಿದ್ದಾರೆ. ಆದರೆ, ಮೋದಿ ಅವರು ಸಮನ್ವಯದ ಬದಲು ಸಂಘರ್ಷವನ್ನು ಬಯಸುತ್ತಾರೆ ಎಂಬುದಕ್ಕೆ ಸಚಿವ ಸ್ಥಾನಗಳ ಹಂಚಿಕೆ ತೋರಿಸುತ್ತದೆ.

ಸಂಸದೀಯ ವ್ಯವಹಾರಗಳ ಸಚಿವರಾಗಿ ಕಿರಣ್ ರಿಜಿಜು ಮತ್ತು ಉಪನಾಯಕರಾಗಿ ಅರ್ಜುನ್ ರಾಮ್ ಮೇಘವಾಲ್ ಅವರ ಆಯ್ಕೆಯನ್ನು ಹೇಗೆ ವಿವರಿಸಬಹುದು? ಮೋದಿ 2.0 ಅವಧಿಯಲ್ಲಿ ಕೆಲ ಕಾಲ ಕಾನೂನು ಸಚಿವರಾಗಿದ್ದ ರಿಜಿಜು, ಉನ್ನತ ನ್ಯಾಯಾಂಗವನ್ನು ಎದುರು ಹಾಕಿಕೊಂಡರು; ಆನಂತರ ಭೂ ವಿಜ್ಞಾನ ಸಚಿವಾಲಯಕ್ಕೆ ತೆರಳಿದರು. ರಿಜಿಜು ಮತ್ತು ಮೇಘವಾಲ್ ಇಬ್ಬರೂ ಪ್ರತಿಪಕ್ಷಗಳನ್ನು ಕೆಟ್ಟದಾಗಿ ದೂಷಿಸುತ್ತಾರೆ. ಖಜಾನೆ ಮತ್ತು ಪ್ರತಿಪಕ್ಷದ ಬಲಾಬಲ ತೆಳುವಾಗಿರುವ ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿಶ್ವಾಸವನ್ನು ಗಳಿಸಬಲ್ಲ ಸಂಸದೀಯ ವ್ಯವಹಾರಗಳ ಸಚಿವರ ಅಗತ್ಯವಿತ್ತು. ರಿಜಿಜು ಹೆಮ್ಮೆ ಪಡುವ ಆಯ್ಕೆಯಲ್ಲ.

ಸಾಧನೆ ಮಾಡದವರಿಗೆ ಎರಡನೇ ಅವಕಾಶ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಐದು ವರ್ಷಗಳ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯೊಂದಿಗೆ ಕೇಂದ್ರ ಸಂಪುಟಕ್ಕೆ ಮರಳಿದ್ದಾರೆ. ಮೊದಲ ಅವಧಿಯಲ್ಲಿ ಅವರು ಗುರುತು ಮೂಡಿಸುವಲ್ಲಿ ವಿಫಲರಾಗಿದ್ದರು. ಪಿಯುಷ್ ಗೋಯಲ್ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಮರಳಿದ್ದಾರೆ. ಭೂಪೇಂದ್ರ ಯಾದವ್ ಪರಿಸರ ಸಚಿವಾಲಯಕ್ಕೆ ಹಿಂತಿರುಗಿದ್ದಾರೆ; ಬೃಹತ್ ಗಣಿಗಾರಿಕೆ ಮತ್ತು ಭಾರಿ ಮೂಲ‌ಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಭಾರಿ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಿದ್ದರು. ಪೆಟ್ರೋಲಿಯಂ ಸಚಿವರಾಗಿದ್ದ ಹರ್ದೀಪ್ ಪುರಿ, ಇಂಧನ ಬೆಲೆ ಹೆಚ್ಚಳದ ಬಗ್ಗೆ ಏನೂ ಮಾಡಲಿಲ್ಲ. ಹರಿಯಾಣ ಮುಖ್ಯಮಂತ್ರಿಯಾಗಿದ್ದ ಎಂ.ಎಲ್. ಖಟ್ಟರ್, ವಸತಿ ಮತ್ತು ಇಂಧನ ಸಚಿವಾಲಯಕ್ಕೆ ಬರಲಿದ್ದಾರೆ.

ಬೆಳ್ಳಿ ರೇಖೆಗಳಿವೆ: ಈ ದುರದೃಷ್ಟಕರ ಕಥೆಯಲ್ಲಿ ಬೆಳ್ಳಿರೇಖೆಗಳೆಂದರೆ, ನಿತಿನ್‌ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನೀಡಲಾದ ಜವಾಬ್ದಾರಿಗಳು. ಕಳೆದ ದಶಕದಲ್ಲಿ ದೇಶದ ರಸ್ತೆಗಳು ಮತ್ತು ಹೆದ್ದಾರಿಗಳ ಜಾಲದ ವಿಸ್ತರಣೆಗೆ ಕಾರಣರಾಗಿರುವ ಗಡ್ಕರಿ ಅವರು ಮತ್ತೆ ಅದೇ ಇಲಾಖೆಗೆ ಮರಳಿದ್ದು, ಚೌಹಾಣ್ ಅವರು ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ಹೊಸ ಸಚಿವರಾಗಲಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಚೌಹಾಣ್ ಅವರು ಕೃಷಿ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುಪಿಎ-2 ಅವಧಿಯಲ್ಲಿ ಕೇಂದ್ರದ ಕೃಷಿ ಪ್ರಶಸ್ತಿಯನ್ನು ಮಧ್ಯಪ್ರದೇಶ ಹಲವು ಬಾರಿ ಸ್ವೀಕರಿಸಿದೆ. 2017 ರ ಮಂಡಸೌರ್ ಗೋಲಿಬಾರಿನಿಂದ ಅವರು ಕಳಂಕಿತರಾದರು(ಪೊಲೀಸರು ಗುಂಡು ಹಾರಿಸಿದಾಗ, ಐದು ರೈತರು ಮೃತಪಟ್ಟರು). ಹರ್ಯಾಣ, ಪಂಜಾಬ್, ಹಿಮಾಚಲಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚು ಅಪಖ್ಯಾತಿಗೊಳಗಾಗಿರುವ ಸಮಯದಲ್ಲಿ ಚೌಹಾಣ್‌ ಅವರ ನೇಮಕ ನಡೆದಿದೆ. ಕೃಷಿ ಪ್ರಧಾನ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ನಾಲ್ಕು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 

Tags:    

Similar News